Advertisement
ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕುಮಾರ್ ಅವರಿಗೆ ಜೇನು ಕೃಷಿಯಲ್ಲಿ 45 ವರ್ಷಗಳ ಅನುಭವವಿದೆ. ಈ ಬಗ್ಗೆ ಇತರರಿಗೆ ಮಾಹಿತಿ ನೀಡುವುದರೊಂದಿಗೆ 800 ಜೇನು ಪೆಟ್ಟಿಗೆಗಳಲ್ಲಿ ಜೇನು ಕೃಷಿ ಮಾಡುತ್ತಿದ್ದಾರೆ.
ಕುಮಾರ್ ಅವರು ಹತ್ತಿರದ ಬೇರೆಯವರ ಜಮೀನಿನಲ್ಲಿ ಸುಮಾರು 24 ಎಕ್ರೆ ಜಾಗದ ರಬ್ಬರ್ ತೋಟದಲ್ಲಿ ಮರಗಳ ಮಧ್ಯೆ ಸುಮಾರು 800 ಪೆಟ್ಟಿಗೆಗಳಲ್ಲಿ ಜೇನು ಸಾಕಾಣಿಕೆ ನಡೆಸುತ್ತಿದ್ದಾರೆ. ಒಂದು ಪೆಟ್ಟಿಗೆಯಲ್ಲಿ ಸುಮಾರು 15ರಿಂದ 20 ಕೆ.ಜಿ. ಜೇನು ಪಡೆಯಬಹುದು ಎನ್ನುತ್ತಾರೆ ಕುಮಾರ್.
Related Articles
ಜೇನು ಸಾಕಾಣಿಕೆ (ಜೇನು ಪೆಟ್ಟಿಗೆ ಇಡುವ) ಪ್ರಾರಂಭಿಸುವ ಒಂದು ಕಿ.ಮೀ. ಸುತ್ತಳತೆಯಲ್ಲಿ ಹೂ ಬಿಡುವ, ಸಸ್ಯ ಸಂಪತ್ತಿನ, ಮಾಲಿನ್ಯ ರಹಿತ ಗಾಳಿ, ನೀರು, ಮಳೆ, ಬಿಸಿಲಿನಿಂದ ರಕ್ಷಣೆ, ನೆರಳಿನ ಪ್ರದೇಶ ಆಯ್ಕೆ ಮಾಡಬೇಕು. ಜೇನು ಕುಟುಂಬಗಳನ್ನು ವಾರಕ್ಕೊಮ್ಮೆ ಪರೀಕ್ಷಿಸಬೇಕು, 10- 15 ದಿನಕ್ಕೊಮ್ಮೆ ಪೆಟ್ಟಿಗೆ ಸ್ವತ್ಛಗೊಳಿಸಬೇಕು. ನಿಸರ್ಗದಲ್ಲಿ ಪರಾಗ ಮತ್ತು ಮಕರಂದದ ಪ್ರಮಾಣ ಕಡಿಮೆಯಾದರೆ ಸಕ್ಕರೆ ಪಾಕ ಒದಗಿಸಬೇಕು. ಮಳೆಗಾಲಕ್ಕೆ 10- 15 ದಿನಗಳ ಮೊದಲು ಜೇನು ತುಪ್ಪ ಸಂಗ್ರಹಿಸುವುದು ನಿಲ್ಲಿಸಬೇಕು. ಜೇನುಗಳು ಮಳೆಗಾಲ ಮುಗಿದು ಸಸ್ಯಗಳು ಹೂ ಬಿಡುವ ಸಮಯದಲ್ಲಿ ವಂಶಾಭಿವೃದ್ಧಿಗೆ ಗಮನ ಕೊಡುತ್ತವೆ ಎನ್ನುತ್ತಾರೆ ಅವರು.
