ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಮುಖ ವಾಣಿ ಅಮೂಲ್ಯ ತ್ತೈಮಾಸಿಕದ 20 ನೇ ಹುಟ್ಟುಹಬ್ಬ ಆಚರಣೆಯು ಅ. 28ರಂದು ವಡಾಲದ ಎನ್‌ಕೆಇಎಸ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕುಲಾಲ ಸಂಘ ಮುಂಬಯಿ ಇದರ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ನಡೆದ ಈ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಅವರು ವಹಿಸಿದ್ದರು.
ಅಮೂಲ್ಯ ತ್ತೈಮಾಸಿಕದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಾಫಲ್ಯ ಮಾಸಿಕದ ಸಂಪಾದಕಿ ಡಾ| ಜಿ. ಪಿ. ಕುಸುಮಾ ಅವರು, 20 ವರ್ಷಗಳ ಹಿಂದೆ ಡಾ| ಸುನೀತಾ ಎಂ. ಶೆಟ್ಟಿ ಅವರು ವಡಾಲದ ಇದೇ ವೇದಿಕೆಯಲ್ಲಿ ಅಮೂಲ್ಯ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದರು. ಅಪಾರ ಜನ ಲೇಖಕರರು, ಕವಿಗಳು ಇದರಿಂದ ಬೆಳಕಿಗೆ ಬರುವಂತಾಗಲು ಪ್ರೇರಣಾಶಕ್ತಿಯಾಗಿರುವ ಅಮೂಲ್ಯ 20 ನೇ ವರ್ಷದ ಹುಟ್ಟುಹಬ್ಬಕ್ಕಾಗಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಗೊಳಿಸುತ್ತಿರುವುದು ಅಭಿಮಾನದ ವಿಷಯವಾಗಿದೆ. ಸಮಾಜದ ಅಂಕು- ಡೊಂಕುಗಳನ್ನು ಸರಿಪಡಿ ಸುವ ಶಕ್ತಿ ಪತ್ರಿಕೆಗಿದೆ. ಸಂಘದ ಮುಖ ವಾಣಿಗಳು, ಸಂಘದ ಆಗು ಹೋಗುಗಳನ್ನು ಮತ್ತು ಅದರ ಕೀರ್ತಿಯನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. 1884 ರಲ್ಲಿ ಉತ್ತರ ಕರ್ನಾಟಕದವರಿಂದ ಮುಂಬಯಿಯಲ್ಲಿ ಕನ್ನಡ ಪತ್ರಿಕೆ ಪ್ರಾರಂಭವಾಯಿತು. ಬಳಿಕ ಮುಖವಾಣಿಯಾಗಿ ಬೆಳೆದದ್ದು ಮೊಗವೀರ ಸಮಾಜದವರ ಮೊಗವೀರ ಮಾಸ ಪತ್ರಿಕೆ. ಪ್ರಸ್ತುತ ಎಲ್ಲಾ ಸಮಾಜದ ಸಂಘಟನೆಗಳು ತಮ್ಮ ಮುಖವಾಣಿಗಳನ್ನು ಪ್ರಕಟಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಮರಾಠಿ ಮಣ್ಣಿನಲ್ಲಿ ಕನ್ನಡ ಭಾಷಾಭಿಮಾನವನ್ನು ಪತ್ರಿಕೆಗಳು ಉಳಿಸಿಕೊಂಡಿವೆ. ಬಹುತೇಕ ಲೇಖಕರು ಸಾಹಿತ್ಯ ಲೇಖನಗಳನ್ನು ಅಮೂಲ್ಯ ಪ್ರಕಟಿಸುತ್ತಲೇ ಬಂದಿದೆ. ಇಂಗ್ಲಿಷ್ ಲೇಖನಗಳು ಕೂಡ ಮುಖವಾಣಿಯಲ್ಲಿ ಪ್ರಕಟ ಗೊಳ್ಳುತ್ತಿರುವುದು ಒಳ್ಳೆಯ ಪ್ರಕ್ರಿಯೆಯಾಗಿದೆ. ಸಂಪಾದಕರಿಗೆ ಪತ್ರಿಕೆಯ ಜವಾಬ್ದಾರಿ ಹೆಚ್ಚಿದೆ. ಅಮೂಲ್ಯದ ಸಂಪಾದಕ ಶಂಕರ್ ವೈ. ಮೂಲ್ಯ ಅವರು ಬಹಳಷ್ಟು ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಪತ್ರಿಕೆ ಮುದ್ರಣವಾಗುತ್ತಿರುವ ಆರತಿ ಪ್ರಿಂಟರ್ನ ವಾಮನ್ ಮೂಲ್ಯ ಅವರ ಕನ್ನಡಾಭಿಮಾನ, ತಾಳ್ಮೆ ಮೆಚ್ಚುವಂಥದ್ದಾಗಿದೆ. ಕನ್ನಡಿಗರ ಕೈಂಕರ್ಯಕ್ಕೆ ಆರತಿ ಪ್ರಿಂಟರ್ನ ಮಾಲಕ ಜಯರಾಜ್ ಸಾಲ್ಯಾನ್ ಅವರ ಕೊಡುಗೆ ಅಪಾರವಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ದೇವದಾಸ್ ಎಲ್. ಕುಲಾಲ್ ಅವರು ಮಾತನಾಡಿ, ಮುಖವಾಣಿ ಹುಟ್ಟಿಕೊಂಡ ನಂತರ ಸಂಘದ ಚಟುವಟಿಕೆಗಳು ಸಮಾಜಕ್ಕೆ ಹತ್ತಿರವಾಗುತ್ತಿದೆ. ಸಮಾಜದ ಬಹುತೇಕ ಬರಹಗಾರರನ್ನು ಮಾಸಿಕವು ಬೆಳೆಸಿದೆ ಎಂದು ನುಡಿದರು. ಅಮೂಲ್ಯದ ಸಂಪಾದಕ ಶಂಕರ ವೈ. ಮೂಲ್ಯ ಅವರು ಅಮೂಲ್ಯ ಪತ್ರಿಕೆಯ ಹುಟ್ಟು-ಬೆಳವಣಿಗೆಯನ್ನು ವಿವರಿಸಿ, ಈ ಹಿಂದೆಯೇ ಅಮೂಲ್ಯದ ಸಂಪಾದಕರು ಪತ್ರಿಕೆಯ ಬೆಳವಣಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ. ಅವರ ಶ್ರಮದಿಂದ ಇಂದು ಪತ್ರಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ಪತ್ರಿಕೆ ಮತ್ತಷ್ಟು ಬೆಳೆಯಲು ಜಾಹೀರಾತಿನ ಅಗತ್ಯ ವಿದೆ. ಸಮಾಜದ ಬಂಧುಗಳು ವಿವಿಧ ಜಾಹಿರಾತುಗಳನ್ನು ನೀಡಿ ಪತ್ರಿಕೆ ಯನ್ನು ಬೆಳೆಸಬೇಕು. ಸಮಾಜದ ಪ್ರತಿಯೊಬ್ಬರ ಮನೆ ಯಲ್ಲೂ ಅಮೂಲ್ಯ ಪತ್ರಿಕೆ ಇರುವಂತಾಗಲು ಎಲ್ಲರೂ ಚಂದಾ ದಾರರಾಗಬೇಕು. ಪತ್ರಿಕೆ ಎಲ್ಲಾ ರೀತಿಯ ಬರವಣಿಗೆಗಳನ್ನು ಕಳುಹಿಸಿ, ಪತ್ರಿಕೆಯ ಅಂದವನ್ನು ಹೆಚ್ಚಿಸಬೇಕು. ಸಮಾಜ ಬಾಂಧವರ ಮತ್ತು ಓದುಗರ ಸಹಕಾರದೊಂದಿಗೆ ಪತ್ರಿಕೆ 20 ವರ್ಷ ಪೂರೈಸಿದೆ ಎನ್ನಲು ಸಂತೋಷವಾಗುತ್ತಿದೆ ಎಂದರು.
ಸಂಪಾದಕ ಮಂಡಳಿಯ ರಘುನಾಥ ಕರ್ಕೇರ ಅವರು ಕಾರ್ಯಕ್ರಮ ನಿರ್ವಹಿಸಿದರು. ರಘು ಬಿ. ಮೂಲ್ಯ ವಂದಿಸಿದರು. ಡಾ| ಜಿ. ಪಿ. ಕುಸುಮಾ ಅವರನ್ನು ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್ ಅವರು ಗೌರವಿಸಿದರು.
ವೇದಿಕೆಯಲ್ಲಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರುಗಳಾದ ಗಿರೀಶ್ ಬಿ. ಸಾಲ್ಯಾನ್, ಆನಂದ ಬಿ. ಮೂಲ್ಯ, ದೇವದಾಸ್ ಕುಲಾಲ್, ಕರುಣಾಕರ ಸಾಲ್ಯಾನ್, ಆನಂದ ಬಿ. ಮೂಲ್ಯ, ಡಿ. ಐ. ಮೂಲ್ಯ, ಪಿ.ಶೇಖರ್ ಮೂಲ್ಯ, ರಘುನಾಥ್ ಎಸ್. ಕರ್ಕೇರ, ವಾಮನ್ ಮೂಲ್ಯ ಆದ್ಯಪಾಡಿ, ಸೂರಜ್ ಎಸ್. ಹಂಡೇಲು, ಕೃಷ್ಣ ಮೂಲ್ಯ ನಲಸೋಪರ, ವಿನಯ್‌ಕುಮಾರ್ ಇ. ಕುಲಾಲ್ ಉಪಸ್ಥಿತರಿದ್ದರು.
ಫೋಟೊ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರತೀ ವರ್ಷದಂತೆ ಈ ಬಾರಿಯೂ ನಾಸಿಕ್ ಹೊಟೇಲ್ ಉದ್ಯಮಿ ಸಂಜೀವ ಬಂಗೇರ ಅವರ ಪ್ರಾಯೋಜಕತ್ವದ ಬಹುಮಾನವನ್ನು ಅಧ್ಯಕ್ಷ ದೇವದಾಸ್ ಕುಲಾಲ್ ಅವರು ವಿತರಿಸಿ ಶುಭಹಾರೈಸಿದರು.