Advertisement

ಕುಳಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಿಲ್ಲ ಸೌಕರ್ಯ

05:48 PM Dec 06, 2021 | Team Udayavani |

ಕುಳಗೇರಿ ಕ್ರಾಸ್‌: ಗ್ರಾಮದ ಎಂಎಲ್‌ಬಿಸಿ ಪಕ್ಕ ಇರುವ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಮೂಲಭೂತ ಸೌಕರ್ಯ ಹಾಗೂ ಸರ್ಕಾರದ ಸೌಲಭ್ಯದಿಂದ ವಂಚಿತವಾಗಿದೆ. ಕನಿಷ್ಠ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳ ಜತೆಗೆ ಶಿಕ್ಷಕರು ಪರದಾಡುವಂತಾಗಿದೆ. ಈ ಶಾಲೆ ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಒಳಪಟ್ಟಿದೆ.

Advertisement

ಶಿಕ್ಷಣಕ್ಕಿಂತ ಭಯವೇ ಜಾಸ್ತಿ: 1ರಿಂದ 7ನೇ ತರಗತಿ ಇರುವ ಈ ಶಾಲೆಯಲ್ಲಿ ಶಿಕ್ಷಕರಿದ್ದರೂ ಪಾಠ ಮಾಡಲು ಸುಸಜ್ಜಿತ ಕೊಠಡಿಗಳಿಲ್ಲ. ಇದ್ದ ಕೆಲವು ಕೊಠಡಿಗಳು ಬಿದ್ದು ನೆಲಕಚ್ಚಿವೆ. ಇನ್ನು ಶಿಥಿಲಗೊಂಡ ಎರಡ್ಮೂರು ಕೊಠಡಿಗಳ ಮೇಲ್ಛಾವಣಿ ನೋಡುತ್ತ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವಂತಾಗಿದೆ. ಅನೇಕ ಬಾರಿ ಮೇಲ್ಛಾವಣಿಯ ಕಾಂಕ್ರಿಟ್‌ ಉದುರಿ ಮಕ್ಕಳ ಮೈಮೇಲೆ ಬಿದ್ದ ಉದಾಹರಣೆಗಳಿವೆ.

ಮುರಿದ ಕಿಟಕಿ ಬಾಗಿಲುಗಳು, ಮಳೆಯಾದರೆ ಸೋರುವ ಕೊಠಡಿ, ಕಾಂಪೌಂಡ್‌ ಇಲ್ಲ. ರಕ್ಷಣೆಯೂ ಇಲ್ಲದೆ ಸಾರ್ವಜನಿಕರಿಗೆ ಮುಕ್ತವಾದ ಶಾಲಾ ಕಟ್ಟಡ. ಶಿಕ್ಷಕರಿಲ್ಲದೆ ಬಳಕೆಯಾಗದ ಕಂಪ್ಯೂಟರ್‌ಗಳಿವೆ. ಸಾಕಷ್ಟು ಮಕ್ಕಳ ಸಂಖ್ಯೆ ಹೊಂದಿದ್ದ ಈ ಶಾಲೆ ಇಂದಿನ ಸ್ಥಿತಿ ಕಂಡು ಮಕ್ಕಳು ಖಾಸಗಿ ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ.

ಸೆಪ್ಟಿಕ್‌ ಟ್ಯಾಂಕ್‌ ಇಲ್ಲದ ಶೌಚಾಲಯ: ಈ ಶಾಲೆಯಲ್ಲಿ ಸುಮಾರು 42 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಓರ್ವ ಶಿಕ್ಷಕ, ಮೂವರು ಶಿಕ್ಷಕಿಯರಿದ್ದಾರೆ. ಶೌಚಾಲಯ ನಿರ್ಮಿಸಲಾಗಿದ್ದರೂ ಸೆಪ್ಟಿಕ್‌ ಟ್ಯಾಂಕ್‌ ಇಲ್ಲ. ಮಕ್ಕಳು ಸೇರಿದಂತೆ ಶಿಕ್ಷಕರಿಗೂ ಸಹ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸುವಂತಾಗಿದೆ. ಸುಸಜ್ಜಿತ ಕಟ್ಟಡ, ಆಟದ ಮೈದಾನ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆಯಿದೆ. ಚಿಕ್ಕ ಮಕ್ಕಳು ಮುಳ್ಳು ಕಂಟಿಗಳ ಮಧ್ಯೆ ಆಟ ಆಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಶಾಲೆಯಲ್ಲಿ ಆಟವಾಡಲು ಮೈದಾನವಿದೆ. ಆವರಣ ಗೋಡೆ ಇರದ ಕಾರಣ ಹಂದಿ-ನಾಯಿ ಸೇರಿದಂತೆ ಪ್ರಾಣಿಗಳ ವಾಸಸ್ಥಾನವಾಗಿದೆ. ಅಲ್ಲದೇ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಆರೋಪವಾಗಿದೆ.

Advertisement

ಸೆಪ್ಟಿಕ್‌ ಟ್ಯಾಂಕ್‌ ಇಲ್ಲದೇ ಶೌಚಾಲಯ ಹೇಗೆ ನಿರ್ಮಿಸಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ. ಅಲ್ಲಿ ಮೂರ್‍ನಾಲ್ಕು ವರ್ಷಗಳ ಹಿಂದೆ ಕಟ್ಟಡ ಕಟ್ಟಲಾಗಿದೆ. ಅವು ಹೇಗೆ ಶಿಥಿಲಗೊಂಡಿವೆ. ಕುಡಿಯುವ ನೀರು ಶೌಚಾಲಯ ಗ್ರಾಪಂನವರಿಗೆ ಸಂಬಂಧಿಸಿದ್ದಾಗಿದೆ. ಒಟ್ಟು ನಾಲ್ಕು ಕೊಠಡಿಗಳಿದ್ದು, ಒಂದು ಕೊಠಡಿಯಲ್ಲಿ ನೆಮ್ಮದಿ ಕೇಂದ್ರ ಇದೆ. ಅದನ್ನೂ ಕೊಡುವೆ. ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ಹೊಸ ಕಟ್ಟಡ ಸಿಗುತ್ತಿಲ್ಲ. ಶಾಲೆಗೆ ಭೇಟಿ ನೀಡಿ ಮಾಡಹಿತಿ ಪಡೆದು ಕ್ರಮ ಕೈಗೊಳ್ಳುವೆ.
ಎಂ ಪಿ ಮಾಗಿ
ಕ್ಷೇತ್ರ ಶಿಕ್ಷಣಾಧಿಕಾರಿ ಬಾದಾಮಿ.

ಈ ಶಾಲೆಯಲ್ಲಿ ಮೂಲ ಸೌಲಭ್ಯಗಳಿಲ್ಲ. ಇದ್ದ ಎಲ್ಲ ಕೊಠಡಿಗಳು ಶಿಥಿಲಗೊಂಡಿವೆ. ಈ ಕುರಿತು ಸಾಕಷ್ಟು ಬಾರಿ ಲಿಖೀತವಾಗಿ ಅರ್ಜಿ ಸಲ್ಲಿಸಲಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿ ಕಾರಿಗಳು ಈ ಶಾಲೆಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಬೇಕು.
ಆರ್‌. ಎಸ್‌. ಹಿರೇಮಠ,
ಎಸ್‌ಡಿಎಂಸಿ ಅಧ್ಯಕ್ಷರು

ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next