ಹೊಸದಿಲ್ಲಿ : ಪಾಕಿಸ್ಥಾನದ ಮಿಲಿಟರಿ ಕೋರ್ಟ್‌ನಿಂದ ಮರಣ ದಂಡನೆಯ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ದ ಹೇಗ್‌ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಭಾರತವೇ ಮೊದಲಾಗಿ ಸಂಪರ್ಕಿಸಿ ತಡೆಯಾಜ್ಞೆ ತಂದಿತ್ತು ಎಂದು ಈ ವರೆಗೆ ನಂಬಲಾಗಿತ್ತು.
ಆದರೆ ಇದೀಗ ತಿಳಿದು ಬಂದಿರುವ ಪ್ರಕಾರ ಪಾಕ್ ಮಿಲಿಟರಿ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ನೀಡುವ ಕೆಲವು ದಿನಗಳ ಮೊದಲೇ ಪಾಕ್ ಸರಕಾರ, ದ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಈ ಸಂಬಂಧ ಘೋಷಣಾ ಪತ್ರವೊಂದನ್ನು ಸಲ್ಲಿಸಿತ್ತು.
“ಪಾಕಿಸ್ಥಾನದ ರಾಷ್ಟ್ರೀಯ ಭದ್ರತೆಯ ವಿಷಯವು ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಂಗ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂಬುದನ್ನು ಪಾಕ್ ಸರಕಾರ ಐಸಿಜೆಗೆ ಸಲ್ಲಿಸಿದ್ದ ತನ್ನ ಘೋಷಣಾ ಪತ್ರದಲ್ಲಿ ಸ್ಪಷ್ಟಪಡಿಸಿತ್ತು. ಮತ್ತು ಆ ಮೂಲಕ, ಒಂದೊಮ್ಮೆ ಭಾರತ ಐಸಿಜೆಯನ್ನು ಸಂಪರ್ಕಿಸಿದಲ್ಲಿ ಅದಕ್ಕೆ ಯಾವುದೇ ನ್ಯಾಯದ ಪರಿಹಾರ ಸಿಗದಿರಲಿ ಎಂಬುದು ಅದರ ಹುನ್ನಾರವಾಗಿತ್ತು !
ಕುಲಭೂಷಣ್ ಜಾಧವ್ ಮರಣ ದಂಡನೆ ವಿಷಯದಲ್ಲಿ ಭಾರತ ಸರಕಾರ ನ್ಯಾಯವನ್ನು ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಹೋದೀತು ಎಂಬುದನ್ನು ಮೊದಲೇ ಶಂಕಿಸಿದ್ದ ಪಾಕ್ ಸರಕಾರ, ತನ್ನ ಮಿಲಿಟರಿ ನ್ಯಾಯಾಲಯವು ಜಾಧವ್‌ಗೆ ಮರಣ ದಂಡನೆಯ ಶಿಕ್ಷೆಯನ್ನು ಘೋಷಿಸುವ ಕೆಲವು ದಿನಗಳ ಮೊದಲೇ ಐಸಿಜೆಗೆ “ನಮ್ಮ ರಾಷ್ಟ್ರೀಯ ಭದ್ರತಾ ವಿಷಯವು ನಿಮ್ಮ ನ್ಯಾಯಾಂಗ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಸಾರುವ ಘೋಷಣಾ ಪತ್ರವನ್ನು ಸಲ್ಲಿಸಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಕುಲಭೂಷಣ್ ಜಾಧವ್‌ಗೆ ಗಲ್ಲು ಶಿಕ್ಷೆ ನೀಡುವ ಸಂಕಲ್ಪ ಪಾಕ್ ಸರಕಾರಕ್ಕೆ ಈ ಮೊದಲೇ ಇದ್ದು ತನ್ನ ಈ ನಡೆಯಲ್ಲಿರುವ ಅಂತಾರಾಷ್ಟ್ರೀಯ ನ್ಯಾಯದ ಲೋಪ ದೋಷಗಳನ್ನುಸರಿಪಡಿಸುವುದೇ ಪಾಕಿಸ್ಥಾನ ಸರಕಾರದ ಉದ್ದೇಶವಾಗಿತ್ತು ಎಂಬುದೀಗ ಸ್ಪಷ್ಟವಾಗಿದೆ ಎಂದು ಉನ್ನತ ಮೂಲಗಳು ಹೇಳಿರುವುದನ್ನು ಉಲ್ಲೇಖೀಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.