Advertisement

ಕುಕ್ಕೆ ಸುಬ್ರಹ್ಮಣ್ಯ: ಬೇಕಿದೆ ರೈಲ್ವೇ ಯಾತ್ರಿಕರ ಮಾಹಿತಿ ಕೇಂದ್ರ

12:21 AM Nov 05, 2019 | mahesh |

ಸುಬ್ರಹ್ಮಣ್ಯ: ಕುಕ್ಕೆ ಕ್ಷೇತ್ರಕ್ಕೆ ಬಂದ ಭಕ್ತರಿಗೆ ಬೆಂಗಳೂರು – ಮಂಗಳೂರು ರೈಲು ಮಾರ್ಗದ ರೈಲು ಯಾನ ಹಾಗೂ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಸಹಿತ ರೈಲ್ವೇಗೆ ಸಂಬಂಧಿಸಿ ಮಾಹಿತಿಗಳನ್ನು ಪಡೆಯುವುದೇ ದೊಡ್ಡ ಸಮಸ್ಯೆ.

Advertisement

ರೈಲ್ವೇಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಸುಬ್ರಹ್ಮಣ್ಯ ಪೇಟೆಯಿಂದ 15 ಕಿ.ಮೀ. ದೂರವಿರುವ ನೆಟ್ಟಣ, ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ರೈಲು ನಿಲ್ದಾಣಕ್ಕೆ ತೆರಳಿ ಪಡೆಯುವ ದುಃಸ್ಥಿತಿ ಈಗ ಇದೆ. ರೈಲ್ವೇ ಮಾಹಿತಿ ಕೇಂದ್ರವನ್ನು ಸುಬ್ರಹ್ಮಣ್ಯ ನಗರದ ಹೃದಯ ಭಾಗದಲ್ಲಿ ತೆರೆದಲ್ಲಿ ಕ್ಷೇತ್ರಕ್ಕೆ ಬರುವ ಯಾತ್ರಿಕರಿಗೆ ಅನುಕೂಲವಾಗಲಿದೆ. ಮಾಹಿತಿಗಾಗಿ ಅಲೆದಾಡುವ ತಾಪತ್ರಯ ನಿಲ್ಲುತ್ತದೆ. ಹಣ, ಸಮಯ ಎರಡೂ ಉಳಿಯುತ್ತದೆ.

ನೆಟ್ಟಣ ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ಮಂಗಳೂರು ಹೊರತುಪಡಿಸಿ ಜಿಲ್ಲೆಯ ಎರಡನೇ ದೊಡ್ಡ ರೈಲು ನಿಲ್ದಾಣ. ಕುಕ್ಕೆ, ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನಿರ್ಮಾಣವಾಗಿದೆ. ಬೆಂಗಳೂರು – ಮಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ಆಗಮಿಸುವ ಭಕ್ತರು ನಿಲ್ದಾಣದಲ್ಲಿ ಇಳಿದು ಕುಕ್ಕೆಯನ್ನು ಸಂದರ್ಶಿಸುತ್ತಾರೆ. ಇತರೆಡೆಗಳಿಗೂ ಸಂಚಾರ ಬೆಳೆಸುತ್ತಾರೆ.

10 ರೈಲುಗಳು
ಕುಕ್ಕೆ ದೇಶದ ಮೂಲೆ ಮೂಲೆಗಳಿಂದ ಅಸಂಖ್ಯಾತ ಭಕ್ತರು, ಯಾತ್ರಿಕರನ್ನು ಆಕರ್ಷಿಸುವ ಪುಣ್ಯ ಕ್ಷೇತ್ರ. ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಬೆಂಗಳೂರು, ಯಶವಂತಪುರ, ಕಾರವಾರ, ಕಣ್ಣೂರು, ಮಂಗಳೂರು ಎಕ್ಸ್‌ಪ್ರೆಸ್‌ ಹಾಗೂ ಮಂಗಳೂರು – ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್‌ ರೈಲು ಓಡಾಟವಿದೆ. ಪ್ರತಿದಿನ ಗೂಡ್ಸ್‌ ಸಹಿತ 9ರಿಂದ 10 ರೈಲುಗಳು ಸುಬ್ರಹ್ಮಣ್ಯದಿಂದ ಸಂಚರಿಸುತ್ತಿವೆ.

ಹತ್ತಾರು ಸಮಸ್ಯೆ
ಕ್ಷೇತ್ರಕ್ಕೆ ರೈಲಿನಲ್ಲಿ ಬರುವ ಭಕ್ತರಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ವಯೋವೃದ್ಧರೂ ಇರುತ್ತಾರೆ. ಜನಸಾಮಾನ್ಯರಿಂದ ಹಿಡಿದು ಶ್ರೀಮಂತರು ಸಹಿತ ಎಲ್ಲ ವರ್ಗದ ಜನರು ರೈಲಿನಲ್ಲಿ ಕ್ಷೇತ್ರಕ್ಕೆ ಬರುತ್ತಾರೆ. ಆದರೆ, ಇಲ್ಲಿಂದ ಮರಳಿ ಹೋಗಲು ಎಷ್ಟು ಹೊತ್ತಿಗೆ ರೈಲು ಇದೆ, ಅದರಲ್ಲಿ ಸ್ಥಳಾವಕಾಶವಿದೆಯೇ ಎಂಬಿತ್ಯಾದಿ ಮಾಹಿತಿ, ಬುಕ್ಕಿಂಗ್‌, ರೈಲುಗಳ ಸಂಚಾರ ಅವಧಿ ತಿಳಿಯಲು ಸಾಧ್ಯವಾಗುತ್ತಿಲ್ಲ. ಸುಬ್ರಹ್ಮಣ್ಯ ನಗರದಿಂದ ದೂರದ ನೆಟ್ಟಣ ರೈಲ್ವೇ ನಿಲ್ದಾಣಕ್ಕೆ ತೆರಳಿ ಮಾಹಿತಿ ಪಡೆಯಬೇಕು. ಸುಬ್ರಹ್ಮಣ್ಯ – ನೆಟ್ಟಣ ರೈಲ್ವೇ ನಿಲ್ದಾಣ ನಡುವೆ ಎಲ್ಲ ಸಮಯದಲ್ಲಿ ಬಸ್‌ ಸಂಚಾರ ಇಲ್ಲ. ಖಾಸಗಿ ವಾಹನ ಬಾಡಿಗೆ ಗೊತ್ತುಪಡಿಸಿ ತೆರಳಬೇಕು.

Advertisement

ರೈಲ್ವೇ ಮಾಹಿತಿ ಸಿಗದೆ ಯಾತ್ರಿಕರು ಪರಿತಪಿಸುತ್ತಿರುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಂಗಳೂರು, ಬೆಂಗಳೂರು, ಮೈಸೂರು, ಕೇರಳ ಭಾಗದಿಂದ ರಸ್ತೆ ಸಂಪರ್ಕ ಇದ್ದರೂ ಬಹುತೇಕ ಮಂದಿ ರೈಲನ್ನೆ ಅವಲಂಬಿಸಿದ್ದಾರೆ. ರೈಲ್ವೇಗೆ ಸಂಬಂಧಿಸಿದ ಪೂರ್ಣ ಮಾಹಿತಿ ದೊರಕುವಂತೆ ಕುಕ್ಕೆ ನಗರದಲ್ಲಿ ರೈಲ್ವೇ ಮಾಹಿತಿ ಕೇಂದ್ರ ತೆರೆಯಬೇಕಿದೆ. ರೈಲ್ವೇ ಇಲಾಖೆ ಅಧಿಕಾರಿಗಳು ಸಂಸದರು, ಜನಪ್ರತಿನಿಧಿಗಳು ಮುತುವರ್ಜಿ ವಹಿಸುವ ಅಗತ್ಯವಿದೆ.

ನೆಟ್‌ವರ್ಕ್‌, ದೂರವಾಣಿ ಅವ್ಯವಸ್ಥೆ
ಶಿರಾಡಿ ಘಾಟಿಯ ಬೆಂಗಳೂರು- ಮಂಗಳೂರು ರೈಲು ಮಾರ್ಗದಲ್ಲಿ ಮಳೆಗಾಲದ ಅವಧಿ ಪ್ರಾಕೃತಿಕ ವಿಕೋಪಗಳು ಸಂಭವಿಸಿ ಭೂಕುಸಿತ, ಹಳಿಗಳಲ್ಲಿ ತಾಂತ್ರಿಕ ದೋಷ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ರೈಲುಗಳ ಓಡಾಟ ಸ್ಥಗಿತವಾಗುತ್ತಿರುತ್ತದೆ. ಇಂತಹ ಸಂದರ್ಭ ರೈಲನ್ನೆ ಅವಲಂಬಿಸಿ ತೆರಳುವ ಯಾತ್ರಿಕರಿಗೆ ರೈಲು ರದ್ದತಿ, ಹೊರಡುವ ಸಮಯ, ವಿಳಂಬ ಇನ್ನಿತರ ಮಾಹಿತಿಗಳು ತತ್‌ಕ್ಷಣಕ್ಕೆ ಗೊತ್ತಾಗುವುದಿಲ್ಲ. ನೆಟ್‌ವರ್ಕ್‌ ಸಮಸ್ಯೆಯೂ ಇರುವುದರಿಂದ ಮೊಬೈಲ್‌ನಲ್ಲೂ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ನೆಟ್ಟಣ ರೈಲು ನಿಲ್ದಾಣದ ಸ್ಥಿರ ದೂರವಾಣಿಯೂ ಆಗಾಗ ಸ್ತಬ್ಧವಾಗುತ್ತದೆ. ಮಾಹಿತಿಯ ಕೊರತೆಯಿಂದ ಭಕ್ತರು, ಯಾತ್ರಿಕರು ಸಂಕಷ್ಟಕ್ಕೆ ಒಳಗಾಗುತ್ತಾರೆ.

ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ರೈಲು ನಿಲ್ದಾಣವಾಗಲು 1964ರಲ್ಲಿ ಸರ್ವೆ ನಡೆದಿತ್ತು. ಜಾಗದ ಅಳತೆಯೂ ಆಗಿತ್ತು. ಆಗ ದೇವಸ್ಥಾನದ ಹತ್ತಿರ ರೈಲು ನಿಲ್ದಾಣವಾದಲ್ಲಿ ಕಳ್ಳರ ಕಾಟ ಹೆಚ್ಚಿ ಭದ್ರತೆಗೆ ತೊಡಕಾಗುತ್ತದೆ ಎಂದು 15 ಕಿ.ಮೀ. ದೂರದ ನೆಟ್ಟಣಕ್ಕೆ ವರ್ಗಾಯಿಸಲಾಗಿತ್ತು. ನೆಟ್ಟಣದಿಂದ ಸುಬ್ರಹ್ಮಣ್ಯಕ್ಕೆ ಹೊಸ ಟ್ರಾಕ್‌ ಎಳೆದು ಮಾರ್ಗ ವಿಸ್ತರಿಸಿದಲ್ಲಿ ಅನುಕೂಲ. ಸದ್ಯಕ್ಕೆ ಮಾಹಿತಿ ಕೇಂದ್ರದ ಜರೂರತ್ತಿದೆ.

ಪತ್ರಕ್ಕೆ ಇಲಾಖೆ ಸ್ಪಂದಿಸಿದೆ
ಸುಬ್ರಹ್ಮಣ್ಯ ನಗರದಲ್ಲಿ ರೈಲ್ವೇ ಮಾಹಿತಿ ಕೇಂದ್ರ ತೆರೆಯುವಂತೆ ರೈಲ್ವೇ ಇಲಾಖೆಗೆ ಸಲಹೆ ರೂಪದಲ್ಲಿ ಮನವಿ ಸಲ್ಲಿಸಿದ್ದೆ. ನನ್ನ ಪತ್ರಕ್ಕೆ ಭಾರತೀಯ ರೈಲ್ವೇ ಇಲಾಖೆ ಸ್ಪಂದನೆ ನೀಡಿದೆ. ಈ ಕುರಿತು ರಾಜ್ಯ ಸರಕಾರದ ಇಲಾಖೆ ಜತೆ ಚರ್ಚಿಸುವ ಬಗ್ಗೆ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
– ನಿತಿನ್‌ ನೂಚಿಲ , ಸುಬ್ರಹ್ಮಣ್ಯ ನಿವಾಸಿ

ಪರಿಶೀಲಿಸಿ ಕ್ರಮ
ರೈಲ್ವೇ ಪ್ರಯಾಣಿಕರಿಗೆ ಸುಬ್ರಹ್ಮಣ್ಯ ಕ್ರಾಸಿಂಗ್‌ ರೋಡ್‌ ರೈಲ್ವೇ ಬುಕ್ಕಿಂಗ್‌ ಸೆಂಟರ್‌ನಲ್ಲಿ ಎಲ್ಲ ಮಾಹಿತಿಗಳನ್ನು ನೀಡಲಾಗುತ್ತಿದೆ. ಯಾತ್ರಿಕರಿಗೆ ಅನುಕೂಲವಾಗಲು ಸುಬ್ರಹ್ಮಣ್ಯ ಕೇಂದ್ರದಲ್ಲಿ ಮಾಹಿತಿ ಕೇಂದ್ರ ತೆರೆಯುವ ಕುರಿತು ಮುಂದೆ ಚಿಂತಿಸಲಾಗುವುದು.
– ವಿಜಯ ಇ , ಪಿಆರ್‌ಒ, ಮೈಸೂರು ರೈಲ್ವೇ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next