Advertisement

Kulai: ಮೀನುಗಾರಿಕಾ ಕಿರು ಜೆಟ್ಟಿ ನಿರ್ಮಾಣ ಪ್ರಾರಂಭ

03:34 PM May 17, 2023 | Team Udayavani |

ಸುರತ್ಕಲ್‌: ಕಳೆದ ಹಲವಾರು ವರ್ಷಗಳಿಂದ ನಾನಾ ಕಾರಣದಿಂದ ನೆನಗುದಿಗೆ ಬಿದ್ದಿದ್ದ ಕೇಂದ್ರ, ರಾಜ್ಯ ಸರಕಾರ, ಎನ್‌ಎಂಪಿಟಿ ಪಾಲುದಾರಿಕೆಯಲ್ಲಿ ನಿರ್ಮಾಣಗೊಳ್ಳಲಿರುವ ಕುಳಾಯಿ ಹೈಟೆಕ್‌ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಇದ್ದ ಕಾನೂನು ಹೋರಾಟ ಅಂತ್ಯಗೊಂಡಿದ್ದು ನಿರ್ಮಾಣ ಯೋಜನೆ ಆರಂಭಗೊಂಡಿದೆ.

Advertisement

ನಾಲ್ಕಾರು ಜೆಸಿಬಿಗಳು ಸದ್ದು ಮಾಡುತ್ತಿದ್ದು, ಬ್ರೇಕ್‌ ವಾಟರ್‌ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ಸಮುದ್ರ ತೀರದಲ್ಲಿ ತೇಲುವ ಮಾದರಿಯಲ್ಲಿ ದಕ್ಕೆ ನಿರ್ಮಾಣವಾಗಲಿದ್ದು ಎನ್‌ಎಂಪಿಟಿ ಉಸ್ತುವಾರಿ ವಹಿಸಿದೆ. ಈಗಾಗಲೇ ಸ್ಥಳೀಯ ಮೀನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಜೆಟ್ಟಿ ಯಾವ ರೀತಿ ಇರಬೇಕೆಂಬುದನ್ನು ಅಂತಿಮಗೊಳಿಸಲಾಗಿದೆ.

ಹೊಸಬೆಟ್ಟು ಸಮೀಪದ ಹಲವು ಮನೆಗಳು ತೆರವಾಗಲಿದೆ ಎಂಬ ಆತಂಕ ದೂರವಾಗಿದೆ. ಈ ಬಗ್ಗೆ ಶಾಸಕರ ಸಹಿತ ಆಧಿಕಾರಿಗಳು ಮನೆ ತೆರವಿನ ಯೋಜನೆಯಿಲ್ಲ. ಸಮುದ್ರ ತೀರದಲ್ಲೇ ಜೆಟ್ಟಿ ನಿರ್ಮಾಣದ ಯೋಜನೆ ಇದಾಗಿದೆ ಎಂದು ಅಭಯ ನೀಡಿದ್ದು, ಸಮುದ್ರದಂಚಿನ ಮೀನುಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಂದಾಜು 196.6 ಕೋಟಿ ರೂ. ವೆಚ್ಚದಲ್ಲಿ ಕಿರು ಜೆಟ್ಟಿ ನಿರ್ಮಾಣ ಕಾರ್ಯ ನಡೆಯಲಿದೆ. ಕೇಂದ್ರ ಶೇ. 75, ನವಮಂಗಳೂರು ಬಂದರು ಶೇ. 20, ರಾಜ್ಯ ಸರಕಾರ ಶೇ.5 ರಷ್ಟು ಮೊತ್ತ ಭರಿಸಲಿದೆ. ಈಗಿನ ಪರಿಸ್ಥಿತಿಗೆ ಅನುಗುಣವಾಗಿ ವೆಚ್ಚದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

