Advertisement

ವರ್ಷದೊಳಗೆ ಕುಲಶೇಖರ-ಕಾರ್ಕಳ ಚತುಷ್ಪಥ ಕಾಮಗಾರಿ

09:52 AM Jun 13, 2020 | sudhir |

ಮಂಗಳೂರು: ಕುಲಶೇಖರ- ಮೂಡುಬಿದಿರೆ- ಕಾರ್ಕಳ ಮಧ್ಯೆ 45 ಮೀಟರ್‌ ಅಗಲದ ಚತುಷ್ಪಥ ಕಾಮಗಾರಿ 6 ತಿಂಗಳೊಳಗೆ ಟೆಂಡರ್‌ ಹಂತಕ್ಕೆ ಬಂದು ವರ್ಷದೊಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದ ಫ‌ಲ್ಗುಣಿ ನದಿಗೆ ನಿರ್ಮಾಣಗೊಂಡ ನೂತನ ಸೇತುವೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕುಲಶೇಖರ- ಕಾರ್ಕಳ ರಸ್ತೆಯ ಸರ್ವೆ, ವಿನ್ಯಾಸ, ಈಗಾಗಲೇ ಪೂರ್ಣಗೊಂಡಿದೆ. 20 ಗ್ರಾಮಗಳ ಪೈಕಿ 18 ಗ್ರಾಮಗಳಲ್ಲಿ ತ್ರೀಡಿ ಕೂಡ ಪೂರ್ಣಗೊಂಡಿದೆ. ಈ ಹೆದ್ದಾರಿಗೆ 2014ರಲ್ಲಿ ಅನುಮೋದನೆ ಸಿಕ್ಕಿದ್ದರೂ ರಸ್ತೆಯ ಅಗಲ 45 ಮೀ.ಗಳಿಂದ 35 ಮೀ.ಗೆ ಕಡಿತಗೊಳಿಸಬೇಕು ಎಂಬ ಚರ್ಚೆ ಬಂದ ಕಾರಣ ತಡವಾಗಿತ್ತು. ಆದರೆ ಕೇಂದ್ರ ಸರಕಾರ ಈಗ 45 ಮೀ. ಮಾಡಲೇಬೇಕೆಂದು ಹೇಳಿದ್ದರಿಂದ ಅದೇ ಮಾದರಿಯಲ್ಲಿ ರಸ್ತೆ ನಿರ್ಮಾಣಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಕ್ಷಿಪ್ರವಾಗಿ ಪೂರ್ಣಗೊಂಡ ಗುರುಪುರ ಸೇತುವೆ ಕಾಮಗಾರಿ ರೀತಿಯಲ್ಲಿಯೇ ಎರಡು ವರ್ಷದೊಳಗೆ ಈ ಹೆದ್ದಾರಿಯು ಪೂರ್ಣಗೊಳ್ಳಲಿದೆ ಎಂದರು.

ಸಂಸದರು ರಾಜ್ಯಕ್ಕೆ ಮಾದರಿ: ಕೋಟ ಗುರುಪುರ ಸೇತುವೆಯನ್ನು ಕೇವಲ  16 ತಿಂಗಳಲ್ಲಿ ಮುಗಿಸುವ ಮೂಲಕ ಸಂಸದರು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘಿಸಿದರು.

ಟೀಕೆಗಳಿಗೆ ಅಭಿವೃದ್ಧಿ ಉತ್ತರ: ಭರತ್‌ ಶೆಟ್ಟಿ
ಸ್ವಾಗತಿಸಿದ ಶಾಸಕ ಡಾ| ಭರತ್‌ ಶೆಟ್ಟಿ ಮಾತನಾಡಿ, ಗಂಜಿಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌, ಐಟಿ ಪಾರ್ಕ್‌ ಯೋಜನೆಗೆ ಈ ನೂತನ
ಸೇತುವೆ ನಿರ್ಮಾಣ ಮೂಲಕ ಸಹಕಾರಿಯಾಗಿದೆ. ನಳಿನ್‌ ಅವರು ಗುರುಪುರ ಸೇತುವೆ ತ್ವರಿತವಾಗಿ ಮಾಡುವ ಮೂಲಕ ಎಲ್ಲ ಟೀಕೆಗಳಿಗೂ ತಕ್ಕ ಉತ್ತರ ನೀಡಿದ್ದಾರೆ ಎಂದರು.

