ಕುಳಗೇರಿ ಕ್ರಾಸ್: ಗ್ರಾಮದಲ್ಲಿ ಕಳವು ಪ್ರಕರಣ ಹೆಚ್ಚುತ್ತಿವೆ. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ ಬೈಕ್ ಪೆಟ್ರೋಲ್ ಕದಿಯುತ್ತಿದ್ದ ಖದಿಮರು ಈ ಬಾರಿ ಬೆಲೆ ಬಾಳುವ ಬೈಕ್‌ಗಳನ್ನೇ ಕದ್ದು ಪರಾರಿಯಾದ ಘಟನೆ ನಡೆದಿದೆ.
ಗ್ರಾಮದ ಪ್ರವಾಸಿ ಮಂದಿರದ ಪಕ್ಕದಲ್ಲಿನ ಬಸವ ನಗರದ ಬಡಾವಣೆಯಲ್ಲಿನ ಬಿ ಎಸ್ ಹುಳ್ಳಿಯವರಿಗೆ ಸೇರಿದ ಎರೆಡು ಬೈಕ್ ಹಾಗೂ ಶಿಕ್ಷಕ ಕುಂಬಾರ ಅವರಿಗೆ ಸೇರಿದ ಒಂದು ಬೈಕ್ ಸೇರಿ ಮೂರು ಬೈಕ್ ಕದಿಯಲು ಪ್ರಯತ್ನಿಸಿದ ಮೂರು ಜನ ಕಳ್ಳರು ಸ್ಟಾರ್ಟ್ ಆಗದೇ ಇದ್ದ ಒಂದು ಬೈಕ್ ಅಲ್ಲಿಯೇ ಬಿಟ್ಟು ಎರೆಡು ಬೈಕ್ ಕದ್ದು ಪರಾರಿಯಾಗಿದ್ದಾರೆ.
ತಡರಾತ್ರಿ ಸಮಯದಲ್ಲಿ ಮೂರು ಜನ ಯುವಕರ ಪಡೆ ಕಿವಿಯಲ್ಲಿ ಮೋಬೈಲ್ ಹಿಡಿದು ಮಾತನಾಡುತ್ತ ಅತ್ತಿಂದಿತ್ತ ಓಡಾಡುತ್ತಿರುವ ದೃಷ್ಯ ಸೇರಿದಂತೆ ಬೈಕ್ ಕದ್ದು ಪರಾರಿಯಾಗುವ ದೃಶ್ಯ ಅಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪ್ರಕರಣ ಧಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇಂತಹ ದೊಡ್ಡ ಪ್ರಕರಣಗಳು ಸೇರಿದಂತೆ ಸಣ್ಣ-ಪುಟ್ಟ ಕಳ್ಳತನ ಪ್ರಕರಣಗಳು ಗ್ರಾಮದಲ್ಲಿ ನಡೆಯುತ್ತಲೇ ಇವೆ. ಕಳ್ಳತನಗಳಾಗುತ್ತಿದ್ದರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದರೂ ಕಳ್ಳರಿಗೆ ಇದ್ಯಾವುದರ ಭಯ ಇಲ್ಲದಂತಾಗಿದೆ.
ಪೊಲೀಸರಿಲ್ಲದ ಠಾಣೆ: ಹೌದು ಗ್ರಾಮದಲ್ಲಿ ಪೊಲೀಸ್ ಠಾಣೆ ಇದೆ ಆದರೆ ಸಿಬ್ಬಂದಿಗಳೇ ಇರೋದಿಲ್ಲ ಈ ಕುರಿತು ಬಾದಾಮಿ ಪಿಎಸ್‌ಐ ನಿಂಗಪ್ಪ ಪೂಜಾರ ಅವರನ್ನ ಕೇಳಿದರೆ ಒಂದೇ ಉತ್ತರ ಸಿಬ್ಬಂದಿ ಕೊರತೆ.
ಗ್ರಾಮದಲ್ಲಿನ ನಮ್ಮ ಉಪಠಾಣೆಯಲ್ಲಿ ಕಾರ್ಯನಿರ್ವಹಿಸಬೇಕಾದ ೫ ಜನ ಸಿಬ್ಬಂದಿಗಳಲ್ಲಿ ೩ ಜನ ಮಾತ್ರ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಾರೆ. ಸುಮಾರು 40 ಹಳ್ಳಿಗೆ 3 ಜನ ಸಿಬ್ಬಂದಿ ಕಾರ್ಯನಿರ್ವಹಿಸುದು ಹೇಗೆ?
ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಅಪಘಾತ/ಅಪರಾದ ಪ್ರಕರಣಗಳು ಹೆಚ್ಚುತ್ತಿವೆ. ಸಂಬಂದಿಸಿದ ಅಧಿಕಾರಿಗಳು ಹೆಚ್ಚು ಸಿಬ್ಬಂದಿ ಕೊಡುವ ಮೂಲಕ ಹೆಚ್ಚುತ್ತಿರುವ ಅಪರಾದ ಪ್ರಕರಣಗಳನ್ನ ತಡೆದು ಸಾರ್ವಜನಿಕರ ನೆಮ್ಮದಿ ಕಾಪಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.