Advertisement

ಕುಕ್ಕೆ: ಮಠದ ಸಿಬಂದಿಗೆ ಹಲ್ಲೆ ಆರೋಪ; ದೂರು ದಾಖಲು

09:55 AM Jun 03, 2019 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರ್ಪಸಂಸ್ಕಾರ ಸೇವೆ ನಡೆಸಲು ಆಗಮಿಸಿದ್ದ ಭಕ್ತರ ತಂಡವನ್ನು ಪಕ್ಕದ ಮಠಕ್ಕೆ ಕರೆದೊಯ್ಯಲು ಯತ್ನಿಸಿದ ಆರೋಪದ ಮೇರೆಗೆ ಸ್ಥಳೀಯರು ಹಾಗೂ ಭದ್ರತಾ ಸಿಬಂದಿ ಕುಮಾರ ಬನ್ನಿಂತಾಯ ಎಂಬವರನ್ನು ಆಡಳಿತ ಮಂಡಳಿಗೆ ಒಪ್ಪಿಸಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಈ ನಡುವೆ ತನ್ನ ಮೇಲೆ ಕೆಲವರು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಕುಮಾರ ಬನ್ನಿಂತಾಯ ಅವರು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಪ್ರಕರಣದ ವಿವರ
ಕುಂದಾಪುರ ಮೂಲದ ನಾಗಮಣಿ ಎಂಬವರು ಸರ್ಪಸಂಸ್ಕಾರ ಪೂಜೆ ನಡೆಸಲೆಂದು ಕುಟುಂಬ ಸಮೇತ ಶನಿವಾರ ಕ್ಷೇತ್ರಕ್ಕೆ ಆಗಮಿಸಿದ್ದರು. ಅವರಿಗೆ ಮಠ ಹಾಗೂ ದೇವಸ್ಥಾನದ ಸರ್ಪಸಂಸ್ಕಾರದ ಗೊಂದಲದ ಬಗ್ಗೆ ಮಾಹಿತಿ ಇರಲಿಲ್ಲ. ಇದಕ್ಕೂ ಮೊದಲು ಅವರು ಸೇವೆ ಸಂಬಂಧ ದೇವಸ್ಥಾನದ ಕಚೇರಿ ಬದಲು ಶ್ರೀ ಸಂಪುಟ ನರಸಿಂಹ ಮಠದ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಮಠ ದಿಂದ ಸೇವೆಯ ದಿನ ನಿಗದಿಪಡಿಸಿ ಮೊಬೈಲ್‌ ಸಂಖ್ಯೆಯನ್ನು ನೀಡಿದ್ದರು. ಸೇವೆ ಪ್ರಾರಂಭವಾಗುವ ಹಿಂದಿನ ದಿನ ಮಠದ ಕಚೇರಿಯಿಂದ ಈ ಮೊಬೈಲ್‌ ಸಂಖ್ಯೆಗೆ ಕರೆ ಹೋಗಿದೆ. ಈ ವೇಳೆಗೆ ನಾಗಮಣಿ ಕುಟುಂಬದವರು ತಾವು ದೇಗುಲದ ಮುಂಭಾಗದ ಗೋಪುರದ ಬಳಿ ಇದ್ದೇವೆ. ಮಠಕ್ಕೆ ಬರಲು ದಾರಿ ತಿಳಿಸಿ ಎಂದು ಕೇಳಿಕೊಂಡಿದ್ದರು.

ಅವರನ್ನು ಮಠಕ್ಕೆ ಕರೆದೊಯ್ಯಲು ಕುಮಾರ ಬನ್ನಿಂತಾಯರು ದೇಗುಲದ ಮುಂಭಾಗಕ್ಕೆ ಬಂದರು. ಆಗ ಅಲ್ಲಿದ್ದ ಕೆಲವು ಭಕ್ತರು ಹಾಗೂ ಭದ್ರತಾ ಸಿಬಂದಿ ದೇಗುಲಕ್ಕೆ ಸೇವೆ ನಡೆಸಲು ಬಂದವರನ್ನು ಮಠಕ್ಕೆ ಕರೆದೊಯ್ಯುತ್ತಿರುವುದಕ್ಕೆ ಆಕ್ಷೇಪಿಸಿ ತಡೆದು ಬನ್ನಿಂತಾಯರನ್ನು ದೇಗುಲದ ಆಡಳಿತ ಮಂಡಳಿಗೆ ಒಪ್ಪಿಸಿದರು. ದೇಗುಲದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್‌. ಅವರು ವಿಚಾರಣೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದರು.

