ಮುಂಬಯಿ: ಕುಮಾರ ಕಾರ್ತಿಕೇಯ ಕಳೆದ ವಾರವಷ್ಟೇ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡ ಆಟಗಾರ. ಗಾಯಗೊಂಡಿರುವ ಮೊಹಮ್ಮದ್ ಅರ್ಷದ್ ಖಾನ್ ಬದಲಿಗೆ ಈ ಅವಕಾಶ ಲಭಿಸಿತ್ತು. ಮೂಲ ಬೆಲೆ 20 ಲಕ್ಷ ರೂ.ಗೆ ಅವರನ್ನು ಮುಂಬೈ ಖರೀದಿಸಿತ್ತು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಬಳಗದಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕೇಯ, ತಮ್ಮ ಚೊಚ್ಚಲ ಪಂದ್ಯದಲ್ಲೇ ಅಮೋಘ ಬೌಲಿಂಗ್ ದಾಳಿ ಸಂಘಟಿಸಿ ಗಮನ ಸೆಳೆದಿದ್ದರು. 4 ಓವರ್‌ಗಳ ದಾಳಿಯಲ್ಲಿ ಕೇವಲ 19 ರನ್ ನೀಡಿ ಎದುರಾಳಿಯ ರನ್‌ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಮಾತ್ರವಲ್ಲದೇ ರಾಜಸ್ಥಾನ್ ತಂಡದ ನಾಯಕ, ಅಪಾಯಕಾರಿ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಐಪಿಎಲ್‌ಗೆ ಪದಾರ್ಪಣೆಗೈದ ಪಂದ್ಯದಲ್ಲಿಯೇ ಗಮನಾರ್ಹ ಬೌಲಿಂಗ್ ನಿರ್ವಹಣೆ ನೀಡಿದ ಕಾರ್ತಿಕೇಯ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲಕಿ ನೀತಾ ಅಂಬಾನಿ ಮುಕ್ತಕಂಠದಿಂದ ಹೊಗಳಿದ್ದಾರೆ. ಅವರ ನಿಯಂತ್ರಿತ ಬೌಲಿಂಗ್‌ನಿಂದಾಗಿ ಮುಂಬೈ ತಂಡ ಈ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿದೆ. ಮುಂಬೈ ಈ ಮೊದಲು ಸತತ 8 ಪಂದ್ಯಗಳಲ್ಲಿ ಸೋತಿತ್ತು. ಕುಮಾರ ಕಾರ್ತಿಕೇಯ ಅವರಿಗೆ ದೂರವಾಣಿ ಕರೆ ಮಾಡಿದ ನೀತಾ ಅಂಬಾನಿ, “ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ನೀವು ನಿಜವಾಗಿಯೂ ಚೆನ್ನಾಗಿ ಆಡಿದ್ದೀರಿ. ಅಭಿನಂದನೆಗಳು ಮತ್ತು ನೀವು ಯಾವಾಗಲೂ ಹೀಗೆಯೇ ಮಿಂಚುತ್ತಲೇ ಇರಿ…’
ಎಂದು ಹಾರೈಸಿದರು.
ಕಾರ್ತಿಕೇಯ ಈ ಮೊದಲು 9 ಪ್ರಥಮ ದರ್ಜೆ, 19 “ಎ’ ಮತ್ತು 8 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು. ಈ ಮೂರು ಮಾದ ರಿಯ ಕ್ರಿಕೆಟ್‌ನಲ್ಲಿ ಅವರು ಅನುಕ್ರಮವಾಗಿ 35, 18 ಮತ್ತು 9 ವಿಕೆಟ್ ಉರುಳಿಸಿದ್ದರು.