ಬೆಂಗಳೂರು: ರಾಜಕೀಯಕ್ಕೆ ಬಾ ಎಂದರೆ, ಸಹವಾಸವೇ ಬೇಡವೆಂದು ವನವಾಸ ಹೋಗಿದ್ದ ವರನಟನ ಕಥೆ ಇದು…
ಈಗಂತೂ ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ, ಇದಕ್ಕಿಂತಲೂ ಹೆಚ್ಚಿನ ತಾಪಮಾನ 41 ವರ್ಷಗಳ ಹಿಂದೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಣಿಸಿತ್ತು. ಅದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಲ್ಲಿಂದ ಸ್ಪರ್ಧೆ ಮಾಡಿದ್ದ ಕಾಲ. ಏನಾದರೂ ಮಾಡಿ ಇಂದಿರಾ ವಿರುದ್ಧ ರಾಜ್‌ರನ್ನು ಸ್ಪರ್ಧಿಸುವಂತೆ ಮಾಡಬೇಕು ಎಂಬುದು ಕಾಂಗ್ರೆಸ್ಸೇತರ ಪಕ್ಷಗಳ ಆಸೆ. ಇದಕ್ಕಾಗಿಯೇ ರಾಜ್‌ಗೆ ಈ ಪಕ್ಷಗಳ ನಾಯಕರೆಲ್ಲರೂ ದುಂಬಾಲು ಬಿದ್ದಿದ್ದರು. ಚೆನ್ನೈನ ಕೋಡಂಬಾಕಂನಲ್ಲಿದ್ದ
ರಾಜಕುಮಾರ್‌ನನ್ನು ಭೇಟಿಯಾಗುತ್ತಿದ್ದ ರಾಜಕೀಯ ಧುರೀಣರು ರಾಜಕೀಯಕ್ಕೆ ಬರುವಂತೆ ಪೀಡಿಸುತ್ತಲೇ ಇದ್ದರು. ಜತೆಗೆ ಚುನಾವಣೆ ಹತ್ತಿರವಾದಂತೆ ರಾಜ್‌ರನ್ನು ಚುನಾವಣೆಗೆ ನಿಲ್ಲಿಸುವ ಉಮೇದೂ ಹೆಚ್ಚಾಯಿತು. ಇದರಿಂದ ತಪ್ಪಿಸಿಕೊಳ್ಳಲು ಯಾರ ಕಣ್ಣಿಗೂ ಬೀಳದಂತೆ ವನವಾಸಕ್ಕೇ ಹೋಗಿದ್ದರು ರಾಜ್.
ಸಾಮಾನ್ಯ ಜ್ಞಾನಕ್ಕಾಗಿ ಅವರು ಈ ಕ್ರಿಕೆಟ್, ರಾಜಕಾರಣವನ್ನು ಗಮನಿಸೋರು. ಆದರೆ, ರಾಜಕೀಯ ಸುತಾರಾಂ ಇಷ್ಟ ಇರಲಿಲ್ಲ. 1978ರಲ್ಲಿ ರಾಜಕೀಯಕ್ಕೆ ಕರೆತರುವ ಒತ್ತಡ ಯಾವ ಮಟ್ಟಕ್ಕೆ ಬಂದಿತೆಂದರೆ, ನಾಮಿನೇಷನ್ ದಿನ ಹೇಗಾದರೂ ಮಾಡಿ, ರಾಜಕುಮಾರರನ್ನು ಹಿಡಿದುಕೊಂಡಾದರು ಸರಿ, ಸಹಿ ಮಾಡಿಸಬೇಕು ಅನ್ನೋ ಮಟ್ಟಿಗೆ ಬಂದು ಬಿಟ್ಟಿತ್ತು. ಆಗ ವರದಪ್ಪ, ಒಂದು ಐಡಿಯಾ ಮಾಡಿದರು.
