ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಕುಲ್ ದೀಪ್ ಸಿಂಗ್ ಸೆಂಗಾರ್ ದೋಷಿ ಎಂದು ದಿಲ್ಲಿ ಸೆಷನ್ಸ್ ಕೋರ್ಟ್ ಕಳೆದ ಡಿಸೆಂಬರ್ ತಿಂಗಳಿನಲ್ಲಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶ ವಿಧಾನಸಭೆ ಹೊರಡಿಸಿರುವ ಪ್ರಕಟಣೆಯಲ್ಲಿ, ಉನ್ನಾವ್ ಜಿಲ್ಲೆಯ ಬಂಗಾರ್ ಮೌ ಕ್ಷೇತ್ರದ ಶಾಸಕ ಸ್ಥಾನದಿಂದ ಸೆಂಗಾರ್ ನನ್ನು 2019ರ ಡಿಸೆಂಬರ್ 20ರಂದು ವಜಾಗೊಳಿಸಲಾಗಿದ್ದು, ಈ ಸ್ಥಾನ ತೆರವುಗೊಂಡಿರುವುದಾಗಿ ತಿಳಿಸಿತ್ತು.
ನಾಲ್ಕು ಬಾರಿ ಕುಲ್ ದೀಪ್ ಶಾಸಕರಾಗಿ ಆಯ್ಕೆಯಾಗಿದ್ದು, ಮಾಖಿ ಗ್ರಾಮದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ದೂರು ದಾಖಲಾಗಿತ್ತು. ಆದರೆ 2017ರಲ್ಲಿ ಯುವತಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ನಿವಾಸದ ಎದುರೇ ಬೆಂಕಿಹಚ್ಚಿಕೊಳ್ಳಲು ಯತ್ನಿಸಿದ್ದಳು.
ನಂತರ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಪೊಲೀಸರು ಬಂಧಿಸಿದ್ದರು. ಎರಡು ದಿನಗಳ ನಂತರ ತಂದೆ ಕಸ್ಟಡಿಯಲ್ಲಿಯೇ ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದ ಪರಿಣಾಮ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಶಾಸಕ ಕುಲ್ ದೀಪ್ ಸೆಂಗಾರ್ ಮತ್ತು ಸಹೋದರ ಅತುಲ್ ಸೆಂಗಾರ್ ನನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ದಿಲ್ಲಿ ಸೆಷನ್ಸ್ ಕೋರ್ಟ್ ದೋಷಿ ಕುಲ್ ದೀಪ್ ಸೆಂಗಾರ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.