Advertisement

ಐ.ಜಿ.ಸನದಿ ಬೆಂಬಲ ಕೋರಿದ ಕುಲಕರ್ಣಿ

04:25 PM Apr 04, 2019 | pallavi |

ಹುಬ್ಬಳ್ಳಿ: ತೀವ್ರ ಪೈಪೋಟಿಯ ನಡುವೆ ಕೊನೆಯ ಹಂತದಲ್ಲಿ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿಕೊಂಡ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಮುಖಂಡರು ಬುಧವಾರ ಇಲ್ಲಿನ ವಿಶ್ವೇಶ್ವರ ನಗರದಲ್ಲಿರುವ ಮಾಜಿ ಸಂಸದ ಐ.ಜಿ.ಸನದಿ ಅವರ ನಿವಾಸಕ್ಕೆ ತೆರಳಿ ಬೆಂಬಲ ಕೋರಿದರು.

Advertisement

ಪ್ರಸಕ್ತ ಲೋಕಸಭಾ ಚುನಾವಣೆ ನಿಮ್ಮ ಮುಂದಾಳತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು. ಟಿಕೇಟ್‌ಗಾಗಿ ಬೇಡಿಕೆ ಸಲ್ಲಿಸುವುದು ಪ್ರತಿಯೊಬ್ಬರಿಗೆ ಹಕ್ಕಿದೆ.

ಆದರೆ ಪಕ್ಷ ಗುರುತಿಸುವ ಅಭ್ಯರ್ಥಿ ಪರ ಚುನಾವಣೆ ಮಾಡುವುದು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರ
ಕರ್ತವ್ಯ. ಟಿಕೆಟ್‌ಗಾಗಿ ನಡೆದ ಕಾದಾಟ ಮನಸ್ಸಿನಲ್ಲಿಟ್ಟುಕೊಳ್ಳದೆ ಕಾಂಗ್ರೆಸ್‌ ಅಭ್ಯರ್ಥಿ ಪರ ಚುನಾವಣೆ ಮಾಡುವಂತೆ ಮುಖಂಡರು ಶಾಕೀರ ಸನದಿ ಅವರಲ್ಲಿ ಮನವಿ ಮಾಡುವ ಮೂಲಕ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.

ಮಾಜಿ ಸಂಸದ ಐ.ಜಿ.ಸನದಿ ಮಾತನಾಡಿ, ನಾವು ಕಾಂಗ್ರೆಸ್‌ನ ಪ್ರಾಮಾಣಿಕ ಕಾರ್ಯಕರ್ತರು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಶಾಕೀರ್‌ಗೆ ಟಿಕೆಟ್‌ ದೊರಕಿದಷ್ಟೇ ಸಂತಸವಾಗಿದೆ. ಇದು ನನ್ನ ಮಗನ ಚುನಾವಣೆ ಎಂದು ಹಿಂದಿನ ಎರಡು ಚುನಾವಣೆ ಮಾಡಿದಂತೆ ಈ ಚುನಾವಣೆಯನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ಮುಸ್ಲಿಂ ಸಮಾಜಕ್ಕೆ ದ್ರೋಹ ಮಾಡಬೇಕೆನ್ನುವ ಉದ್ದೇಶ ನನ್ನದಲ್ಲ. ನನ್ನ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಸ್ಥಾನಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿದ್ದೇನೆ. ನನ್ನ ಬಗ್ಗೆ ಯಾವುದೇ ಅಪಾರ್ಥ ಮಾಡಿಕೊಳ್ಳುವುದು ಬೇಡ. ಸನದಿ ಸಾಹೇಬರು ಹಾಗೂ ಶಾಕೀರ್‌ ಸನದಿ ಅವರ ಪಕ್ಷದಲ್ಲಿನ ಪ್ರಾಮಾಣಿಕ ಸೇವೆ ಪಕ್ಷ ಮಹತ್ವದ ಸ್ಥಾನ ನೀಡುತ್ತದೆ ಎನ್ನುವ
ಭರವಸೆಯಿದೆ ಎಂದರು.

Advertisement

ಬೆಂಬಲಿಗರ ಆಕ್ರೋಶ: ಸನದಿ ಅವರ ನಿವಾಸಕ್ಕೆ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿದ ಸಂದರ್ಭದಲ್ಲಿ ಶಾಕೀರ್‌ ಸನದಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಂ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಕಾಂಗ್ರೆಸ್‌ನ ಮತ ಬ್ಯಾಂಕಿಗಾಗಿ ಮಾತ್ರ ನಮ್ಮ ಸಮಾಜವನ್ನು ಪರಿಗಣಿಸಿ ತುಳಿಯುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಪಕ್ಷ ನೀಡಿರುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರಬೇಕು ಎಂದು ಮಾಜಿ ಸಂಸದ ಐ.ಜಿ.ಸನದಿ ಸಮಾಧಾನ ಪಡಿಸಿದರು. ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಶಾಕೀರ್‌ ಸನದಿ, ಬಷೀರ್‌ ಅಹ್ಮದ್‌ ಗುಡಮಾಲ್‌, ಬಂಗಾರೇಶ ಹಿರೇಮಠ, ರಜತ ಉಳ್ಳಾಗಡ್ಡಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next