Advertisement

ಗುರುಪುರ ಸೇತುವೆ ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಮುಗ್ರೋಡಿ ಕನ್‌ಸ್ಟ್ರಕ್ಷನ್‌ನ ಮಾಲಕ ಡಿ. ಸುಧಾಕರ್‌ ಶೆಟ್ಟಿ ಅವರನ್ನು ಸಂಸದ ನಳಿನ್‌ ಅವರು ಸಮ್ಮಾನಿಸಿದರು. ನಳಿನ್‌ ಮತ್ತು ಇತರರನ್ನು ಗ್ರಾಮಸ್ಥರ ಪರವಾಗಿ ವರ್ಧಮಾನ ದುರ್ಗಾಪ್ರಸಾದ್‌ ಶೆಟ್ಟಿ ಮುಂತಾದವರು ಸಮ್ಮಾನಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರವಿಶಂಕರ್‌ ಮಿಜಾರು, ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ, ತಾ.ಪಂ. ಸದಸ್ಯ ಸಚಿನ್‌ ಅಡಪ, ಪಂ. ಉಪಾಧ್ಯಕ್ಷ ಉದಯ್‌ ಭಟ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ರಾ.ಹೆ.ಯ ಎಇಇ ರಮೇಶ್‌, ಎಂಜಿನಿಯರ್‌ ಜಿ.ಎನ್‌. ಹೆಗ್ಡೆ, ಎಂಜಿನಿಯರ್‌ ಕೇಶವಮೂರ್ತಿ, ಕೀರ್ತಿ ಅಮೀನ್‌ ಉಪಸ್ಥಿತರಿದ್ದರು.

ಮರವೂರಿನಲ್ಲಿ ಕೋಸ್ಟ್‌ಗಾರ್ಡ್‌ ತರಬೇತಿ ಕೇಂದ್ರ
ಅಡ್ಡಹೊಳೆ-ಬಿ.ಸಿ. ರೋಡ್‌ ರಸ್ತೆ ಕಾಮಗಾರಿ ಕಾರಣಾಂತರಗಳಿಂದ ತಡವಾಗಿತ್ತು. ಈಗ ಅದೂ ಕೂಡ ಇತ್ಯರ್ಥವಾಗಿ 3 ಹಂತದ ಪ್ಯಾಕೇಜ್‌ ಮಾಡಲಾಗಿದ್ದು, 2ರ ಟೆಂಡರ್‌ ಕೂಡ ಪೂರ್ಣವಾಗಿದೆ. ಗುರುಪುರದ ಗಂಜಿಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ಗೆ ಅನುಮೋದನೆ ಸಿಕ್ಕಿದೆ. ಕೊಚ್ಚಿಯ ಪಾಲಾಗಿದ್ದ ಕೋಸ್ಟ್‌ಗಾರ್ಡ್‌ ತರಬೇತಿ ಕೇಂದ್ರವನ್ನು ಮರವೂರಿನಲ್ಲಿ ನಿರ್ಮಿಸಲು ಅನುಮೋದನೆ ಸಿಕ್ಕಿದ್ದು 1,000 ಜನರಿಗೆ ಅವಕಾಶ ಸಿಗಲಿದೆ. ಮೀನುಗಾರಿಕಾ ಜೆಟ್ಟಿ ನಿರ್ಮಾಣವೂ ಸಾಕಾರಗೊಳ್ಳಲಿದೆ.
– ನಳಿನ್‌ ಕುಮಾರ್‌ ಕಟೀಲು ಸಂಸದ, ದಕ್ಷಿಣ ಕನ್ನಡ ಜಿಲ್ಲೆ

ಟೀಕಾಕಾರರು ನಮ್ಮ ಒಳಿತು ಬಯಸುವವರು!
ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ರಾಜಕೀಯದಲ್ಲಿ ಟೀಕೆ-ಟಿಪ್ಪಣಿಗಳು ಸಾಮಾನ್ಯ. ನಿಂದಕರಿದ್ದಾಗ ಮಾತ್ರ ಕೆಲಸ ಮಾಡಲು ಇಚ್ಛಾಶಕ್ತಿ, ವೇಗ ಸಿಗುತ್ತದೆ. ನಿಂದಕರು ಯಾವತ್ತೂ ನಮ್ಮ ಒಳಿತನ್ನು ಬಯಸುವವರು. ಹೊಗಳುವವರು ನಮ್ಮನ್ನು ಮುಗಿಸುವವರು ಎಂದೇ ಆಲೋಚಿಸಬೇಕು. ಹೀಗಾಗಿ ಟೀಕೆಗಳನ್ನು ನಾನು ಯಾವತ್ತೂ ಸ್ವೀಕಾರ ಮಾಡುತ್ತೇನೆ ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಪಕ್ಷದ ರಾಜಕಾರಣಿಗಳ ಕೊಡುಗೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next