ವಿಕ್ರಂ ಶ್ರೀನಿವಾಸರನ್ನು ಜತೆ ಮಾಡಿಕೊಂಡು ರಾಜ್‌ರನ್ನು ನಾಲ್ಕು ದಿನಗಳ ಮಟ್ಟಿಗೆ ರಾಣಿಪೇಟ್‌ನಿಂದ ಸುಮಾರು
21 ಕಿ.ಮೀ ದೂರದ ಕಾಡಿಗೆ ಕರೆದುಕೊಂಡು ಹೋಗಿ ಬಚ್ಚಿಟ್ಟರು. ದಟ್ಟ ಕಾಡಿನ ಮಧ್ಯೆ ಅರಣ್ಯ ಇಲಾಖೆ ಗೆಸ್ಟ್‌ಹೌಸ್
ಇತ್ತು. ಅಲ್ಲಿ ಆಹಾರ ಕೂಡ ಸಿಗುತ್ತಿರಲಿಲ್ಲ. ಜತೆಗಿದ್ದ ವಿಕ್ರಂ ಶ್ರೀನಿವಾಸ್ ಯಾರಿಗೂ ಅನುಮಾನ ಬರದಂತೆ ರಾಣಿಪೇಟ್‌ನಿಂದ ಹಾಲು, ಬನ್, ಬ್ರೆಡ್‌ಗಳನ್ನು ಸರಬರಾಜು ಮಾಡುತ್ತಿದ್ದರು. ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ರಾಜ್‌ಕುಮಾರ್ ವನವಾಸ ಅಂತ್ಯಗೊಂಡಿತು’ ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ನಿರ್ದೇಶಕ ಭಗವಾನ್.
ಅತ್ತ ರಾಜ್‌ಕುಮಾರ್ ಕಾಡಿಗೆ ಹೋದರು, ಇತ್ತ ನಾಡಿನಲ್ಲಿ ತಳಮಳ ಶುರುವಾಯಿತು. ಇನ್ನೊಂದು ಕಡೆ ತಮ್ಮ
ಅಭಿಮಾನಿಗಳ ವಲಯದಿಂದಲೂ ಅಣ್ಣಾವ್ರು ಚುನಾವಣೆಗೆ ನಿಂತರೆ ತಪ್ಪೇನು? ನಿಲ್ಲಲಿ’. ಅನ್ನೋ ಆಂತರಿಕ ಒತ್ತಡ ಕೂಡ
ಜಾಸ್ತಿಯಾಯಿತಂತೆ. ಪೊಲೀಸರು ಕೋಡಂಬಾಕಂನಲ್ಲಿದ್ದ ರಾಜ್‌ಕುಮಾರ್ ಮನೆ ಶೋಧಿಸಿದಾಗ, ಪಾರ್ವತಮ್ಮನವರು,
ರಾಘಣ್ಣ, ಶಿವಣ್ಣ ಇದ್ದ ನೆನಪು.
ಅವರನ್ನು ಪೆರಿಯಾರ್ ಎಲ್ಲಿದ್ದಾರೆ ಅಂತ ವಿಚಾರಿಸಿದ್ದಾರೆ. ಅದಕ್ಕೆ ಪಾರ್ವತಮ್ಮನವರು, ಯಾರೋ ನಿರ್ಮಾಪಕರು ಶೂಟಿಂಗ್ ಅಂತ ಕರೆದೊಯ್ದರು. ಹೀಗೆ ಹೋದರೆ ವಾರಗಟ್ಟಲೆ ಬರೋದಿಲ್ಲ ಅಂತ ಸಮಜಾಯಿಷಿ ನೀಡಿದ್ದಾರೆ. ಅದಕ್ಕೆ ಅವರು, ಎಲ್ಲಿ ಹೋಗಿದ್ದಾರೆ ಹೇಳಿ, ಅಲ್ಲೇ ಹೋಗಿ ನೋಡ್ತೀವಿ’ ಅಂದರಂತೆ. ಆಗ, ಪಾರ್ವತಮ್ಮನವರು, ಊಟಕ್ಕೆ ಅಂತ ಅಕ್ಕಿ, ಬೇಳೆ ತಂದು ಹಾಕ್ತಾರೆ. ನಮಗೆ ಅಷ್ಟೇ ಸಾಕು.
ಅವರು ಎಲ್ಲಿಗೆ ಹೋಗ್ತಾರೆ, ಏನು ಮಾಡ್ತಾರೆ ಅಂತ ಏಕೆ ಬೇಕು? ಎಲ್ಲಿ ಹೋಗಿದ್ದಾರೋ ನಮಗೂ ಗೊತ್ತಿಲ್ಲ ಸ್ವಾಮಿ’ ಅಂತ ಹೇಳಿ ಜಾರಿಕೊಂಡರು. ಅವರ ಮನೆಯಲ್ಲಿ ಹುಡುಕಾಡಿದ ನಂತರ ಮೈಲಾಪುರಂನಲ್ಲಿದ್ದ ನನ್ನ ಇಡೀ ಮನೆ ಜಾಲಾಡಿ ಬರಿಗೈಯಲ್ಲಿ ವಾಪಸ್ಸಾದರು’ ಅಂತ ಮೆಲುಕು ಹಾಕಿದರು ಭಗವಾನ್.
