ಬಂಗಾರ ಪೇಟೆ: ಮನುಷ್ಯನ ಕಿಡ್ನಿಯಲ್ಲಿ ಸ್ಟೋನ್(ಕಲ್ಲು) ನಿರ್ಮಾಣವಾಗಿದ್ದರೆ ವಿಪರೀತ ತೊಂದರೆಗಳಿಂದ ಬಳಲಬೇಕಾಗುತ್ತದೆ. ಹೊಟ್ಟೆ ನೋವು, ಮೂತ್ರ ವಿಸರ್ಜನೆ ತಡೆಯುಂಟಾಗುವುದು ಸೇರಿದಂತೆ ದೇಹದ ಹಲವು ಭಾಗಗಳಿಗೆ ಬಾಧನೆಯಾಗುತ್ತದೆ. ಈ ಕಿಡ್ನಿಸ್ಟೋನ್‌ಗಳನ್ನು ಕರಗಿಸಲು ಜನರು ಸಾವಿರಾರು ರೂಗಳನ್ನು ಖರ್ಚು ಮಾಡುತ್ತಾರೆ. ಆದರೆ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸ್ಟೋನ್‌ಗಳನ್ನು ಕರಗಿಸುತ್ತಾರೆ ಬಂಗಾರಪೇಟೆ ಪಟ್ಟಣದ ದೊಡ್ಡಕೆರೆ ಅಂಗಳದ ನಿವಾಸಿ ಕುಳ್ಳಪ್ಪ.
ಜನಸಾಮಾನ್ಯರ ಸಂಜೀವಿನಿ ಅಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆ ನಾಟಿ ಶೈಲಿಯಿಂದಲೇ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ ಕುಳ್ಳಪ್ಪ. ಸುಮಾರು 5 ವರ್ಷಗಳಿಂದ ಕಿಡ್ನಿಸ್ಟೋನ್‌ಗೆ ಚಿಕಿತ್ಸೆ ನೀಡುತ್ತಿರುವ ಇವರು, ಸುತ್ತಲಿನ ಜಿಲ್ಲೆಗಳಲ್ಲದೆ ನೆರೆಯ ಆಂಧ್ರ ಪ್ರದೇಶ, ತೆಲಂಗಾಣಗಳಿಂದ ಜನರು ಚಿಕಿತ್ಸೆಗಾಗಿ ಇವರ ಬಳಿ ಬರುತ್ತಾರೆ. ಇನ್ನು ಆರ್ಥಿಕ ಪರಿಸ್ಥಿತಿ ಚೆನ್ನಾಗಿದವರಿಗಂತೂ ಕುಳ್ಳಪ್ಪ, ರೋಗಿಗಳ ಪಾಲಿನ ಸಂಜೀವಿನಿಯಾಗಿದ್ದಾರೆ. ಕುಳ್ಳಪ್ಪ ಇದುವರೆಗೂ ಸುಮಾರು 2000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ನಾಟಿ ವೈದ್ಯ ಹೇಗೆ?: ಕುಳ್ಳಪ್ಪ ಐದು ವರ್ಷಗಳ ಹಿಂದೆ ತೀರ ರೋಗಗ್ರಸ್ಥರಾಗಿ ಊಟ ಮಾಡಲು ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದರು. ಕೇವಲ ಗಂಜಿಯನ್ನು ಮಾತ್ರ ಸೇವಿಸಲು ಸಾಧ್ಯವಾಗುತ್ತಿತ್ತು. ಇನ್ನೇನು ಕುಳ್ಳಪ್ಪ ಬದುಕುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ನಾಟಿವೈದ್ಯರೊಬ್ಬರು ನೀಡಿದ ನಾಟಿ ಚಿಕಿತ್ಸೆಯಿಂದ ಕುಳ್ಳಪ್ಪ ಕೆಲವೆ ದಿನಗಳಲ್ಲಿ ನಂಬಲಾರದಂತೆ ಆರೋಗ್ಯವಂತರಾಗಿದ್ದರು. ಬಳಿಕ ಕುಳ್ಳಪ್ಪ ತಮ್ಮನ್ನು ಬದುಕಿಸಿದ ನಾಟಿ ವೈದ್ಯರ ಶಿಷ್ಯರಾಗಿ ನಾಟಿ ಕಲೆಯನ್ನು ಕಲಿತರು. ನನ್ನ ಜೀವನದಲ್ಲಿ ನಡೆದ ಘಟನೆಯೇ ನಾನು ನಾಟಿ ವೈದ್ಯನಾಗಲು ಪ್ರೇರಣಯಾಯಿತು. ಹೀಗಾಗಿ ನಮ್ಮ ಗುರುಗಳ ಮಾರ್ಗದರ್ಶದಿಂದಲೇ ಕಿಸ್ಟಿಸ್ಟೋನ್ ಕರಗಿಸುವ ಕೆಲಸ ಮಾಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇನೆ ಎನ್ನುತ್ತಾರೆ ಕುಳ್ಳಪ್ಪ.
