Advertisement

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

10:02 PM Nov 27, 2024 | Team Udayavani |

ಸುರತ್ಕಲ್‌: ಕುಳಾಯಿ ಜೆಟ್ಟಿಯು ನಾಡದೋಣಿ ಮೀನುಗಾರಿಕೆಗೆ ಪೂರಕವಾಗಿಲ್ಲ ಎಂಬ ನಾಡದೋಣಿ ಸಂಘಟನೆಗಳ ಮನವಿಗೆ ಪೂರಕವಾಗಿ ಸ್ಪಂದಿಸಿರುವ ರಾಜ್ಯದ ಮೀನುಗಾರಿಕೆ ಸಚಿವ ಮಂಕಾಳ್‌ ವೈದ್ಯ ಅವರು, ಜೆಟ್ಟಿಯನ್ನು ಸರ್ವಋತು ಬಂದರನ್ನಾಗಿ ಮಾಡುವ ಉದ್ದೇಶದಿಂದ ಚೆನ್ನೈ ಐಐಟಿಯಿಂದ ವರದಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ನಾಡದೋಣಿ ಮೀನುಗಾರರ ಬೇಡಿಕೆಗೆ ಸ್ಪಂದಿಸಿ ಬುಧವಾರ ಎರಡನೇ ಬಾರಿ ಭೇಟಿ ನೀಡಿ ಮೀನುಗಾರರ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

40-50 ವರ್ಷ ಹಿಂದಿನ ಯೋಜನೆ ಮಾದರಿ ಈಗಿನ ಸಮುದ್ರದ ಪ್ರಕೃತಿಗೆ ಪೂರಕವಾಗಿಲ್ಲ. ಮೀನುಗಾರರ ಸಲಹೆಯನ್ನು ಪಡೆದು ಎನ್‌ಎಂಪಿಎ ಕಾಮಗಾರಿ ಕೈಗೊಳ್ಳಬೇಕಿತ್ತು. ನಾಡದೋಣಿ ಮೀನುಗಾರರ ಬೇಡಿಕೆಯಂತೆ ಮಾಡದೆ ನಿಮ್ಮ ಹಠಮಾರಿ ದೋರಣೆಯಿಂದ ಭವಿಷ್ಯದಲ್ಲಿ ಜೆಟ್ಟಿ ಯಾರಿಗೂ ಪ್ರಯೋಜನವಾಗದೆ ನೂರಾರು ಕೋಟಿ ರೂ. ಪೋಲಾಗುವ ಸಾಧ್ಯತೆಯಿದೆ. ನಿಮ್ಮಿಂದ ಮಾಡಲು ಸಾಧ್ಯವಾಗುವುದಾದರೆ ಈ ಸಭೆಯಲ್ಲೇ ಸ್ಪಷ್ಟವಾಗಿ ಹೇಳಿ. ಸಾಧ್ಯವಾಗದಿದ್ದಲ್ಲಿ ನಾನು ತೀರ್ಮಾನಿಸುತ್ತೇನೆ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.

ಶಾಸಕ ಡಾ| ಭರತ್‌ ಶೆಟ್ಟಿ ಮಾತನಾಡಿ, ಬಂದರು ನಿರ್ಮಿಸಲು ಮೀನುಗಾರರ ವಿರೋಧವಿಲ್ಲ. ನಾಡದೋಣಿ ಮೀನುಗಾರಿಕೆಗೂ ಅನುಕೂಲವಾಗುವ ಸರ್ವಋತು ಬಂದರು ನಿರ್ಮಿಸಬೇಕಿದೆ. ಈಗಿರುವ ಜೆಟ್ಟಿಯ ನಕ್ಷೆಯನ್ನು ಎನ್‌ಎಂಪಿಎ ಅಧಿಕಾರಿಗಳು ಮೀನುಗಾರರ ಸಲಹೆಯಂತೆ ಬದಲಿಸಿ ಮುಂದುವರಿದರೆ ಸಮಸ್ಯೆ ಇರದು ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ನಾಡದೋಣಿ ಮೀನುಗಾರರ ಸುರಕ್ಷೆ ನಿಟ್ಟಿನಲ್ಲಿ ಬ್ರೇಕ್‌ವಾಟರ್‌ ನಿರ್ಮಾಣ ಸರಿಯಾಗಿ ನಡೆಯಬೇಕಿದೆ. ಮೀನುಗಾರರ ಬೇಡಿಕೆಯನ್ನು ಸರಕಾರ ಪರಿಗಣಿಸಬೇಕು. ಈ ಬಗ್ಗೆ ಸಚಿವರ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಮೀನುಗಾರರ ಪರವಾಗಿ ದ.ಕ. ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ಥ್ ಕಾಂಚನ್‌ ಬೇಡಿಕೆ ಮಂಡಿಸಿ, ಸರ್ವಋತು ಬಂದರು ನಿರ್ಮಾಣ, ಬ್ರೇಕ್‌ ವಾಟರ್‌ ಬದಲಾವಣೆ, ಮುಖ್ಯವಾಗಿ ನಾಡದೋಣಿಗೆ ಪೂರಕವಾಗಿ ಬಂದರು ನಿರ್ಮಿಸುವುದು ಮತ್ತಿತರ ಬೇಡಿಕೆ ಮಂಡಿಸಿದರು. ಈಗ ನಿರ್ಮಾಣವಾಗುತ್ತಿರುವ ಬಂದರು ಕಾಮಗಾರಿ ಮುಂದುವರಿದರೆ ಮೀನುಗಾರರ ಸಾವುನೋವಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.ನಾಡದೋಣಿ ಮೀನುಗಾರರ ಪರವಾಗಿ ಸುರೇಶ್‌ ಶ್ರೀಯಾನ್‌ ಮಾತನಾಡಿದರು.