ಇದೇ ಮೊದಲ ಆಫರ್ ಅಲ್ಲ: ರಾಜ್‌ಗೆ ರಾಜಕೀಯಕ್ಕೆ ಬನ್ನಿ ಅಂತ 1978ಕ್ಕೆ ಮುನ್ನ ಕೂಡ ಆಫರ್ ಬಂದಿತ್ತು. ಆ ಹೊತ್ತಿಗೆ
ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು, ತಮಿಳುನಾಡಿನಲ್ಲಿ ಎಂಜಿಆರ್, ರಾಜಕೀಯಕ್ಕೆ ಇಳಿದಿದ್ದರು. ಹಾಗಾಗಿ, ಎಲ್ಲರ ಕಣ್ಣು ರಾಜ್ ಕುಮಾರ್ ಅವರ ಮೇಲೆ ತಿರುಗಿತ್ತಂತೆ.
ಒಂದು ದಿನ ಕೋಡಂಬಾಕಂ ಮನೆಯಲ್ಲಿ ರಾಜ್‌ಕುಮಾರ್ ಜತೆ ತಿಂಡಿ ತಿನ್ನುತ್ತಾ ಕೂತಿದ್ದೆ. ಒಂದಷ್ಟು ರಾಜಕಾರಣಿಗಳ
ದಂಡು ಬಂತು. ಅವರಿಗೆ ತಿಂಡಿ, ಕಾಫಿ ಉಪಚಾರ ಆಯಿತು. ನಂತರ ಮಾತಿಗೆ ಇಳಿದವರು ಅಣ್ಣಾ, ನೀವು ರಾಜಕೀಯಕ್ಕೆ
ಏಕೆ ಬರಬಾರದು? ಆ ಮೂಲಕ ಜನ ಸೇವೆ ಏಕೆ ಮಾಡಬಾರದು?’ ಅಂತೆಲ್ಲ ಕೇಳಿದಾಗ ಅವರಿಗೆ ಸ್ವಲ್ಪ ಗಾಬರಿಯಾಯಿತು. ಅಲ್ಲ ನೀವು ಏನು ಮಾತಾಡ್ತಾ ಇದ್ದೀರಾ? ಈಜು ಬಾರದವನನ್ನು ನೀರಿಗೆ ಇಳಿಸೋದೆ? ಇದರಿಂದ ಪ್ರಯೋಜನ ಆಗಲ್ಲ’ ಅಂತ ಸಮಾಧಾನ ಮಾಡಿದರು.
ಅವರು, ನೀವು ಯಾವ ಕ್ಷೇತ್ರದಲ್ಲಿ ಬೇಕಾದರು ಈಜ ಬಲ್ಲಿರಿ, ಅಂತೆಲ್ಲ ಹೊಗಳಿದರು. ಅದಕ್ಕೆ ರಾಜ್‌ಕುಮಾರ್ ನೀವು
ಹೀಗೆಲ್ಲ ಹೊಗಳಬೇಡಿ. ನಾನು ಕಲಾವಿದ, ಕಲಾವಿದನಾಗಿ ಇತೇನೆ. ರಾಜಕೀಯ ನನ್ನ ಕ್ಷೇತ್ರವಲ್ಲ. ಅದು ನನಗೆ ಒಗ್ಗೊಲ್ಲ’ ಅಂತೆಲ್ಲ ಹೇಳಿದರೂ ಅವರು ಕೇಳಲಿಲ್ಲ. ಕೊನೆಗೆ ಒಂದೆರಡು ದಿನ ಸಮಯ ಕೊಡಿ. ಯೋಚನೆ ಮಾಡಿ ಹೇಳ್ತೀನಿ ಅಂತ ಅವರ ಮನಸ್ಸಿಗೆ ನೋವು ಮಾಡದೆ ಸಾಗಿಹಾಕಿ, ತಮ್ಮನ ಬಳಿ ಈ ವಿಚಾರ ಚರ್ಚೆ ಮಾಡಿದರು. ವರದಪ್ಪ, ಅಪ್ಪಯ್ಯ ರಾಜಕೀಯ ನಮ್ಮಂಥವರಿಗಲ್ಲ. ಅದರಿಂದ ಆದಷ್ಟು ದೂರ ಇರೋಣ. ದೇವರು ನಮಗೇ ಅಂತ ಕಲೆ ಕೊಟ್ಟಿದ್ದಾನೆ ಅಂದರು. ಅನಂತರವೂ, ರಾಜ್ ತಮ್ಮ ಹಾಕಿದ ಗೆರೆ ಎಂದೂ ದಾಟಲೇ ಇಲ್ಲ’ ಎಂದು ಭಗವಾನ್ ಮತ್ತೂಮ್ಮೆ ಕಣ್ಣಮುಂದೆ ಬಂದ ಘಟನೆಗಳನ್ನು ವಿವರಿಸಿದರು.