ಕಿಡ್ನಿಸ್ಟೋನ್ ಹೇಗಾಗುತ್ತದೆ?: ವ್ಯಕ್ತಿ ಸರಿಯಾದ ಸಮಯಕ್ಕೆ ಊಟ ಮಾಡದೇ, ಕಿಡ್ನಿಗೆ ಶಕ್ತಿ ತುಂಬುವ ನಾಳದಲ್ಲಿ ತೊಂದರೆಯುಂಟಾಗುತ್ತದೆ. ಇದರಿಂದ ಕಿಡ್ನಿಯಲ್ಲಿ ಲವಣಗಳು ಸಂಗ್ರಹವಾಗಿ ಒಂದಕ್ಕೊಂದು ಅಟ್ಟಿಕೊಂಡು ಕಲ್ಲಾಗಿ ಮಾರ್ಪಾಡಾಗುತ್ತದೆ. ಆರಂಭದಲ್ಲಿ ಕಿಡ್ನಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬಳಿಕ ಮೂತ್ರ ವಿಸರ್ಜನೆಯಲ್ಲಿ ತಡೆಯುಂಟಾಗಿ ತೊಂದರೆ ಆರಂಭವಾಗುತ್ತದೆ.
ಉಚಿತ ಚಿಕಿತ್ಸೆ: ಅಧುನಿಕ ತಂತ್ರಜ್ಞಾನದ ಸಹಾಯದಿಂದ ಕಿಡ್ನಿಸ್ಟೋನ್‌ಗೆ ಚಿಕಿತ್ಸೆ ಪಡೆದರೂ ಮತ್ತೆ ಕಿಡ್ನಿಸ್ಟೋನ್ ಕಾಣಿಸಿಕೊಳ್ಳುತ್ತದೆ. ಕೆಲವರು ಹೊಟ್ಟೆನೋವಿನಿಂದ ನರಳಿ ನೋವು ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಬಡವರಿಗೆ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರೂ.ಗಳು ಖರ್ಚು ಮಾಡುವ ಶಕ್ತಿ ಇಲ್ಲದಿವವರಿಗೆ ಕುಳ್ಳಪ್ಪರವರ ನಾಟಿ ವೈದ್ಯವೇ ಕಾಮಧೇನುವಾಗಿದೆ.
ನಾಟಿ ವೈದ್ಯದ ಮೂಲಕ ಕಿಡ್ನಿ ಸಮಸ್ಯೆಗೆ ಔಷಧಿ ನೀಡುವ ಕುಳ್ಳಪ್ಪ ತಮಿಳುನಾಡಿನ ಡೆಂಕನಿಕೋಟೆ ಸಮೀಪ ಅರಣ್ಯ ಪ್ರದೇಶದಲ್ಲಿ ಸಿಗುವ ಗಿಡಮೂಲಿಕೆಯನ್ನು ಹಣಕ್ಕೆ ಖರೀದಿಸಿ ತರುತ್ತಾರೆ. ಕೋಲಾರ ಜಿಲ್ಲೆಯಲ್ಲಿ ಇಂತಹ ಔಷಧಿ ಬೀಜಗಳು ಸಿಗುವುದಿಲ್ಲ. ಔಷಧಿ ಬೀಜಗಳನ್ನು ಸಂಗ್ರಹಿಸುವವರಿಗೆ ಹಣ ನೀಡಿ ತಂದು ಇಲ್ಲಿನ ಜನರಿಗೆ ಉಚಿತವಾಗಿ ನೀಡುವ ಸಹಕಾರಿಯಾಗಿದ್ದಾರೆ.
● ಎಂ.ಸಿ.ಮಂಜುನಾಥ್