ದ ಹೇಗ್(ಅಂತಾರಾಷ್ಟ್ರೀಯ ನ್ಯಾಯಾಲಯ): ಪಾಕಿಸ್ತಾನದಲ್ಲಿ ಭಾರತೀಯ ಗೂಢಚಾರಿಯಾಗಿದ್ದು, ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಪ್ರೇರೇಪಿಸುತ್ತಿದ್ದ ಎಂದು ಆರೋಪಿಸಿ ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್ ಗೆ ನೀಡಿದ್ದ ಮರಣ ದಂಡನೆ ಶಿಕ್ಷೆಗೆ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿ ತನ್ನ ತೀರ್ಪು ಪ್ರಕಟಿಸಿದೆ.
ಕುಲಭೂಷಣ್ ಜಾಧವ್ ಗೆ ಪಾಕ್ ಕೋರ್ಟ್ ವಿಧಿಸಿದ್ದ ಗಲ್ಲುಶಿಕ್ಷೆಗೆ ತಡೆ ನೀಡುವ ಮೂಲಕ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ. ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದ್ದು, ಪಾಕ್ ಮತ್ತೊಮ್ಮೆ ತೀರ್ಪನ್ನು ಮರುಪರಿಶೀಲಿಸಲಿ ಎಂದು ಹೇಗ್ ಕೋರ್ಟ್ ನಿರ್ದೇಶನ ನೀಡಿದೆ.
42 ಪುಟಗಳ ಆದೇಶ ಪ್ರತಿಯಲ್ಲಿ, ಅಂತಾರಾಷ್ಟ್ರೀಯ ನ್ಯಾಯಾಲಯದ 16 ಮಂದಿ ಜಡ್ಜ್ ಗಳ ಪೈಕಿ 15 ಮಂದಿ ನ್ಯಾಯಾಧೀಶರು ಭಾರತದ ಪರ ತೀರ್ಪು ನೀಡಿದ್ದಾರೆ.
ಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡಬೇಕೆಂದು ಅಂತಾರಾಷ್ಟ್ರೀಯ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಜಾಧವ್ ಭೇಟಿಗೆ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿಗೆ ಅವಕಾಶ ನೀಡಬೇಕೆಂದು ಮಹತ್ವದ ತೀರ್ಪು ನೀಡಿದೆ.
ಭಾರತದ ಗೂಢಚಾರಿ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ಸೇನಾ ಕೋರ್ಟ್ ವಿಧಿಸಿದ್ದ ಮರಣದಂಡನೆ ಶಿಕ್ಷೆ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. 2017ರ ಮೇ 8ರಿಂದ ಹೇಗ್ ನ್ಯಾಯಾಲದಲ್ಲಿ ವಿಚಾರಣೆ ನಡೆದಿತ್ತು.
ಹೇಗ್ ನಲ್ಲಿನ ಶಾಂತಿ ಭವನದಲ್ಲಿ (ಪೀಸ್ ಪ್ಯಾಲೇಸ್) ಭಾರತೀಯ ಕಾಲಮಾನ ಪ್ರಕಾರ ಬುಧವಾರ ಸಂಜೆ 6.30ಕ್ಕೆ ಪ್ರಕರಣದ ಅಂತಿಮ ಸುತ್ತಿನ ತೀರ್ಪನ್ನು ನೀಡಿದೆ. ನೆದರ್ ಲ್ಯಾಂಡ್ ನಲ್ಲಿರುವ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಅಬ್ದುಲ್ ಖ್ವಾವಿ ಅಹ್ಮದ್ ಯೂಸುಫ್ ನೇತೃತ್ವದ ನ್ಯಾಯಾಧೀಶರ ಪೀಠ ತೀರ್ಪನ್ನು ಪ್ರಕಟಿಸಿದ್ದಾರೆ.