ಮನಪಾ ಸದಸ್ಯೆ ವೇದಾವತಿ, ನಯನಾ ಕೋಟ್ಯಾನ್‌, ಮೂಲಮೀನುಗಾರರ ಸಂಘದ ಸಂಘಟನ ಕಾರ್ಯದರ್ಶಿ ಚಂದ್ರಶೇಖರ ಶ್ರೀಯಾನ್‌ ಗುಡ್ಡೆಕೊಪ್ಲ, ರಾಜೇಶ್‌ ಸಾಲ್ಯಾನ್‌ ಬೈಕಂಪಾಡಿ, ಉದಯ್‌ ಗುಡ್ಡೆಕೊಪ್ಲ, ರಾಜೇಶ್‌ ಮುಕ್ಕ, ಹನೀಫ್ ಜೋರ ಮುಕ್ಕ, ಅಧಿಕಾರಿಗಳು ಉಪಸ್ಥಿತರಿದ್ದರು.

ಕಿರು ಜೆಟ್ಟಿ ನಿರ್ಮಾಣದಲ್ಲಿ ಮೀನುಗಾರರ ಸುರಕ್ಷೆಗೆ ಆದ್ಯತೆ ಅಗತ್ಯ. ನಾಡದೋಣಿ ಮೀನುಗಾರಿಕೆಗೆ ಪ್ರಾಶಸ್ತ್ಯ ಸಿಗುವಂತೆ ಇಲ್ಲಿನ ಬ್ರೇಕ್‌ ವಾಟರ್‌ ನಿರ್ಮಾಣ ಮಾಡಿಲ್ಲ. ಐಐಟಿ ಚೆನ್ನೈಯಿಂದ ಜೆಟ್ಟಿ ನಿರ್ಮಾಣದ ಬಗ್ಗೆ ವರದಿ ತಯಾರಿಸಿ, ಮೀನುಗಾರರ ಸಲಹೆಯಂತೆ ಮುಂದಿನ ಕಾಮಗಾರಿ ನಡೆಸಲು ಎನ್‌ಎಂಪಿಎ ಜತೆ ಸಭೆ ನಡೆಸಿ ರಾಜ್ಯ ಸರಕಾರದ ತೀರ್ಮಾನ ತಿಳಿಸಲಾಗುವುದು.
-ಮಂಕಾಳ್‌ ವೈದ್ಯ, ಮೀನುಗಾರಿಕೆ ಸಚಿವರು

ಬ್ರೇಕ್‌ವಾಟರ್‌ ಉದ್ದ ಹೆಚ್ಚಿಸಿ
ಪ್ರಸ್ತುತ ಇರುವ ಉತ್ತರದ ಬ್ರೇಕ್‌ ವಾಟರ್‌ನ ಉದ್ದವನ್ನು 831ರಿಂದ ಸರಾರಸರಿ 250 ಮೀಟರ್‌ ಹೆಚ್ಚಿಸಿ ಒಟ್ಟು ಉದ್ದ 1,081 ಮೀಟರ್‌ಗೆ ನಿಗದಿಪಡಿಸಬೇಕು. ದಕ್ಷಿಣದ ಬ್ರೇಕ್‌ ವಾಟರ್‌ನ ಉದ್ದವನ್ನು ಈಗಿರುವ 262 ಮೀಟರ್‌ನಿಂದ ಇನ್ನೂ 719 ಮೀಟರ್‌ ಹೆಚ್ಚಿಸಿ 981 ಮೀಟರ್‌ಗೆ ವಿಸ್ತರಿಸಬೇಕು. (ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್‌ ಮಾತ್ರ ಇರುವಂತೆ) ಸದರಿ ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಪರಿಷ್ಕರಿಸಬೇಕು ಎಂದು ಮೀನುಗಾರರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next