Advertisement

ಕುಕ್ಕೆ: ಸರಣಿ ರಜೆಗಳ ಆರಂಭದಲ್ಲೆ ಭಕ್ತ ಜನಸಂದಣಿ, ಟ್ರಾಫಿಕ್‌ ಜಾಮ್‌

11:50 PM Apr 14, 2019 | Sriram |

ಸುಬ್ರಹ್ಮಣ್ಯ: ಸರಣಿ ರಜೆ ಆರಂಭದ ಹಂತದಲ್ಲೆ ಪುಣ್ಯ ಕ್ಷೇತ್ರಗಳಿಗೆ ಭಕ್ತರು ಭೇಟಿ ನೀಡಲಾರಂಭಿಸಿದ್ದು, ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸಂದರ್ಶನಕ್ಕೆ ಅಪಾರ ಪ್ರಮಾಣದ ಭಕ್ತರು ರವಿವಾರ ಆಗಮಿಸಿದ್ದರು.

Advertisement

ಬ್ಯಾಂಕು ಸಹಿತ ಇತರ ಸಂಸ್ಥೆಗಳಿಗೆ ಶನಿವಾರ ರಜಾ ದಿನವಾಗಿತ್ತು. ರವಿವಾರ ಕೂಡ ವಾರದ ರಜೆ ದಿನವಾಗಿತ್ತು. ಹೀಗಾಗಿ ಭಕ್ತರು ಕ್ಷೇತ್ರದ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು. ಶಾಲೆಗಳಿಗೆ ಬೇಸಗೆ ರಜೆ ಆರಂಭಗೊಂಡಿದ್ದು, ನಾಡಿನ ವಿವಿಧೆಡೆಯ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

ಕುಕ್ಕೆ ಕ್ಷೇತ್ರಕ್ಕೆ ರವಿವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ತುಲಾಭಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆ, ಶೇಷ ಸೇವೆ ಸಹಿತ ಪ್ರಮುಖ ಸೇವೆಗಳನ್ನು ಪೂರೈಸಿಕೊಂಡರು.

ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕ ಸೇವೆಗಳು ಅಧಿಕವಾಗಿ ನೆರವೇರಿದೆ. ದರ್ಶನ, ಭೋಜನಕ್ಕೆ ಸರದಿ ಸಾಲಿನಲ್ಲಿ ನಿಂತು ಸಾಗಿದರು. ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥ ಬೀದಿಗಳಲ್ಲಿ ಭಕ್ತರೇ ಸೇರಿದ್ದರು.

ಶನಿವಾರ ರಾತ್ರಿಯಿಂದಲೆ ಭಕ್ತರು ಕ್ಷೇತ್ರದ ಕಡೆಗೆ ಬರಲಾರಂಭಿಸಿದ್ದರು. ವಾಸ್ತವ್ಯಕ್ಕೆ ಕೊಠಡಿಗಳ ಕೊರತೆ ಕಂಡುಬಂತು. ದೇಗುಲದ ವಸತಿಗೃಹಗಳು ತುಂಬಿದ್ದವು. ಖಾಸಗಿ ವಸತಿ ಗೃಹಗಳೂ ಭರ್ತಿಯಾಗಿದ್ದವು. ಕೆಲವು ಖಾಸಗಿ ವಸತಿ ಗೃಹಗಳು ಅಧಿಕ ಬಾಡಿಗೆ ವಿಧಿಸಿ ಕೊಠಡಿಗಳನ್ನು ನೀಡಿರುವ ಕುರಿತು ದೂರುಗಳು ಕೇಳಿಬಂದವು.

Advertisement

ಭಕ್ತರ ಜತೆ ಅವರನ್ನು ಕರೆದುಕೊಂಡು ಬಂದ ವಾಹನಗಳ ಸಂಖ್ಯೆಯೂ ಅಪರಿಮಿತವಾಗಿತ್ತು. ಅಕ್ಷರಾ ವಸತಿಗೃಹದ ಹಿಂಭಾಗದ ಪಾರ್ಕಿಂಗ್‌ ಸ್ಥಳ ಮತ್ತು ಬಿಲದ್ವಾರದ ಬಳಿ, ಸವಾರಿ ಮಂಟಪದ ಬಳಿಯಲ್ಲಿ ಪಾರ್ಕಿಂಗ್‌ ಸ್ಥಳಗಳು ಸಂಪೂರ್ಣ ವಾಗಿ ವಾಹನಗಳಿಂದ ತುಂಬಿ ಹೋಗಿತ್ತು. ವಾಹನದ ಸಂಖ್ಯೆಯೂ ಅಧಿಕವಾಗಿದ್ದರಿಂದ ಟ್ರಾಫಿಕ್‌ ಸಮಸ್ಯೆ ಕಂಡುಬಂತು.

ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ
ಸೋಮವಾರದಿಂದ ಮತ್ತೆ ಮುಂದಿನ ವಾರದ ದಿನಗಳಲ್ಲಿ ಚುನಾವಣೆ, ಇತರ ರಜೆಗಳ ದಿನಗಳು ಹೆಚ್ಚಿರುವುದರಿಂದ ಭಕ್ತರು ಈ ವಾರದಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿವೆ. ನಿರಂತರ ರಜೆ ಇರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಯಾತ್ರಾರ್ಥಿಗಳು ಆಗಮಿಸುವ ಕಾರಣ ಅವರಿಗೆ ತಂಗಲು ಕೊಠಡಿ, ವಾಹನ ದಟ್ಟಣೆ ಇತ್ಯಾದಿ ಸಮಸ್ಯೆಗಳಾಗುತ್ತಿದ್ದು, ದೇವಸ್ಥಾನದ ಆಡಳಿತ ಮಂಡಳಿ ತಾತ್ಕಾಲಿಕ ವ್ಯವಸ್ಥೆಗಳಿಗೆ ಸಿದ್ಧತೆ ನಡೆಸಿಕೊಳ್ಳುವುದು ಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next