Advertisement

ಕುಕ್ಕೆ ದೇಗುಲ: ಆದಾಯ ಕುಸಿತ ಸಂಭವ; ಆದರೂ ನಂ.1 ವಿಶ್ವಾಸ

02:11 AM May 06, 2019 | sudhir |

ಸುಬ್ರಹ್ಮಣ್ಯ: ಏಳು ವರ್ಷಗಳಲ್ಲಿ ಗಣನೀಯ ಏರಿಕೆ ಕಂಡು 100 ಕೋಟಿ ರೂ. ಸನಿಹ ತಲುಪುವ ನಿರೀಕ್ಷೆಯಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ ಈ ವರ್ಷ ಕುಸಿತ ಕಾಣುವ ಸಾಧ್ಯತೆಯಿದೆ.

Advertisement

ಬೆಂಗಳೂರು-ಮಂಗಳೂರು ರಾ.ಹೆ. ಅಭಿವೃದ್ಧಿ, ಮಳೆ ಮತ್ತು ಭೂಕುಸಿತಗಳಿಂದಾಗಿ ಸಂಚಾರ ವ್ಯತ್ಯಯಗೊಂಡು ಬರುವ ಭಕ್ತರ ಸಂಖ್ಯೆ ಕುಸಿದಿತ್ತು. ಆದಾಯ ಕುಸಿತಕ್ಕೆ ಮುಖ್ಯ ಕಾರಣ ಇದು.

ಮುಜರಾಯಿ ದೇವಸ್ಥಾನಗಳ ಪೈಕಿ ಕುಕ್ಕೆ ದೇಗುಲವು ರಾಜ್ಯ ಸರಕಾರದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುತ್ತಿದೆ. 2017-18ನೇ ಸಾಲಿನಲ್ಲಿ 95.92 ಕೋ.ರೂ ಸಂಗ್ರಹಿಸಿತ್ತು. 7 ವರ್ಷಗಳಿಂದ ಆದಾಯ ಸತತವಾಗಿ ಹೆಚ್ಚುತ್ತ ರಾಜ್ಯದಲ್ಲಿ ನಂಬರ್‌ ವನ್‌ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೂ ದೇಗುಲ ಈ ವರ್ಷ ಎಂಟನೇ ಬಾರಿ ನಂ. ವನ್‌ ಸ್ಥಾನ ಉಳಿದುಕೊಳ್ಳುವ ವಿಶ್ವಾಸವಿದೆ.

ದೇಗುಲ 2016-17ರಲ್ಲಿ 89 ಕೋ.ರೂ. ಆದಾಯಗಳಿಸಿತ್ತು. ಕಳೆದ ವರ್ಷ ಇದು 92.92 ಕೋ.ರೂ.ಗೇರಿತ್ತು. ಈ ವರ್ಷ 100 ಕೋ.ರೂ. ತಲುಪುವ ನಿರೀಕ್ಷೆ ಇತ್ತಾದರೂ 92 ಕೋ.ರೂ.ಗಿಂತ ಹೆಚ್ಚಾಗುವ ಸಾಧ್ಯತೆಯಿಲ್ಲ. ದೇಗುಲದ ಈ ಆರ್ಥಿಕ ವರ್ಷದ ಆಯವ್ಯಯ ಇನ್ನೂ ಘೋಷಣೆಯಾಗಿಲ್ಲ.

ರಸ್ತೆ, ರೈಲು ಸಂಚಾರ ವ್ಯತ್ಯಯ
ಶಿರಾಡಿ ಘಾಟಿ ರಸ್ತೆ 2ನೇ ಹಂತದ ಅಭಿವೃದ್ಧಿಗಾಗಿ ಮೂರು ತಿಂಗಳ ಕಾಲ ರಸ್ತೆ ಬಂದ್‌ ಮಾಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಘಾಟಿಯಲ್ಲಿ ಭೂಕುಸಿತವಾಗಿ ಸಂಚಾರ ವ್ಯತ್ಯಯವಾಗಿತ್ತು. ಮಡಿಕೇರಿ-ಸುಳ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯೂ ಭೂಕುಸಿತದಿಂದ ಸಂಪರ್ಕ ಕಳೆದುಕೊಂಡಿತ್ತು. ಬೆಂಗಳೂರು-ಮಂಗಳೂರು ರೈಲ್ವೇ ಮಾರ್ಗದಲ್ಲೂ ಭೂಕುಸಿತ ಸಂಭವಿಸಿ ಯಾನ ಅಸ್ತವ್ಯಸ್ತಗೊಂಡಿತ್ತು.

Advertisement

ಇದೆಲ್ಲದರ ಪರಿಣಾಮವಾಗಿ ವರ್ಷದುದ್ದಕ್ಕೂ ಕುಕ್ಕೆ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾದದ್ದೇ ಆದಾಯ ಕಡಿಮೆಯಾಗಲು ಮುಖ್ಯ ಕಾರಣ. ದೇಗುಲದ ಕಾಣಿಕೆ, ಹರಕೆ, ನಿತ್ಯದ ಸೇವೆಗಳಲ್ಲಿ ವೃದ್ಧಿಯಾಗದೆ ದೇಗುಲದ ಬೊಕ್ಕಸಕ್ಕೆ ಹೊಡೆತ ಬಿದ್ದಿದೆ ಎನ್ನಲಾಗಿದೆ.

ಅಭಿವೃದ್ಧಿಗೆ ಆದ್ಯತೆ
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 180 ಕೋ.ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಸುಬ್ರಹ್ಮಣ್ಯದ ರಸ್ತೆಗಳ ಅಭಿವೃದ್ಧಿಗೆ 68 ಕೋ.ರೂ.ಗಳನ್ನು ದೇವಸ್ಥಾನದ ಕಡೆಯಿಂದ ಪಿಡಬುÉಡಿ ಇಲಾಖೆಗೆ ಠೇವಣಿ ಇರಿಸಲಾಗಿದೆ. ಭಕ್ತರ ಅನುಕೂಲ ಕಲ್ಪಿಸುವ ಹಲವಾರು ಕಾಮಗಾರಿಗಳಿಗಾಗಿ ದೇಗುಲದ ಆಡಳಿತ ಮಂಡಳಿ 73 ಕೋ.ರೂ.ಗಳಷ್ಟು ಹಣವನ್ನು ತೆಗೆದಿರಿಸಿದೆ. ಈ ಹಣಕ್ಕೆ ಬಡ್ಡಿ ದೊರಕದೆ ಇರುವುದೂ ಆದಾಯ ಇಳಿಕೆಗೆ ಇನ್ನೊಂದು ಕಾರಣ.

ದೇಗುಲದಲ್ಲಿ 400ಕ್ಕೂ ಅಧಿಕ ಖಾಯಂ ಸಿಬಂದಿ ಮತ್ತು 220ಕ್ಕೂ ಅಧಿಕ ದಿನಗೂಲಿ ಸಿಬಂದಿ ಇದ್ದು, ಇವರ ವೇತನಕ್ಕೆ ವಾರ್ಷಿಕ ಸುಮಾರು ಏಳು ಕೋ.ರೂ. ಬೇಕು. ವಾರ್ಷಿಕ ಜಾತ್ರೆ, ಅನ್ನಸಂತರ್ಪಣೆ, ಆನೆ ನಿರ್ವಹಣೆ, ಜಾನುವಾರು ರಕ್ಷಣೆ ಇತ್ಯಾದಿ ಖರ್ಚುಗಳೂ ಇವೆ.

ದೇಗುಲಕ್ಕೆ ದೇಶವಿದೇಶಗಳಿಂದ ಭಕ್ತರು ಆಗಮಿಸು ತ್ತಿದ್ದು, ಬ್ರಹ್ಮರಥೋತ್ಸವ, ವಿವಿಧ ಹರಕೆ ಸೇವೆ, ಕಾಣಿಕೆ, ಛತ್ರಗಳ ಬಾಡಿಗೆ ಮತ್ತು ಕೃಷಿಯಿಂದ ಆದಾಯ ಬರುತ್ತದೆ. ಸರಕಾರದ ನಿಯಮದಂತೆ ಆದಾಯದ ಶೇ.10ರಷ್ಟನ್ನು ಸರಕಾರಕ್ಕೆ ನೀಡಬೇಕಿದೆ.

ನಿರೀಕ್ಷೆ ಇತ್ತು
ಈ ಸಾಲಿನ ಲೆಕ್ಕಪತ್ರ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಕ್ಷೇತ್ರ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತದಿಂದ ಆದಾಯ ಕುಸಿದಿರುವ ಸಂಭಾವ್ಯತೆ ಇದೆ.ಆದರೂ ದೊಡ್ಡ ಪ್ರಮಾಣದ ಇಳಿಕೆ ಇರಲಿಕ್ಕಿಲ್ಲ ಎನ್ನುವ ವಿಶ್ವಾಸವಿದೆ.
– ನಿತ್ಯಾನಂದ ಮುಂಡೋಡಿ
ಅಧ್ಯಕ್ಷರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next