Advertisement

ಕುಕ್ಕೆ: ನಾಮನಿರ್ದೇಶಿತ ಸ್ಥಾನಗಳತ್ತ ಹಲವರ ಕಣ್ಣು

10:30 AM Dec 22, 2019 | mahesh |

ಸುಬ್ರಹ್ಮಣ್ಯ: ರಾಜ್ಯ ಧಾರ್ಮಿಕ ಪರಿಷತ್‌ಗೆ ನಾಮನಿರ್ದೇಶಿತ ಸದಸ್ಯರ ಆಯ್ಕೆ ನಡೆದಿದೆ. ಬೆನ್ನಲ್ಲೇ ಅವಧಿ ಮುಗಿದ ಮುಜರಾಯಿ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ಸದಸ್ಯರ ನಾಮನಿರ್ದೇಶನ ಪ್ರಕ್ರಿಯೆಗೆ ಜೀವ ಬಂದಿದೆ.

Advertisement

“ಎ’ ಗ್ರೇಡ್‌ ದೇಗುಲವಾಗಿರುವ ಕುಕ್ಕೆ ದೇವಸ್ಥಾನದ ಆಡಳಿತ ಮಂಡಳಿಯ ಅವಧಿ ಅ. 13ಕ್ಕೆ ಮುಗಿದಿದೆ. ಆದರೆ ಹೊಸ ಸಮಿತಿ ಆಯ್ಕೆ ನಡೆದಿಲ್ಲ. ಉಪಚುನಾವಣೆ ಮುಗಿದು ಸರಕಾರ ಸುಭದ್ರಗೊಂಡಿದ್ದು, ನೇಮಕಾತಿಗೆ ಚಾಲನೆ ಸಿಕ್ಕಿದೆ. ಕುಕ್ಕೆ ದೇವಸ್ಥಾನ ಆದಾಯದಲ್ಲಿ ರಾಜ್ಯಕ್ಕೆ ನಂಬರ್‌ ವನ್‌. ಇಲ್ಲಿನ ಆಡಳಿತ ಮಂಡಳಿ ಅಧ್ಯಕ್ಷ ಹುದ್ದೆ ಮಹತ್ವದ್ದಾಗಿದ್ದು, ಹಲವು ಆಕಾಂಕ್ಷಿಗಳಿದ್ದಾರೆ. ಸಮಿತಿಯ ಸದಸ್ಯರಾಗುವುದಕ್ಕೂ ಹಲವು ಮಂದಿ ಅನ್ಯಾನ್ಯ ಮಾರ್ಗಗಳ ಮೂಲಕ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಸ್ಥಳಿಯವಲ್ಲದೆ ಹೊರ ಜಿಲ್ಲೆಗಳ ಸುಮಾರು 140ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳಿದ್ದಾರೆ ಎನ್ನಲಾಗಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವೂ ಎ ಗ್ರೇಡ್‌ನ‌ದ್ದಾಗಿದ್ದು, ಆಡಳಿತ ಸಮಿತಿಯ ಅವಧಿ ಜೂ. 23ಕ್ಕೆ ಮುಗಿದಿದೆ. ಜಿಲ್ಲೆಯ ಬಹುತೇಕ “ಎ’ ಗ್ರೇಡ್‌ ದೇಗುಲಗಳ ಸಮಿತಿಗಳ ಅವಧಿಯೂ ಇದೇ ರೀತಿ. 3 ವರ್ಷಗಳ ಅವಧಿಗೆ ನೇಮಕವಾಗುವ ಈ ವ್ಯವಸ್ಥಾಪನ ಸಮಿತಿಗಳನ್ನು 2016ರಲ್ಲಿ ನೇಮಿಸಲಾಗಿತ್ತು. “ಬಿ’ ಮತ್ತು “ಸಿ’. ವರ್ಗದ ದೇಗುಲಗಳಿಗೆ ಸಮಿತಿಯನ್ನು ಆಯಾ ಜಿಲ್ಲಾ ಧಾರ್ಮಿಕ ಪರಿಷತ್‌ ನೇಮಕ ಮಾಡುತ್ತದೆ. “ಎ’ ವರ್ಗದ ದೇಗುಲಗಳ ಸಮಿತಿಗೆ ಸದಸ್ಯರನ್ನು ರಾಜ್ಯ ಧಾರ್ಮಿಕ ಪರಿಷತ್‌ ನೇಮಿಸುತ್ತದೆ.

ಹಲವು ಆಕಾಂಕ್ಷಿಗಳು
ಕುಕ್ಕೆ ದೇಗುಲದ ಆಡಳಿತ ಮಂಡಳಿಯಲ್ಲಿ ಸ್ಥಳಿಯರಿಗೆ ಪ್ರಾಶಸ್ತ್ಯ. ಹಿಂದಿನ ಅವಧಿಗಳಲ್ಲಿ ಇದೇ ಸಂಪ್ರದಾಯ ನಡೆದು ಬಂದಿದೆ. ಈ ಬಾರಿಯೂ ಅದು ಪುನರಾವರ್ತಿಸುವ ಸಾಧ್ಯತೆ ಇದ್ದರೂ ಸಾಕಷ್ಟು ಮಂದಿ ಆಕಾಂಕ್ಷಿಗಳಿರುವುದರಿಂದ ಆಯ್ಕೆ ಸವಾಲಾಗಲಿದೆ. ಅರ್ಜಿ ಪರಿಗಣಿಸಿ ಹಂಚಿದರೆ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಮತ್ತು ಅಧಿಕ ಆಕಾಂಕ್ಷಿಗಳಿರುವುದ ರಿಂದ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಕುಕ್ಕೆ ದೇಗುಲದ ಆಡಳಿತ ಸಮಿತಿಯ ನಾಮ ನಿರ್ದೇಶಕರ ಆಯ್ಕೆ ಸಂಬಂಧ ಶೀಘ್ರ ಅರ್ಜಿ ಆಹ್ವಾನಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವೆ. ವಾರದೊಳಗೆ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಅರ್ಜಿ ಸ್ವೀಕಾರ, ಅರ್ಜಿದಾರರ ಅಪರಾಧ ಹಿನ್ನೆಲೆ ಇತ್ಯಾದಿಗಳನ್ನು ಪರಿಶೀಲನೆ ನಡೆದು ಅದು ಪೂರ್ಣಗೊಂಡ ಬಳಿಕ ನೇಮಕವಾಗಲಿದೆ. ಇತರ ದೇಗುಲಗಳ ನೇಮಕಕ್ಕೂ ಕ್ರಮ ವಹಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವರು

  • ಬಾಲಕೃಷ್ಣ ಭೀಮಗುಳಿ
Advertisement
Advertisement

Udayavani is now on Telegram. Click here to join our channel and stay updated with the latest news.

Next