Advertisement

Belthangady: ಕುಕ್ಕೇಡಿ ಸ್ಫೋಟ ಪ್ರಕರಣ: ಹಲವು ಆಯಾಮಗಳಲ್ಲಿ ವಿಚಾರಣೆ

09:30 PM Feb 03, 2024 | Team Udayavani |

ಬೆಳ್ತಂಗಡಿ: ವೇಣೂರಿನ ಸಮೀಪದ ಕುಕ್ಕೇಡಿ ಗ್ರಾಮದ ಗೋಳಿಯಂಗಡಿಯ ಕಡ್ತಾರು ಎಂಬಲ್ಲಿ ಸುಡುಮದ್ದು ಘಟಕದಲ್ಲಿ ಉಂಟಾದ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಿಬ್ಬರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Advertisement

ಘಟನೆಯಿಂದ ಮೂವರು ಕಾರ್ಮಿಕರು ಸಾವಿಗೀಡಾಗಿದ್ದರು. ಈಗಾಗಲೆ ಅವರ ಮೃತದೇಹ ಡಿಎನ್‌ಎ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ಬಂದ ಬಳಿಕ ಕುಟುಂಬಕ್ಕೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಉಳಿದಂತೆ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಇತರ ಇಲಾಖೆಗಳಿಂದ ಸ್ಥಳದ ತನಿಖೆ ಬಹುತೇಕ ಪೂರ್ಣಗೊಂಡಿದೆ.

ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದ ಘಟಕದ ಮಾಲಕ ಸೈಯದ್‌ ಬಶೀರ್‌ ಹಾಗೂ ಘಟಕಕ್ಕೆ ಕಾರ್ಮಿಕರನ್ನು ಒದಗಿಸಿದ್ದ ಹಾಸನದ ಕಿರಣ್‌ ಫೆ. 5ರ ತನಕ ಪೊಲೀಸ್‌ ಕಸ್ಟಡಿಯಲ್ಲಿರಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲವು ಸುತ್ತಿನ ವಿಚಾರಣೆಗಳು ನಡೆದಿವೆ. ಪ್ರತ್ಯೇಕ ತಂಡಗಳು ಬೇರೆ ಬೇರೆ ಆಯಾಮಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ.

ಘಟನೆಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆಗೆ ಪೂರಕ ವರದಿ ಸಿದ್ಧಪಡಿಸಿವೆ. ಸ್ಥಳದಲ್ಲಿ ಸಿಕ್ಕಿರುವ ಸುಡುಮದ್ದು ತಯಾರಿ ಕಚ್ಚಾವಸ್ತು ಹಾಗೂ ಸ್ಫೋಟದ ವೇಳೆ ಸ್ಥಳದಲ್ಲಿದ್ದ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇನ್ನು ವರದಿ ಬಂದ ಬಳಿಕ ಸ್ಫೋಟದ ನೈಜ ಕಾರಣ ತಿಳಿಯಬಹುದಾಗಿದೆ.

ಪೊಲೀಸ್‌ ನಿಯೋಜನೆ‌
ಬಂಧಿತರು ಫೆ. 5ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸುವ ಪ್ರಕ್ರಿಯೆ ಇರಲಿದೆ. ಈಗಾಗಲೆ ಸ್ಫೋಟಗೊಂಡ ಸ್ಥಳದ 100 ಮೀ. ವ್ಯಾಪ್ತಿಯೊಳಗೆ ಪ್ರವೇಶ ನಿಷೇಧಿಸಿದ್ದು ಸ್ಥಳದಲ್ಲಿ 24 ಗಂಟೆ ಪೊಲೀಸರನ್ನು ನಿಯೋಜಿಸಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಘಟಕದಲ್ಲಿ ಇರುವ ಸುಡುಮದ್ದು ಸಾಗಾಟ ಮತ್ತು ಅವುಗಳ ವಿಲೇವಾರಿ ಪ್ರಕ್ರಿಯೆ ಮುಂದೆ ನಡೆಯಬೇಕಾಗಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ರಿಷ್ಯಂತ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next