ಹಲ್ಲೆ ಆರೋಪ
ಘಟನೆ ನಡೆದ ಬಳಿಕ ತನ್ನ ಮೇಲೆ ಮೂವರು ಹಲ್ಲೆ ನಡೆಸಿದ್ದಾಗಿ ಕುಮಾರ ಬನ್ನಿಂತಾಯರು ಆ್ಯಂಬುಲೆನ್ಸ್‌ನಲ್ಲಿ ತೆರಳಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾದರು. ಬಳಿಕ ಸುಬ್ರಹ್ಮಣ್ಯ ಪೊಲೀಸರು ಆಸ್ಪತ್ರೆಗೆ ತೆರಳಿ ಅವರ ಹೇಳಿಕೆ ಪಡೆದುಕೊಂಡರು. ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್‌ ಕುಮಾರ್‌ ಕರಿಕ್ಕಳ, ಗುರುಪ್ರಸಾದ್‌ ಪಂಜ ಹಾಗೂ ಪ್ರಶಾಂತ್‌ ಭಟ್‌ ಮಾಣಿಲ ಅವರು ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾಗಿ ಬನ್ನಿಂತಾಯರು ದೂರಿದ್ದಾರೆ ಎಂದು ಎಸ್‌ಐ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಿಸಿ ಟಿವಿ ಪರಿಶೀಲನೆ
ದೇವಸ್ಥಾನದ ಸಿಸಿ ಕೆಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾ ಗಿದ್ದು, ಅದರಲ್ಲಿ ಹಲ್ಲೆ ಮಾಡಿರುವುದು ದಾಖಲಾಗಿಲ್ಲ ಎಂದು ಎಸ್‌ಐ ತಿಳಿಸಿದ್ದಾರೆ.

Advertisement

ವಂಚನೆ: ಬೆಂಗಳೂರಿನ ಭಕ್ತನಿಂದ ಮಠದ ವಿರುದ್ಧ ದೂರು
ಇನ್ನೊಂದು ಪ್ರಕರಣದಲ್ಲಿ, ಬೆಂಗಳೂರಿನ ಕೆಂಗೇರಿಯ ಪಳನಿಸ್ವಾಮಿ ಎಂಬವರು ಮಠದ ರಾಘವೇಂದ್ರ ಹಾಗೂ ಅನಂತ ಭಟ್‌ ಎಂಬವರಿಂದ ಅನ್ಯಾಯವಾಗಿದೆ ಎಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ. ದೇವಸ್ಥಾನಕ್ಕೆ ಸರ್ಪಸಂಸ್ಕಾರ ಸೇವೆ ನಡೆಸಲು ಬರುವ ಭಕ್ತರನ್ನು ವಂಚಿಸಿ ಮಠಕ್ಕೆ ಕರೆದೊಯ್ಯಲಾಗುತ್ತಿದೆ ವಂಚನೆ ನಡೆಸಲಾಗುತ್ತಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ತನ್ನಿಂದ 7,000 ರೂ. ಅನ್ನು ಸೇವೆಗೆಂದು ಪಡೆದು ವಾಪಸ್‌ ನೀಡದೆ ವಂಚಿಸಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆ ಮಾಡಿಲ್ಲ
ಬನ್ನಿಂತಾಯರ ಹಲ್ಲೆ ಆರೋಪ ಸತ್ಯಕ್ಕೆ ದೂರವಾದುದು. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಮಹೇಶ್‌ ಕುಮಾರ್‌ ಕರಿಕ್ಕಳ, ಗುರುಪ್ರಸಾದ್‌ ಪಂಜ, ಪ್ರಶಾಂತ್‌ ಭಟ್‌ ಮಾಣಿಲ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next