ಯಾವ ರೀತಿ ಇರಲಿದೆ
ಸುಮಾರು 9.75 ಎಕ್ರೆ ಪ್ರದೇಶ ಈ ಜೆಟ್ಟಿ ನಿರ್ಮಾಣಕ್ಕೆ ಅಗತ್ಯವಿದ್ದು, ಮೀನುಗಾರಿಕೆ, ದೋಣಿಗಳ ನಿಲುಗಡೆಗೆ ಸಂಬಂಧಿಸಿದಂತೆ 3 ಮೀಟರ್‌ ಎತ್ತರ, 70 ಮೀಟರ್‌ ಉದ್ದ ಇರಲಿದೆ. ಏಲಂ ಸ್ಥಳ, ನೆಟ್‌ ದುರಸ್ತಿ ಕೇಂದ್ರ, ಮೀನುಗಳನ್ನು ವಾಹನಗಳಿಗೆ ತುಂಬಿಸಲು ಸ್ಥಳಾವಕಾಶ, ದೋಣಿ ದುರಸ್ತಿ, ಶೌಚಾಲಯ, ರೇಡಿಯೋ ಟವರ್‌ ಮತ್ತಿತರ ಮೂಲ ಸೌಕರ್ಯ ಒಳಗೊಂಡಿದೆ. ಜೆಟ್ಟಿಯ ದಕ್ಷಿಣ ಭಾಗದಲ್ಲಿ ಅಂದಾಜು 260 ಮೀಟರ್‌ ಬ್ರೇಕ್‌ ವಾಟರ್‌ ವ್ಯವಸ್ಥೆ, ಉತ್ತರ ಭಾಗದಲ್ಲಿ 760 ಮೀ ಬ್ರೇಕ್‌ ವಾಟರ್‌ ವ್ಯವಸ್ಥೆ ಇರಲಿದೆ. ಜೆಟ್ಟಿ ನಿರ್ಮಾಣದಿಂದ ಕನಿಷ್ಠ 350 ದೋಣಿಗಳ ನಿಲುಗಡೆ ಮಾಡಬಹುದಾಗಿದೆ. ಸ್ಥಳೀಯ ದೋಣಿಗಳು ಈ ಭಾಗದ ಬ್ರೇಕ್‌ ವಾಟರ್‌ ಮೂಲಕವೇ ಕಡಲಿಗೆ ಇಳಿಯಬಹುದಾಗಿದೆ. ವರ್ಷದ 12 ತಿಂಗಳೂ ಮೀನುಗಾರಿಕೆ ನಡೆಸುವ ಸರ್ವಋತು ಬಂದರು ಇದಾಗಲಿದೆ.

ಕಾನೂನಾತ್ಮಕ ಪ್ರಕ್ರಿಯೆ

ಕೇಂದ್ರದ ಸೆಂಟ್ರಲ್‌ ಇನ್ಸ್‌$ಸ್ಟಿಟ್ಯೂಟ್‌ ಆಫ್‌ ಕೋಸ್ಟಲ್‌ ಎಂಜಿನಿಯರಿಂಗ್‌ ಫಿಶರೀಸ್‌(ಸಿಐಸಿಇಎಫ್‌) ಸಂಸ್ಥೆ ಪರಿಶೀಲಿಸಿ ಬಳಿಕ ಆರ್ಥಿಕ ಕಾರ್ಯ ಸಾಧ್ಯತೆ, ಜೆಟ್ಟಿ ನಿರ್ಮಾಣಕ್ಕೆ ಗುರುತಿಸಿದ ಸ್ಥಳದಲ್ಲಿ ಮೀನುಗಾರಿಕೆ ಸಾಧ್ಯವೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಬಳಿಕವೆ ಒಪ್ಪಿಗೆ ನೀಡಿ ವರ್ಷಗಳೇ ಕಳೆದಿದೆ. ಸುದೀರ್ಘ‌ ಪ್ರಕ್ರಿಯೆ ಬಳಿಕ ಆದೇಶ ಪತ್ರ ಇದೀಗ ರಾಜ್ಯ ಸರಕಾರಕ್ಕೆ ಕಳೆದ ಮೂರು ವರ್ಷದ ಹಿಂದೆಯೇ ಬಂದಿದ್ದು ನಿರ್ಮಾಣ ಕಾರ್ಯ ಆರಂಭಿಸಲು ಸ್ಥಳೀಯಾಡಳಿತದಲ್ಲಿ ಪ್ರಾಥಮಿಕ ದಾಖಲೆಗಳು, ಅನುಮತಿ ಮತ್ತಿತರ ಕಾನೂನಾತ್ಮಕ ಪ್ರಕ್ರಿಯೆ ಹೆಚ್ಚು ಸಮಯ ಹಾಗೂ ಸ್ಥಳೀಯರಲ್ಲಿ ಗೊಂದಲವಿದ್ದುದ್ದರಿಂದ ಕಾಮಗಾರಿ ವಿಘ್ನಗಳನ್ನು ನಿವಾರಿಸಿಕೊಂಡು ಆರಂಭಗೊಂಡಿದೆ ಎನ್ನುತ್ತಾರೆ ಸ್ಥಳೀಯ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು.

