Advertisement

ಜೆಡಿಎಸ್‌ ಕ್ಷೇತ್ರಗಳಿಗೆ ಕುಮಾರ ಕೃಪೆ

06:37 AM Feb 12, 2019 | |

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಒಟ್ಟಾರೆ ಬೆಂಗಳೂರಿಗೆ ಬಂಪರ್‌ ಕೊಡುಗೆ ಸಿಕ್ಕಿದೆ. ಆದರೆ ಕುತೂಹಲಕ್ಕೆ ಆ “ಗಿಫ್ಟ್’ ತೆರೆದು ನೋಡಿದರೆ, ಕೆಲವರಿಗೆ ಸಿಹಿ ಮತ್ತು ಹಲವರಿಗೆ ಸಪ್ಪೆ! ಹೌದು, ಬಜೆಟ್‌ನಲ್ಲಿ ನಗರಕ್ಕೆ ಹಂಚಿಕೆಯಾದ ಅನುದಾನದಲ್ಲಿ ನಿರೀಕ್ಷೆಯಂತೆ ಜೆಡಿಎಸ್‌ ಪ್ರತಿನಿಧಿಸುವ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಭರಪೂರ ಹಣ ಹರಿದಿದ್ದು, ಸರಾಸರಿ ತಲಾ ಸುಮಾರು 480 ಕೋಟಿ ರೂ. ನೀಡಲಾಗಿದೆ.

Advertisement

ಆದರೆ, ಕಾಂಗ್ರೆಸ್‌ ಶಾಸಕರಿರುವ 15 ಕ್ಷೇತ್ರಗಳಿಗೆ ತಲಾ 250.41 ಹಾಗೂ ಬಿಜೆಪಿ ಪ್ರತಿನಿಧಿಸುವ 11 ಕ್ಷೇತ್ರಗಳಿಗೆ ಸರಾಸರಿ ತಲಾ 150 ಕೋಟಿ ರೂ. ನೀಡಲಾಗಿದೆ. ಈ ಅಸಮರ್ಪಕ ಹಂಚಿಕೆ ಕೊಂಚ ಸಮ್ಮಿಶ್ರ ಸರ್ಕಾರದ ಭಾಗವಾದ ಕಾಂಗ್ರೆಸ್‌ಗೂ ತುಸು ನಿರಾಸೆ ಮೂಡಿಸಿದೆ. 

ಇನ್ನು ಒಟ್ಟು 6,350 ಕೋಟಿ ರೂ. (ಇತರೆ 1,664 ಕೋಟಿ ಹೊರತುಪಡಿಸಿ) ನೀಡಲಾಗಿದ್ದು, ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅನುದಾನ ಗಿಟ್ಟಿಸಿಕೊಂಡ ಮೊದಲ ಮೂರರ ಪೈಕಿ ಎರಡು ಕ್ಷೇತ್ರಗಳು ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ದಾಸರಹಳ್ಳಿ ಮತ್ತು ಮಹಾಲಕ್ಷ್ಮೀ ಲೇಔಟ್‌ ಆಗಿವೆ.

ಇವೆರಡಕ್ಕೂ ಕ್ರಮವಾಗಿ 528.45 ಕೋಟಿ ಹಾಗೂ 424.50 ಕೋಟಿ ರೂ. ನೀಡಲಾಗಿದೆ. ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ವಿಶೇಷ ಪ್ರೀತಿ ತೋರಿಸಿರುವ ಮುಖ್ಯಮಂತ್ರಿಗಳು, ಅವರು ಪ್ರತಿನಿಧಿಸುವ ಕ್ಷೇತ್ರ ರಾಜರಾಜೇಶ್ವರಿನಗರಕ್ಕೆ ಅತ್ಯಧಿಕ 557.10 ಕೋಟಿ ರೂ. ಕೊಟ್ಟಿದ್ದಾರೆ. 

ವಿವಿಧ ಯೋಜನೆಗಳಿಗೆ ನೀಡಲಾದ 6,350 ಕೋಟಿ ರೂ.ಗಳಲ್ಲಿ ನಗರದ ರಸ್ತೆಗಳಿಗಾಗಿಯೇ 2,200 ಕೋಟಿ ರೂ. ಹರಿದಿದೆ. ಬೃಹತ್‌ ಮಳೆ ನೀರುಗಾಲುವೆಗೆ 1,321 ಕೋಟಿ (ಇತರೆ 46 ಕೋಟಿ ಸೇರಿದೆ) ಹಾಗೂ ಹಿಂದಿನ ಕಾಂಗ್ರೆಸ್‌ ಸರ್ಕಾರದ ಕನಸಿನ ಕೂಸು ವೈಟ್‌ಟಾಪಿಂಗ್‌ಗೆ 1,172 ಕೋಟಿ ರೂ. ನೀಡಲಾಗಿದೆ.

Advertisement

ಇದರಲ್ಲಿ ಮಹಾಲಕ್ಷ್ಮೀ ಲೇಔಟ್‌ನಲ್ಲಿ ವೈಟ್‌ಟಾಪಿಂಗ್‌ಗಾಗಿಯೇ 185 ಕೋಟಿ ರೂ. ನೀಡಲಾಗಿದೆ. ಬಿಜೆಪಿ ಪ್ರತಿನಿಧಿಸುವ ಕ್ಷೇತ್ರಗಳಿಗೆ ಕೇವಲ 1,641.55 ಕೋಟಿ ರೂ. ದೊರಕಿದೆ. ಇದು ಇತರೆ ವಿಭಾಗದಲ್ಲಿ ನೀಡಲಾದ ಅನುದಾನಕ್ಕಿಂತ ಕಡಿಮೆ!

