Advertisement

ಕುಲ್ಗಾಂವ್‌ನಲ್ಲಿ ಎನ್‌ಕೌಂಟರ್‌: ನಾಲ್ಕು ಉಗ್ರರು ಹತ

03:45 AM Feb 13, 2017 | Team Udayavani |

ಕುಲ್ಗಾಂವ್‌: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್‌ನಲ್ಲಿ ಭಾನುವಾರ ಬೆಳಗ್ಗೆಯೇ ಉಗ್ರರು ಹಾಗೂ ಪೊಲೀಸರ ನಡುವೆ ಕಾಳಗ ನಡೆದಿದೆ. ಅದರಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಮತ್ತು ಲಷ್ಕರ್‌-ಎ-ತೊಯ್ಬಾ ಸಂಘಟನೆಯ ನಾಲ್ವರು ಉಗ್ರರು ಹತರಾಗಿದ್ದಾರೆ. 

Advertisement

ಈ ಸಂದರ್ಭದಲ್ಲಿ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ. ಜತೆಗೆ 15 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡ ಒಬ್ಬ ಅಸುನೀಗಿದ್ದಾರೆ. ಗ್ರಾಮದಲ್ಲಿರುವ ಕಟ್ಟಡದಲ್ಲಿ ಎರಡೂ ಸಂಘಟನೆಗಳ ಉಗ್ರರು ಅಡಗಿದ್ದಾರೆಂದು ಭದ್ರತಾ ಪಡೆಗಳು ಅಲ್ಲಿಗೆ ಧಾವಿಸಿ ಶರಣಾಗತರಾಗುವಂತೆ ಸೂಚಿಸಿದವು. ಅದನ್ನು ತಿರಸ್ಕರಿಸಿದ ಉಗ್ರರು ಗುಂಡು ಹಾರಿಸಿದರು. 

ಬೆಳಗ್ಗೆ 3.30ರ ವೇಳೆಗೆ ಕಾರ್ಯಾಚರಣೆ ಆರಂಭವಾಯಿತು. ಆರಂಭದಲ್ಲಿ ಪೊಲೀಸರೇ ಗುಂಡು ಹಾರಿಸಿ ಅವರನ್ನು ತೆರವುಗೊಳಿಸಲು ಪ್ರಯತ್ನಿಸಿದರೂ, ಬೆಳಗ್ಗೆ 4 ಗಂಟೆ ವೇಳೆಗೆ ರಾಷ್ಟ್ರೀಯ ರೈಫ‌ಲ್ಸ್‌ನ ಯೋಧರು ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡರು.  ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಲಾನ್ಸ್‌ ನಾಯಕ್‌ ರಘವೀರ್‌ ಸಿಂಗ್‌, ಗೋಪಾಲ್‌ ಸಿಂಗ್‌ ಬಡೋದರಿಯಾ ಎಂಬ ಯೋಧರು ಹುತಾತ್ಮರಾಗಿದ್ದಾರೆ. ಸೇನಾಧಿಕಾರಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. 

ಇದಾದ ಬಳಿಕ ಅಲ್ಲಿ ಸ್ಥಳೀಯರು ಸೇನೆ ವಿರುದ್ಧ ಘೋಷಣೆ ಕೂಗಿ ಕಲ್ಲೆಸೆದಿದ್ದಾರೆ. ಅಸುನೀಗಿದ ಉಗ್ರರು ಸ್ಥಳೀಯರೇ ಆಗಿರುವುದು ಜನರ ಕೋಪಕ್ಕೆ ಕಾರಣ.  ಹೀಗಾಗಿ ಯೋಧರು ಗುಂಡು ಹಾರಿಸಿದ್ದರಿಂದ 15 ಮಂದಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳದಿಂದ ನಾಲ್ಕು ಗನ್‌ಗಳನ್ನು ಮತ್ತು ಸಜೀವ ಮದ್ದುಗುಂಡುಗಳನ್ನು  ವಶಪಡಿಸಿಕೊಳ್ಳಲಾಗಿದೆ.

ಭಾನುವಾರದ ಕಾರ್ಯಾಚರಣೆ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್‌ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಿಂದಲೇ  ಉಗ್ರ ಕೃತ್ಯಗಳು ಪ್ರಾಯೋಜಿತಗೊಳ್ಳುತ್ತಿವೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next