ಭದ್ರತಾ ವಲಯದ ಹೊರಭಾಗದಲ್ಲಿ ಜೆಟ್ಟಿ
ಮಳೆಗಾಲದಲ್ಲಿ ಮೀನುಗಾರರು ಹವಾಮಾನ ವೈಪರೀತ್ಯದಿಂದ ಅನಿವಾರ್ಯವಾಗಿ ನವಮಂಗಳೂರು ಬಂದರು ಒಳಗೆ ಹೋಗ ಬೇಕಾದ ಸ್ಥಿತಿಯಿದೆ. ಆದರೆ ಹೆಚ್ಚಿನ ಭದ್ರತೆ, ಬೃಹತ್‌ ಹಡಗುಗಳ ಆಗಮನ ಹೆಚ್ಚಳವಾದ ಬಳಿಕ ನೂರಾರು ಮೀನುಗಾರಿಕೆ ದೋಣಿಗಳ ಪ್ರವೇಶಕ್ಕೆ ಸಮಸ್ಯೆಯಾಗುತ್ತಿದೆ. ಇದರ ಜತೆಗೆ ನವಮಂಗಳೂರು ಬಂದರು ನಿರ್ಮಾಣಕ್ಕಾಗಿ ಭೂಮಿ ತ್ಯಾಗ ಮಾಡಿದ ನಿರ್ವಸಿತರಿಗೆ ಜೆಟ್ಟಿ ನಿರ್ಮಿಸಿಕೊಡುವ ಭರವಸೆಯನ್ನು ಕಳೆದ 40 ವರ್ಷಗಳ ಹಿಂದೆಯೇ ಸರಕಾರ ನೀಡಿದ್ದರೂ ಇದೀಗ ನಿರ್ಮಾಣ ಪ್ರಗತಿಯಲ್ಲಿದೆ.

Advertisement

ಉದ್ಯೋಗಾವಕಾಶ
ಕುಳಾಯಿ ಜೆಟ್ಟಿ ನಿರ್ಮಾಣ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ ಇದೀಗ ಬ್ರೇಕ್‌ ವಾಟರ್‌ ಕಾಮಗಾರಿ ನಡೆಯುತ್ತದೆ. ಇಲ್ಲಿ ಮೀನುಗಾರಿಕೆ ನಡೆಸುವ ಸಾವಿರಾರು ಮಂದಿಗೆ ಈ ಸರ್ವ ಋತು ಬಂದರು ಬಹು ಉಪಯೋಗಿಯಾಗಲಿದೆ. ಮಾತ್ರವಲ್ಲ ಮೀನುಗಾರಿಕೆಗೆ ಪೂರಕವಾಗಿ ಗೋದಾಮು, ಐಸ್‌ ಉದ್ಯಮ, ಎಂಜಿನ್‌ ರಿಪೇರಿ, ಬಲೆ ರಿಪೇರಿ,ಅಂಗಡಿ ಮುಗ್ಗಟ್ಟು ಹೀಗೆ ಅನೇಕ ಉದ್ಯೋಗಾವಕಾಶ ತೆರೆದುಕೊಳ್ಳಲಿದೆ. ಜೆಟ್ಟಿ ನಿರ್ಮಾಣದ ಬಳಿಕ ಈ ಭಾಗದಲ್ಲಿ ಸರ್ವ ಋತು ರಸ್ತೆ ವಿಸ್ತರಣೆ, ನಿರ್ಮಾಣದ ಯೋಜನೆಯೂ ಇದೆ.
-ಹರೀಶ್‌ ಕುಮಾರ್‌,
ಸಹಾಯಕ ಉಪನಿರ್ದೇಶಕರು, ದ.ಕ., ಮೀನುಗಾರಿಕಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next