Advertisement

ಕುಕ್ಕುಂದೂರು: 36 ಸೋಲಾರ್‌ ದೀಪಗಳ ಬ್ಯಾಟರಿ ಕಳವು

06:00 AM Jul 03, 2018 | Team Udayavani |

ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾಕಲಾಗಿದ್ದ ಸೋಲಾರ್‌ ದೀಪಗಳ ಬ್ಯಾಟರಿಗಳು ಕಳೆದ ಐದಾರು ತಿಂಗಳ ಹಿಂದೆ ಕಳವಾಗಿದ್ದು, ಪಂಚಾಯತ್‌ಗೆ ಅಂದಾಜು 3 ಲಕ್ಷ ರೂ. ನಷ್ಟ ಉಂಟಾಗಿದೆ. ಹೀಗಾಗಿ ಮುಂದೆ ಸೋಲಾರ್‌ ದೀಪ ಅಳವಡಿಸದೆ ವಿದ್ಯುತ್‌ ದೀಪಗಳನ್ನು ಅಳವಡಿಸಲು ಪಂಚಾಯತ್‌ ಚಿಂತನೆ ನಡೆಸಿದೆ.

Advertisement

14ನೇ ಹಣಕಾಸು ಯೋಜನೆ ಹಾಗೂ ಕುಕ್ಕುಂದೂರು ಗ್ರಾ.ಪಂ.ನಿಂದ ಪಂಚಾಯತ್‌ ವ್ಯಾಪ್ತಿಯ ಕೆಲವು ಆಯ್ದ ಪ್ರದೇಶಗಳಲ್ಲಿ ಸುಮಾರು 52 ಸೋಲಾರ್‌ ದೀಪಗಳನ್ನು ಅಂದಾಜು 7 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿತ್ತು. ಆ ಪೈಕಿ ಒಟ್ಟು 36 ದೀಪಗಳ ಬ್ಯಾಟರಿಗಳನ್ನು ಕಳವುಗೈದಿದ್ದಾರೆ. 2016-17ನೇ ಸಾಲಿನಲ್ಲಿ ದೀಪಗಳನ್ನು ಅಳವಡಿಸಿದ್ದು, ಒಂದೇ ವರ್ಷದೊಳಗೆ ಬ್ಯಾಟರಿಗಳ ಕಳ್ಳತನವಾಗಿದೆ.

ಒಂದೇ ದಿನದಲ್ಲಿ 20 ಬ್ಯಾಟರಿ ಕಳವು…
ಕುಕ್ಕುಂದೂರು ಗ್ರಾ.ಪಂ. ವ್ಯಾಪ್ತಿಯ ನಕ್ರೆ ಭಾಗದಲ್ಲಿ ಗ್ರಾಮೀಣ ಭಾಗ ಇರುವ ಹಿನ್ನೆಲೆಯಲ್ಲಿ ಆ ಭಾಗಕ್ಕೆ ಹೆಚ್ಚು ಸೋಲಾರ್‌ ದೀಪಗಳನ್ನು ಅಳವಡಿಸಲಾಗಿತ್ತು. ಕಳೆದ ನಾಲ್ಕು ತಿಂಗಳ ಹಿಂದೆ ಒಂದೇ ರಾತ್ರಿಯಲ್ಲಿ ಆ ಭಾಗದಿಂದ ಅಂದಾಜು 20 ಬ್ಯಾಟರಿಗಳನ್ನು ಕಳವುಗೈಯಲಾಗಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಜಾರ್ಕಳ ಭಾಗದಲ್ಲಿ ಅಧಿಕ ಬ್ಯಾಟರಿಗಳ ಕಳವಾಗಿದೆ.

ಸೂಕ್ತ ಭದ್ರತೆಯಿಲ್ಲ
ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲದ ಕೆಲವು ಭಾಗಗಳಿಗೆ ಸೋಲಾರ್‌ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಅದಕ್ಕೆ ಸೂಕ್ತ ಭದ್ರತೆ ಇಲ್ಲದ ಕಾರಣ 36 ದೀಪಗಳ ಬ್ಯಾಟರಿ ಕಳವಾಗಿದೆ. ಇನ್ನು ಮುಂದೆ ಅದನ್ನು ಸರಿಪಡಿಸಿದರೂ ಉಳಿಯುತ್ತದೆ ಎನ್ನುವ ಗ್ಯಾರಂಟಿಯೂ ಪಂಚಾಯತ್‌ಗೆ ಇಲ್ಲ. ಹೀಗಾಗಿ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಇರುವ ಹಾಗೂ ವಿದ್ಯುತ್‌ ತಂತಿ ಎಳೆದು ಸಾಧ್ಯವಾಗುವ ಭಾಗಗಳಿಗೆ ವಿದ್ಯುತ್‌ ದೀಪಗಳನ್ನೇ ಅಳವಡಿಸಲು ಪಂಚಾಯತ್‌ ಚಿಂತನೆ ನಡೆಸಿದೆ.

ಇನ್ನೂ ಪತ್ತೆಯಾಗದ ಕಳ್ಳರುಳ್ಳತನದ ಬಗ್ಗೆ ಈಗಾಗಲೇ ಕಾರ್ಕಳ ನಗರ ಠಾಣೆಗೆ ಅಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಅಲ್ಲದೇ ನಕ್ರೆಯಲ್ಲಿ ಕಳ್ಳತನ ನಡೆಸಿ ಪರಾರಿಯಾಗುತ್ತಿದ್ದ ವೇಳೆ ಸ್ಥಳೀಯರೊಬ್ಬರು ವಾಹನದ ಸಂಖ್ಯೆಯನ್ನು ನೋಡಿ ಪಂಚಾಯತ್‌ಗೆ ತಿಳಿಸಿದ್ದು, ಆ ಸಂಖ್ಯೆಯನ್ನೂ ಠಾಣೆಗೆ ನೀಡಲಾಗಿದೆ ಎನ್ನಲಾಗುತ್ತಿದೆ.

Advertisement

ಸೋಲಾರ್‌ ದೀಪ ಅಳವಡಿಕೆ ಕಷ್ಟ
ಪಂಚಾಯತ್‌ನ ಗ್ರಾಮಾಂತರ ಪ್ರದೇಶಗಳನ್ನು ಆಯ್ದುಕೊಂಡು ಸೋಲಾರ್‌ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಅಂತಹ ಪ್ರದೇಶಗಳಲ್ಲಿ ಸೋಲಾರ್‌ ದೀಪಗಳನ್ನು ಅಳವಡಿಸುವುದು ಕಷ್ಟ. ಆ ಬ್ಯಾಟರಿ ಬಾಕ್ಸ್‌ಗೆ ಲಾಕ್‌ ಇರುವುದಿಲ್ಲ. ಮೊಬೈಲ್‌ ಬ್ಯಾಟರಿಯಲ್ಲಿರುವ ಸಂಖ್ಯೆಯಂತೆ ಸೋಲಾರ್‌ ದೀಪಗಳ ಪ್ರತೀ ಬ್ಯಾಟರಿಗಳಿಗೆ ಸಂಖ್ಯೆಗಳಿವೆ.
– ಸುಧಾಕರ್‌ ಶೆಟ್ಟಿ, 
ಕುಕ್ಕುಂದೂರು ಗ್ರಾಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next