Advertisement

ಕುಲ್ಗಾಂವ್‌-ಬದ್ಲಾಪುರ ಹೊಟೇಲ್‌ ಓನರ್ ಅಸೋಸಿಯೇಶನ್‌ ರೈ ಮರುನೇಮಕ

04:16 PM Aug 01, 2017 | |

ಬದ್ಲಾಪುರ: ಥಾಣೆ ಜಿಲ್ಲೆಯಾದ್ಯಂತದ ಹೊಟೇಲ್‌ ವ್ಯವಸಾಯಿಗಳ ಸಂಘಟನೆಗಳಲ್ಲೊಂದಾದ ಕುಲ್ಗಾಂವ್‌-ಬದ್ಲಾಪುರ ಹೊಟೇಲ್‌ ಓನರ್ ಅಸೋಸಿಯೇಶನ್‌ ಇದರ ವಾರ್ಷಿಕ ಮಹಾಸಭೆಯು  ಜು. 19 ರಂದು ಬದ್ಲಾಪುರ ಪೂರ್ವದ ಹೊಟೇಲ್‌ ಶುಭಂ ಸಭಾಗೃಹದಲ್ಲಿ ನಡೆಯಿತು.

Advertisement

ಅಸೋಸಿಯೇಶನ್‌ನ ಅಧ್ಯಕ್ಷ ಸುರೇಂದ್ರ ಪಿ. ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ, ಕೋಶಾಧಿಕಾರಿ ರಮೇಶ್‌ ಶೆಟ್ಟಿ ಅವರು ಗತ ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರುಗಳಾದ ನಿಕಟಪೂರ್ವ ನಿಕಟಪೂರ್ವ ಅಧ್ಯಕ್ಷ ಭಗವಾನ್‌ ಆಳ್ವ, ಸುಭಾಷ್‌ ಪೂಂಜ ಮೊದಲಾದವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಅನುಮೋದಿಸಿ ಮಂಜೂರು ಮಾಡಿದರು. ಇದೇ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಕಳೆದ ಮೂರು ವರ್ಷಗಳಿಂದ ಅಸೋಸಿಯೇಶನ್‌ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಾಮಾಣಿಕವಾಗಿ ಸೇವೆಗೈದು ಹೊಟೇಲಿಗರ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸಿದ ಸುರೇಂದ್ರ ಪಿ. ರೈ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಮರುನೇಮಿಸಲಾಯಿತು. ಉಪಾಧ್ಯಕ್ಷರುಗಳಾಗಿ ಹೊಟೇಲ್‌ ಉದ್ಯಮಿ ಕಲ್ಪೇಶ್‌ ಅಂಬವನೆ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಹೊಟೇಲ್‌ ಉದ್ಯಮಿ ಸುರೇಶ್‌ ಬಿ. ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಸುರೇಶ್‌ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು. 

ಇನ್ನುಳಿದ ಪದಾಧಿಕಾರಿಗಳು ಅಥವಾ ಸಲಹಾ ಮಂಡಳಿ, ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಅಗತ್ಯಬಿದ್ದಲ್ಲಿ ಆಯ್ಕೆ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ನೂತನ ಪದಾಧಿಕಾರಿಗಳಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದಿಸಲಾಯಿತು.

ನಿರ್ಗಮನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ  ದಿವಾಕರ ಶೆಟ್ಟಿ, ಮತ್ತು  ರಮೇಶ್‌ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಹೊಟೇಲ್‌ ಉದ್ಯಮಕ್ಕೆ ಸುಪ್ರೀಂಕೋರ್ಟ್‌ನ ಆದೇಶದನ್ವಯದ ವಿರುದ್ಧ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಅವಿರತವಾಗಿ ಶ್ರಮಿಸಿದ ಪುನ: ಬಾರ್‌ಗಳು, ಪರ್ಮಿಟ್‌ ರೂಮ್‌, ವೈನ್‌ಶಾಪ್‌, ದೇಶಿ ಬಾರ್‌ಗಳು ಪುನರಾರಂಭಗೊಳ್ಳುವುದಕ್ಕೆ ವಿಶೇಷವಾಗಿ ಸಹಕರಿಸಿದ ಕುಲ್ಗಾಂವ್‌-ಬದ್ಲಾಪುರ ನಗರ ಪಾಲಿಕೆಯ ಪ್ರಥಮ ನಗರಾಧ್ಯಕ್ಷ, ಥಾಣೆ ಜಿಲ್ಲಾ ಗ್ರಾಮೀಣ ಪ್ರದೇಶ ಶಿವಸೇನಾ ಮಾಜಿ ಅಧ್ಯಕ್ಷ ಮನೋಹರ ಎಚ್‌. ಅಂಬವರೆ, ಬದ್ಲಾಪುರದ ವಿಭಾಗದ ಕಾಂಗ್ರೆಸ್‌ ಅಧ್ಯಕ್ಷ ಹರಿಶ್ಚಂದ್ರ ತೊರಾಟ್‌, ಮುರ್ಬಾಡ್‌ ತಾಲೂಕು ತಹಶೀಲ್ದಾರ್‌ ಉಜ್ವಲ್‌ ದೇಶ್‌ಮುಖ್‌ ಇವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು.

Advertisement

ಸಮ್ಮಾನ ಸ್ವೀಕರಿಸಿದ ಎಲ್ಲ ಗಣ್ಯರು ಸಂದಭೋìಚಿತವಾಗಿ ಮಾತನಾಡಿದರು. ನೂತನ ಅಧ್ಯಕ್ಷರಾಗಿ ಮರುನೇಮಕಗೊಂಡ ಸುರೇಂದ್ರ ಪಿ. ರೈ ಅವರು ಮಾತನಾಡಿ, ಅಸೋಸಿಯೇಶನ್‌ನ ಸದಸ್ಯರುಗಳ ಮಾಹಿತಿಗೆ ಬೇಕಾಗಿ ಇಂದು ವಿವಿಧ ಕ್ಷೇತ್ರಗಳಲ್ಲಿನ ಪರಿಣತರನ್ನು ಆಹ್ವಾನಿಸಿದ್ದೇವೆ. ಅವರು ನೀಡಿದ ಮಾರ್ಗದರ್ಶನ, ಸಲಹೆಯನ್ನು ಅರ್ಥೈಯಿಸಿಕೊಂಡು ಉದ್ಯಮದಲ್ಲಿ ಯಶಸ್ಸನ್ನು ಕಾಣುವುದಕ್ಕೆ ಪ್ರಯತ್ನಿಸೋಣ. ವಿಶೇಷವಾಗಿ ಜಿಎಸ್‌ಟಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಜೊತೆಗೆ ಜೀವವಿಮಾದ ಬಗ್ಗೆ, ಮಹಾನಗರ ಗ್ಯಾಸ್‌ನ ಬಗ್ಗೆ ಮತ್ತು ಮಧ್ಯದ ಸ್ಕೀಮ್‌ಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ತನ್ನ ಮೂರು ವರ್ಷಗಳ ಸೇವೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದರ ಮೂಲಕ ಮುಂದೆಯೂ ತಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಅಸೋಸಿಯೇಶನ್‌ಗೆ ಸದಾಯಿರಲಿ ಎಂದು ನುಡಿದರು.

ಅತಿಥಿಗಳು, ಪದಾಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷ ಭಗವಾನ್‌ ಆಳ್ವ, ಪದ್ಮನಾಭ ಶೆಟ್ಟಿ ಮೊದಲಾದವರು ದೀಪಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು. ಕಾರ್ಯದರ್ಶಿ ದಿವಾಕರ ಶೆಟ್ಟಿ ಪ್ರಾರ್ಥನೆಗೈದರು. ದಿವಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಆಮಂತ್ರಿತ ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next