ರಾಜ್‌ಕುಮಾರ್ ಅವರಿಗೆ ಎಲ್ಲ ಪಕ್ಷದಲ್ಲೂ ಬದ್ದ ಸ್ನೇಹಿತರಿದ್ದರು. ಜಾತಿ, ಪಕ್ಷ ಅಂತೆಲ್ಲಾ ನೋಡದೆ ಮನೆಗೆ ಬಂದವರನ್ನು ಆದರಿಸುತ್ತಿದ್ದರು. ಆದರೆ, ಮುಲಾಜನ್ನು ಬಳಸಿಕೊಂಡು ಎಂದೂ ರಾಜಕೀಯಕ್ಕೆ ಇಳಿಯುವ ಗೋಜಿಗೆ ಹೋಗಲಿಲ್ಲ. ಅವರ ಬೀಗರಾಗಿದ್ದ ಬಂಗಾರಪ್ಪನವರ ಮನೆಗೆ ಪ್ರತಿವಾರ ಊಟಕ್ಕೆ ಹೋಗುತ್ತಿದ್ದೆವು. ಇಬ್ಬರೂ ಊಟ, ತಿಂಡಿ, ಯೋಗ ಕ್ಷೇಮದ ಬಗ್ಗೆ ಮಾತನಾಡುತ್ತಿದ್ದರೆ ಹೊರತು, ರಾಜಕೀಯದ ಬಗ್ಗೆ ಸೊಲ್ಲೇ ಎತ್ತುತ್ತಿರಲಿಲ್ಲ. ಎಸ್.ಎಂ. ಕೃಷ್ಣ, ರಾಜ್‌ಕುಮಾರ ಅವರಿಗೆ ತೀರ ಹತ್ತಿರ.
ಆಗಾಗ, ಬಂದುಬಿಡಿ ರಾಜಕೀಯಕ್ಕೆ. ಒಟ್ಟಿಗೆ ಒಂದಷ್ಟು ಒಳ್ಳೆ ಕೆಲ್ಸ ಮಾಡೋಣ ಅಂತ ತಮಾಷೆಗೆ ಕರೆಯುತ್ತಿದ್ದರೆ ಹೊರತು, ಬಲವಂತ ಮಾಡುತ್ತಿರಲಿಲ್ಲ. ಅವರಿಗೆ ರಾಜ್ ಕುಮಾರರ ಮನಸ್ಸು ಏನು ಅಂತ ತಿಳಿದಿತ್ತು’ ಎನ್ನುತ್ತಾರೆ ಭಗವಾನ್.
ಸೈಟು ಬೇಡ ಅಂದಿದ್ದರು ಆ ಕಾಲದ ಮುಖ್ಯಮಂತ್ರಿಗಳ ಪೈಕಿ ಒಬ್ಬರು ರಾಜ್‌ಕುಮಾರ್ ಅವರಿಗೆ 100/50 ಸೈಟ್ ಕೊಡ್ತೀನಿ ಅಂದಾಗ- ಪಾರ್ವತಿ ಇವೆಲ್ಲ ನಮಗೆ ಬೇಕಾ? ಈಗಾಗಲೇ ನಮಗೆ ಒಂದು ಮನೆ ಇದೆ. ಜತೆಗೆ ಸೈಟು ಕೊಟ್ಟರೆ ಏನು ಮಾಡೋದು? ಅದರ ಬದಲು ನಮ್ಮ ಬಡಕಲಾವಿದರಿಗೆ ಕೊಡಲಿ’ ಅಂತ ಜಾರಿಕೊಂಡರು.
ಕಟ್ಟೆ ಗುರುರಾಜ್