ಸುಬ್ರಹ್ಮಣ್ಯ: ಆಶ್ಲೇಷಾ ನಕ್ಷತ್ರ ಶುಭ ದಿನವಾದ ಮಂಗಳವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಇಂದು ಈ ವರ್ಷದ ದಾಖಲೆಯ ಆಶ್ಲೇಷಾ ಬಲಿ ಸೇವೆ ನೆರವೇರಿದೆ.
ಆಶ್ಲೇಷಾ ನಕ್ಷತ್ರ ಸುಬ್ರಹ್ಮಣ್ಯ ದೇವರಿಗೆ ವಿಶೇಷ ದಿನವಾಗಿದ್ದು ಭಕ್ತರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೇವೆ ನೆರವೇರಿಸುವುದು ವಾಡಿಕೆ. ಅದರಂತೆ ಸೋಮವಾರ ಸಂಜೆಯಿಂದಲೇ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನ ಆರಂಭವಾಗಿತ್ತು. ಮಂಗಳವಾರ ಇನ್ನೂ ಹೆಚ್ಚಿನ ಭಕ್ತರ ಆಗಮನವಾಗಿದೆ.
ಮಂಗಳವಾರ ಬೆಳಗ್ಗೆ 1,719 ಆಶ್ಲೇಷಾ ಬಲಿ ಹಾಗೂ ಸಂಜೆ 190ಕ್ಕೂ ಅಧಿಕ ಆಶ್ಲೇಷಾ ಬಲಿ ಸೇವೆಗಳು ಸಲ್ಲಿಕೆಯಾಗಿವೆ. ಇದು ಈ ವರ್ಷದ ದಾಖಲೆಯ ಆಶ್ಲೇಷಾ ಬಲಿ ಸೇವೆ ಎಂದು ದೇವಾಲಯ ಕಚೇರಿಯ ಮೂಲಗಳು ತಿಳಿಸಿವೆ.
ಜತೆಗೆ ಇತರ ಸೇವೆಗಳೂ ಅಧಿಕ ಸಂಖ್ಯೆಯಲ್ಲಿ ನೆರವೇರಿವೆ. ಕ್ಷೇತ್ರದ ರಥಬೀದಿ, ಹೊರಾಂಗಣ ಭಕ್ತರಿಂದ ತುಂಬಿತ್ತು. ಪೇಟೆಯಲ್ಲಿ ವಾಹನಗಳ ಓಡಾಟವೂ ಅಧಿಕವಾಗಿತ್ತು.