Advertisement

Kukke Shri Subrahmanya Temple: ಅನ್ನ ಪ್ರಸಾದಕ್ಕೆ ವೈವಿಧ್ಯಮಯ ಪಾಯಸ

01:58 AM Oct 09, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕವಾಗಿ ಸುಮಾರು 55 ಲಕ್ಷಕ್ಕೂ ಮಿಕ್ಕಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸುತ್ತಾರೆ. ಇದೀಗ ದೇಗುಲದ ಆಡಳಿತಾಧಿಕಾರಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್‌ ಮೊಹಪಾತ್ರ ಅವರ ವಿಶೇಷ ಕಾಳಜಿಯಿಂದ ಭೋಜನ ವ್ಯವಸ್ಥೆಯಲ್ಲಿ ವಿತರಿಸುವ ಖಾದ್ಯಗಳಲ್ಲಿ ವಿನೂತನ ಬದಲಾವಣೆ ತರಲು ಉದ್ದೇಶಿಸಲಾಗಿದೆ.

Advertisement

ಈ ಹಿಂದೆ ವಿಶೇಷ ದಿನಗಳನ್ನು ಹೊರತು ಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ವಿತರಿಸಲಾಗುತ್ತಿತ್ತು. ನೂತನ ಯೋಜನೆಯಂತೆ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನು ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ.

ಕಡ್ಲೆ ಬೇಳೆ, ಹೆಸರು ಬೇಳೆ, ಕಡ್ಲೆ ಬೇಳೆ ಸಾಬಕ್ಕಿ, ಗೋಧಿ ಕಡಿ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ರವೆ ಪಾಯಸ ಮತ್ತು ಸಿರಿಧಾನ್ಯ ಸೇರಿದಂತೆ 10 ಬಗೆಯ ಪಾಯಸವನ್ನು ತಯಾರಿಸಿ ವಿತರಿಸಲಾಗುತ್ತದೆ. ಪ್ರಸಾದ ಭೋಜನವು ಅತ್ಯಂತ ಸ್ವಾದಿಷ್ಠ ಮತ್ತು ಪೌಷ್ಟಿಕಾಂಶಗಳಿಂದ ಇರಲು 15 ಬಗೆಯ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಉಪಯೋಗಿಸಲು ಚಿಂತಿಸಲಾಗಿದೆ.

ಕುಕ್ಕೆ ದೇಗುಲದಲ್ಲಿ ಪ್ರತಿನಿತ್ಯ ಬಾಳೆ ಎಲೆಯಲ್ಲಿ ಅನಾದಿ ಕಾಲದಿಂದ ಪ್ರಸಾದ ರೂಪದಲ್ಲಿ ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ವಿತರಿಸಲಾಗುತ್ತದೆ. ಜಾತ್ರೆ ಮತ್ತು ಹೊಸ್ತಾರೋಗಣೆಯ ದಿನಗಳಲ್ಲಿ ಭಕ್ಷ್ಯಗಳ ಸಂಖ್ಯೆ ಹೆಚ್ಚಿರುತ್ತದೆ. ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು ಮತ್ತು ಮಜ್ಜಿಗೆ ಮಾತ್ರವೇ ವಿತರಿಸಲಾಗುತ್ತದೆ.

ಶಿಕ್ಷಣಕ್ಕಾಗಿ ಅನ್ನದಾನ
ಶ್ರೀ ದೇಗುಲವು ತನ್ನ ಆಡಳಿತದಲ್ಲಿ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ನಿತ್ಯವೂ ಶ್ರೀ ದೇಗುಲದಿಂದ ಪ್ರಸಾದ ಭೋಜನ ವಿತರಣೆಯಾಗುತ್ತಿದೆ. ಇದರ ಜತೆ ಕ್ಷೇತ್ರದ ಸನಿಹದ ಇತರ ಶಾಲೆಗಳಿಗೂ ಭೋಜನ ವಿತರಿಸುತ್ತಿದೆ. ಈ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಭೋಜನವು ಒಂದು ಅಮೂಲ್ಯ ಪ್ರಸಾದ. ಹಿಂದಿನಿಂದಲೂ ಶ್ರೀ ದೇವರ ಅನ್ನಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್‌ ಪಾಕಶಾಲೆ ನಿರ್ಮಾಣವಾಗಿದೆ. ಮುಂದೆ ಭಕ್ತರಿಗೆ ಭೋಜನ ಪ್ರಸಾದ ಸ್ವೀಕರಿಸಲು ಉತ್ತಮ ಯೋಜನೆಯೊಂದಿಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು.
– ಜುಬಿನ್‌ ಮಹಪಾತ್ರ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next