Advertisement
ಲಾಭದಾಯಕ ಕೃಷಿಜೇನು ಕೃಷಿ ಲಾಭದಾಯಕವಾಗಿದ್ದು, ಜನವರಿಯಿಂದ ಮೇ ತಿಂಗಳ ನಡುವಿನಲ್ಲಿ ಜೇನು ತುಪ್ಪ ತೆಗೆಯುತ್ತಿದ್ದೇನೆ. ಈ ಸಂದರ್ಭದಲ್ಲಿ ದೇರಾಜೆಯಲ್ಲಿನ ಅನುಭವಿ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಉಳಿದ ದಿನಗಳಲ್ಲಿ ನಾನೇ ಮನೆಯವರೊಂದಿಗೆ ಜೇನು ಕೃಷಿಯನ್ನು ನೋಡಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಕುಮಾರ್. ಜೇನಿನ ಪೆಟ್ಟಿಗೆಯಿಂದ ಅದರ ಪಟ್ಟನ್ನು ಬೇರ್ಪಡಿಸಿ ಯಂತ್ರದ ಮೂಲಕ ತುಪ್ಪವನ್ನು ತೆಗೆದು ಶುದ್ಧ ತುಪ್ಪವನ್ನು ಡಬ್ಬದಲ್ಲಿ ಜಾಗ್ರತೆಯಾಗಿ ಶೇಖರಿಸಲಾಗುತ್ತದೆ. ಬಳಿಕ ತುಪ್ಪವನ್ನು ಮಂಗಳೂರು ಅಥವಾ ಜೇನು ಸಾಕಾಣಿಕೆಯ ಸೊಸೈಟಿಗೆ ಮಾರಾಟ ಮಾಡುತ್ತೇನೆ. ಜೇನಿನ ಪಟ್ಟಿನಿಂದ ತುಪ್ಪ ಬೇರ್ಪಡಿಸಿ ಉಳಿದ ಅಂಟಿನಿಂದ ಮೇಣ ತಯಾರಿಸಿ ಇದರಿಂದಲೂ ಆದಾಯ ಗಳಿಸಬಹುದು ಎಂದು ಅವರು ವಿವರಿಸುತ್ತಾರೆ. ಇವರ ಬಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಸೇರಿದಂತೆ ಅನೇಕ ಮಂದಿ ಬಂದು ಜೇನು ಸಾಕಾಣಿಕೆಯ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಪಡೆದುಕೊಳ್ಳುತ್ತಿದ್ದಾರೆ. ಎಚ್ಚರಿಕೆ ಅಗತ್ಯ
ಮಳೆಗಾಲದಲ್ಲಿ ನೀರು ಒಳಹೋಗದಂತೆ ಜೇನು ಪೆಟ್ಟಿಗೆಗೆ ಪ್ಲಾಸ್ಟಿಕ್‌ನಿಂದ ಮೇಲ್ಭಾಗ ಮುಚ್ಚಬೇಕಾಗಿದ್ದು, ಅಲ್ಲದೇ ಜೇನು ಪೆಟ್ಟಿಗೆಗೆ ಇರುವೆಗಳು ಬಾರದಂತೆ ಪೆಟ್ಟಿಗೆಯ ಸುತ್ತಲೂ ಇರುವೆ ನಾಶಕ ಸಿಂಪಡಿಸಬೇಕು. ಜೇನು ಪೆಟ್ಟಿಗೆಯ ಬಳಿ ವಾರದಲ್ಲೊಮ್ಮೆ ಭೇಟಿ ನೀಡಿ ಪರಿಶೀಲಿಸುವುದು ಉತ್ತಮ. ಅಲ್ಲದೆ, ಇವುಗಳ ಆಹಾರಕ್ಕಾಗಿ ಸಕ್ಕರೆ ನೀರನ್ನು ಪೆಟ್ಟಿಗೆಯಲ್ಲಿ ತಂದಿಡಬೇಕು. -ದಯಾನಂದ ಕಲ್ನಾರ್