110 ಹಳ್ಳಿಗಳಿಗೆ 275 ಕೋಟಿ: ಸರ್ಕಾರ ಸಂಚಾರದಟ್ಟ ತಗ್ಗಿಸಲು ಒಂದೆಡೆ ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳುತ್ತದೆ. ಆದರೆ, ಹೀಗೆ ಸಾರ್ವಜನಿಕ ಸಾರಿಗೆ ಸೇವೆ ಬಳಸುವ ಬಹುತೇಕರು ಪಾದಚಾರಿಗಳು. ಹತ್ತಿರದ ಮನೆಗಳಿಂದ ಅವರೆಲ್ಲಾ ಕಾಲ್ನಡಿಗೆಯಲ್ಲೇ ಬರುವುದು ಹೆಚ್ಚು.

ಈ ಫ‌ುಟ್‌ಪಾತ್‌ಗಳಿಗಾಗಿ ಮೀಸಲಿಟ್ಟ ಹಣ 74 ಕೋಟಿ ರೂ. ಒಟ್ಟಾರೆ ವಿವಿಧ ಯೋಜನೆಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಅತಿ ಕಡಿಮೆ ಇದಾಗಿದೆ. ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ವಿವಿಧ ಮೂಲಸೌಕರ್ಯ ಕಲ್ಪಿಸಲು 275 ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ ಇತರೆ ವಿಭಾಗದಲ್ಲೇ 90 ಕೋಟಿ ರೂ. ಇದ್ದು, ಮೀಸಲಿಟ್ಟ ಹಣದಲ್ಲಿ ತಲಾ ಹಳ್ಳಿಗೆ ಸರಾಸರಿ 2.5 ಕೋಟಿ ರೂ. ಆಗುತ್ತದೆ. ಘನತ್ಯಾಜ್ಯ ನಿರ್ವಹಣೆಗಾಗಿ 753 ಕೋಟಿ ರೂ. ಮೀಸಲಿಡಲಾಗಿದೆ.   

ಸಾಮಾನ್ಯವಾಗಿ ಹಿಂದಿನ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಬಜೆಟ್‌ನಲ್ಲಿ ತಮ್ಮ ಪಕ್ಷ ಪ್ರತಿನಿಧಿಸುವ ಕ್ಷೇತ್ರಗಳಿಗೆ ಅಧಿಕ ಅನುದಾನ ನೀಡುವುದು ಮಾಮೂಲಿ. ಆದರೆ, ಈ ಬಾರಿ ಹಿಂದೆಂದಿಗಿಂತ ತುಸು ಹೆಚ್ಚು ಕೊಡಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸುತ್ತಾರೆ. 

ಇನ್ನು ಇತರೆ ವಿಭಾಗದಲ್ಲಿ ಮೀಸಲಿಟ್ಟ 1,664 ಕೋಟಿ ರೂ.ಗಳಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿಯೇ 700 ಕೋಟಿ ಮತ್ತು ಕಟ್ಟಡಗಳಿಗೆ 100 ಕೋಟಿ ರೂ. ನೀಡಲಾಗಿದೆ. ಸಾಮಾನ್ಯವಾಗಿ ಈ ಯೋಜನೆಗಳು ನಗರದ ಹೃದಯಭಾಗಕ್ಕೆ ಹೆಚ್ಚು ಸಂಬಂಧಿಸಿದ್ದಾಗಿವೆ. ಹಾಗೂ ಈ ಹೃದಯಭಾಗದಲ್ಲಿ ಬಹುತೇಕ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವುದು ಬಿಜೆಪಿ ಆಗಿದೆ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಸಿಕ್ಕಿದೆ?
ಕ್ಷೇತ್ರ    ಅನುದಾನ (ಕೋಟಿ ರೂ.ಗಳಲ್ಲಿ)

ಬಿಟಿಎಂ ಲೇಔಟ್‌    387.5
ಬೆಂಗಳೂರು ದಕ್ಷಿಣ    141.75
ಬಸವನಗುಡಿ    118
ಬೊಮ್ಮನಹಳ್ಳಿ    265.30
ಬ್ಯಾಟರಾಯನಪುರ    259.79
ಸಿ.ವಿ. ರಾಮನ್‌ನಗರ    137.50
ಚಾಮರಾಜಪೇಟೆ    140.40
ಚಿಕ್ಕಪೇಟೆ    100.44
ದಾಸರಹಳ್ಳಿ    528.45
ಗಾಂಧಿನಗರ    198.55
ಗೋವಿಂದರಾಜನಗರ    161.50
ಹೆಬ್ಟಾಳ    202.20
ಜಯನಗರ    312.55
ಕೆ.ಆರ್‌. ಪುರ    337
ಮಹದೇವಪುರ    229.20
ಮಹಾಲಕ್ಷ್ಮೀ ಲೇಔಟ್‌    424.50
ಮಲ್ಲೇಶ್ವರ    104.70
ಪದ್ಮನಾಭನಗರ    145
ಪುಲಕೇಶಿನಗರ    154.50
ರಾಜಾಜಿನಗರ 100.10
ಆರ್‌.ಆರ್‌. ನಗರ    557.10
ಸರ್ವಜ್ಞನಗರ    273.50
ಶಾಂತಿನಗರ    205.93
ಶಿವಾಜಿನಗರ    136
ವಿಜಯನಗರ    250.05
ಯಲಹಂಕ    138.06
ಯಶವಂತಪುರ    339.20
ಆನೇಕಲ್‌    2
ಇತರೆ    1,664.60
ಒಟ್ಟು    8,015.37

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next