ಬೆಂಗಳೂರು: ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ ಬಗ್ಗೆ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂತಹದ್ದೊಂದು ಅಚಾತುರ್ಯ ನಡೆದಿದೆ. ತಪ್ಪಾಗಿದೆ, ಅದು ನಡೆಯಬಾರದಿತ್ತು ಎಂದು ಹೇಳಿದರು.
ಅಂದು ನಾವೆಲ್ಲಾ ಕಾರ್ಯಕ್ರಮದಲ್ಲಿ ನಿರತರಾಗಿದ್ದೆವು, ಅದನ್ನು ಗಮನಿಸಿಲ್ಲ.ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯ ನಡೆಯದಿರುವಂತೆ ಎಚ್ಚರ ವಹಿಸಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ:ದಕ್ಷಿಣ ಭಾರತದಲ್ಲಿ ಇನ್ನು ಪ್ರವಾಹ ಸರ್ವೇಸಾಮಾನ್ಯ! ಅಧ್ಯಯನ ವರದಿ
ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಒಂದಿಂಚೂ ಬಿಟ್ಟುಕೊಡುವ ಮಾತೇ ಇಲ್ಲ. ಮಹಾರಾಷ್ಟ್ರ ಆಗಾಗ ಕ್ಯಾತೆ ತೆಗೆಯುತ್ತಲೇ ಬಂದಿದೆ. ನೆಲ ಜಲ ವಿಚಾರದಲ್ಲಿ ರಾಜಕೀಯ ಮಾಡಬಾರದು. ಹಿಂದೆ ಡಾ.ರಾಜ್‌ಕುಮಾರ್ ಅವರು ಹೋರಾಟ ಮಾಡಿದ್ದರು, ಈಗಲೂ ಎಲ್ಲ ಹೋರಾಟಗಾರರ ಒಗ್ಗೂಡಿ ದೊಡ್ಡ ಚಳವಳಿ ರೂಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು.