Advertisement

ಕುಕ್ಕೆ ಕ್ಷೇತ್ರ ವಿವಾದ: ಸಮಗ್ರ ತನಿಖೆಗೆ ವಿಹಿಂಪ ಆಗ್ರಹ

09:40 AM Jun 06, 2019 | keerthan |

ಮಂಗಳೂರು: ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಮಠದ ಪಾವಿತ್ರಕ್ಕೆ ಧಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. 3 ದಿನಗಳ ಹಿಂದೆ ದೇವಸ್ಥಾನ ಮತ್ತು ಮಠದ ನಡುವೆ ಸಂಘರ್ಷ ಸೃಷ್ಟಿಸಲು ಯತ್ನಿಸಿದ ಘಟನೆ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸ ಬೇಕು ಎಂದು ವಿಶ್ವಹಿಂದೂ ಪರಿಷತ್‌ ಪ್ರಾಂತ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

Advertisement

ಮಠದ ಸಿಬಂದಿ ಕುಮಾರ ಬನ್ನಿಂತಾಯರ ಮೇಲೆ ಹಲ್ಲೆ ನಡೆಸಿರುವುದು ಆಘಾತಕಾರಿ. ಸಂಚು ರೂಪಿಸಿ ದೇವಸ್ಥಾನ ಮತ್ತು ಮಠದ ನಡುವೆ ಸಂಘರ್ಷ ಸೃಷ್ಟಿಸಲಾಗಿದೆ. ದೇಗುಲದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮತ್ತು
ಸಂಬಂಧಿತ ಅಧಿಕಾರಿಗಳ ಸಮ್ಮುಖವೇ ಘಟನೆ ನಡೆದಿರುವುದು ದುರದೃಷ್ಟಕರ.
ಜಿಲ್ಲಾಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೇವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಮತ್ತು ವ್ಯವಸ್ಥಾಪನ ಮಂಡಳಿಯನ್ನು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ದೇವಸ್ಥಾನ ಮತ್ತು ಮಠ ಪರಸ್ಪರ ಸಂಘರ್ಷ ನಡೆಸಬಾರದು ಎಂದು ವಿಹಿಂಪ ವತಿಯಿಂದ ಎರಡೂ ಕಡೆಯವರಿಗೂ ಈ ಹಿಂದೆಯೇ ಮನವಿ ಮಾಡಲಾಗಿದೆ. ಮಠದಲ್ಲಿ ಸರ್ಪ ಸಂಸ್ಕಾರ ವೈಯಕ್ತಿಕವಾಗಿ ನಡೆಸಲಾಗುತ್ತದೆ. ಆದಕ್ಕಾಗಿ ಮಠದಲ್ಲಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸಾಮೂಹಿಕವಾಗಿ ನಡೆಸಲಾಗುತ್ತದೆ. ಆದರೂ ಮಠದಲ್ಲಿ ಸರ್ಪಸಂಸ್ಕಾರ ನಡೆಸುವು ದರಿಂದ ದೇಗುಲದ ಆದಾಯಕ್ಕೆ ಯಾವುದೇ ಧಕ್ಕೆ ಆಗದು. ಮಠದಲ್ಲಿ ಶ್ರೀ ವಿದ್ಯಾಭೂಷಣ ಸ್ವಾಮೀಜಿ ಅವರ ಕಾಲದಲ್ಲೂ ಸರ್ಪಸಂಸ್ಕಾರ ನಡೆಯುತ್ತಿತ್ತು ಎಂದರು.

ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮಾತನಾಡಿ, ಮಠದ ಸಿಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಾಗಿರುವ ಪ್ರಶಾಂತ್‌ ಭಟ್‌ ಮಾಣಿಲ ಮತ್ತು ಗುರುಪ್ರಸಾದ್‌ ಪಂಜ ಅವರು ವಿಹಿಂಪದ ಯಾವುದೇ ಜವಾಬ್ದಾರಿ ಹೊಂದಿಲ್ಲ. 6 ತಿಂಗಳ ಹಿಂದೆ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.

ಜೂ. 7ರಂದು ಸಾಮರಸ್ಯ ಸಭೆ
ವಿವಾದ ಬಗೆಹರಿಸಿ ಸಾಮರಸ್ಯದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಜೂನ್‌ 7ರಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಕೂಡ ಭಾಗವಹಿಸಲಿದೆ ಎಂದರು.

Advertisement

ಪತ್ರಕರ್ತನ ಮೇಲೆ ಹಲ್ಲೆಗೆ ಖಂಡನೆ
ಪುತ್ತೂರಿನಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ವರದಿ ಮಾಡಲು ತೆರಳಿದ ಖಾಸಗಿ ವಾಹಿನಿ ಸಿಬಂದಿ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಆರೋಪಿ ಗಳನ್ನು ಬಂಧಿಸಿ, ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಸಹ ಗೋರಕ್ಷಾ ಪ್ರಮುಖ್‌ ಜಗದೀಶ ಶೇಣವ, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್‌, ವಿಹಿಂಪ ಕಾರ್ಯದರ್ಶಿ ಶಿವಾನಂದ ಮೆಂಡನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next