ಸುಬ್ರಹ್ಮಣ್ಯ: ಸರ್ಪಸಂಸ್ಕಾರ ವಿಚಾರಕ್ಕೆ ಸಂಬಂಧಿಸಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ದೇವಾಲಯ ಮತ್ತು ಮಠಗಳ ನಡುವಣ ಗೊಂದಲದ ಕುರಿತು ಇತ್ತಂಡಗಳ ಅಭಿಪ್ರಾಯ ಪಡೆಯಲು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅಭಿಪ್ರಾಯ ಪಡೆದ ಬಳಿಕ ವಿವಿಧ ಕ್ಷೇತ್ರಗಳ ಮುಖಂಡರ ಸಮ್ಮುಖ ಸಂಧಾನ ನಡೆಸಲು ಅವರು ನಿರ್ಧರಿಸಿದ್ದಾರೆ.
ಗುರುವಾರ ಕುಕ್ಕೆ ಶ್ರೀ ವ್ಯವಸ್ಥಾಪನ ಸಮಿತಿಯ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ, ಗುರುಪ್ರಸಾದ್ ಪಂಜ ಅವರು ಪೇಜಾವರ ಶ್ರೀಗಳನ್ನು ಉಡುಪಿ ಮಠದಲ್ಲಿ ಭೇಟಿ ಯಾಗಿ ಆಶೀರ್ವಾದ ಪಡೆದು ಸಮಾ ಲೋಚಿಸಿದರು. ಈ ವೇಳೆ ವಿಶ್ವಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಉಪಸ್ಥಿತರಿದ್ದರು.
ಮಾತುಕತೆ ವೇಳೆ ಭಕ್ತರ ಹಿತರಕ್ಷಣ ವೇದಿಕೆ ರಾಜ್ಯಾಧ್ಯಕ್ಷರೂ ಆಗಿರುವ ಮಹೇಶ್ ಕುಮಾರ್ ಕರಿಕ್ಕಳ ಅವರು ಶ್ರೀಗಳ ಮುಂದೆ ಪ್ರಮುಖವಾದ ಮೂರು ಬೇಡಿಕೆಗಳನ್ನು ಇರಿಸಿದ್ದಾರೆ.
ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ ಸಹಿತ ಪ್ರಮುಖ ಸೇವೆ ಗಳನ್ನು ಮಠದಲ್ಲಿ ನಡೆಸಬಾರದು, ಸುಬ್ರಹ್ಮಣ್ಯ ಮಠ ಎನ್ನುವ ಪದಬಳಕೆ ಮಾಡಬಾರದು ಮತ್ತು ದೇವಸ್ಥಾನದ ಒಳಗಿದ್ದ ಮೂಲ ಗಣಪತಿಯನ್ನು ತೆಗೆದ ವಿಚಾರವನ್ನು ಶ್ರೀಗಳ ಗಮನಕ್ಕೆ ತಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು ದೇವಸ್ಥಾನ ಮತ್ತು ಮಠ ಎರಡರ ಪಾವಿತ್ರ್ಯಕ್ಕೂ ಧಕ್ಕೆ ಆಗಬಾರದು. ಕ್ಷೇತ್ರಕ್ಕೆ ಶುಕ್ರವಾರ ಆಗಮಿಸಿ ಎರಡೂ ಕಡೆಯವರ ಅಹವಾಲು, ಅಭಿಪ್ರಾಯ ಪಡೆಯುವೆ. ವಿದ್ಯಾಪ್ರಸನ್ನತೀರ್ಥ ಶ್ರೀಗಳ ಅಭಿಪ್ರಾಯ ವನ್ನೂ ಪಡೆಯುತ್ತೇನೆ. ಬಳಿಕ ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರು, ವಿವಿಧ ಕ್ಷೇತ್ರಗಳ ನಾಯಕರು, ಅಧಿಕಾರಿಗಳ ಸಮ್ಮುಖ ಸಂಧಾನ ಸೂತ್ರ ಜಾರಿಗೆ ತರುವ ಬಗ್ಗೆ ಯತ್ನಿಸುವುದಾಗಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಶಾಂತಿ ನೆಲೆಸಲು ಎಲ್ಲ ಪ್ರಯತ್ನ ನಡೆಸುವುದಾಗಿ ಯತಿಗಳು ಭರವಸೆ ನೀಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಶುಕ್ರವಾರ ಸಂಜೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಶ್ರೀಗಳು, ಮಠದ ಯತಿಗಳು, ದೇಗುಲ ಆಡಳಿತ ಮಂಡಳಿ ಪ್ರಮುಖರು, ಮಠದ ಸಿಬಂದಿ, ಭಕ್ತ ರಕ್ಷಣಾ ವೇದಿಕೆಯ ಸದಸ್ಯರ ಜತೆ ಮಾತುಕತೆ ನಡೆಸಲಿದ್ದಾರೆ.
ಇಂದು ಸಭೆ
ಶ್ರೀಗಳ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ಕುಕ್ಕೆ ದೇವಸ್ಥಾನದ ಭಕ್ತರ ಅಭಿಪ್ರಾಯ ಪಡೆಯುವ ಸಲುವಾಗಿ ದೇವಸ್ಥಾನದ ಉತ್ತರಾದಿ ಮಠದಲ್ಲಿ ಬೆಳಗ್ಗೆ 11.30ಕ್ಕೆ ಭಕ್ತ ಹಿತರಕ್ಷಣ ವೇದಿಕೆಯ ವತಿಯಿಂದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಮಹೇಶ್ ಕುಮಾರ್ ಕರಿಕ್ಕಳ ತಿಳಿಸಿದ್ದಾರೆ.