ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಸೋಮವಾರ ಬೆಳಗ್ಗೆ 7.05ರ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ, ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯ ಅವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. 141 ಭಕ್ತರು ಬ್ರಹ್ಮರಥೋತ್ಸವ ಸೇವೆ ನೆರವೇರಿಸಿದರು.
ಸೋಮವಾರ ರಾತ್ರಿ ಪಂಚಮಿ ರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ನಡೆಯಿತು. ಬಳಿಕ ಕುಕ್ಕೆಬೆಡಿ ಪ್ರದರ್ಶನಗೊಂಡಿತು. ಮಂಗಳವಾರ ಬೆಳಗ್ಗೆ ದೇವಸ್ಥಾನದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಮೊದಲಿಗೆ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು.
ಬಳಿಕ ಚಿಕ್ಕ ರಥೋತ್ಸವ ಹಾಗೂ ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು. ಬಳಿಕ ಉಮಾಮಹೇಶ್ವರ ಹಾಗೂ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ದೇವರು ಗರ್ಭಗುಡಿ ಪ್ರವೇಶಿಸಿದ ಅನಂತರ ಪ್ರಧಾನ ಅರ್ಚಕರು ಮೂಲ ಮೃತ್ತಿಕಾಪ್ರಸಾದ ವಿತರಿಸಿದರು. ಬ್ರಹ್ಮರಥ ಹರಕೆ ಸೇವೆ ಸಲ್ಲಿಸಿದವರಿಗೆ ಶಾಲು ಹೊದೆಸಿ ಮಹಾಪ್ರಸಾದ ನೀಡಿದರು. ದೇವಸ್ಥಾನದ ಆನೆ ಯಶಸ್ವಿನಿ ಉತ್ಸವದಲ್ಲಿ ಭಾಗಿಯಾಗಿತ್ತು.
ಎಡೆಸ್ನಾನ ಸೇವೆ: ಷಷ್ಠಿ ದಿನವಾದ ಮಂಗಳವಾರ 210 ಮಂದಿ ಎಡೆಸ್ನಾನ ಸೇವೆ ನೆರವೇರಿಸಿದರು. ಮೊದಲ ದಿನ 116 ಮಂದಿ, ಎರಡನೇ ದಿನ 163 ಮಂದಿ, ಮೂರನೇ ದಿನ 210 ಮಂದಿ ಸೇರಿ ಮೂರು ದಿನಗಳಲ್ಲಿ ಒಟ್ಟು 489 ಮಂದಿ ಸ್ವಯಂ ಪ್ರೇರಣೆಯಿಂದ ಎಡೆಸ್ನಾನ ನೆರವೇರಿಸಿದರು.
ನ.30 ಅವಭೃಥ: ನ.30ರ ಮಾರ್ಗಶಿರ ಶುದ್ಧ ಸಪ್ತಮಿಯಂದು ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ದೇವರ ಅವಭೃಥ ಉತ್ಸವ ಮತ್ತು ನೌಕಾವಿಹಾರ ನಡೆಯಲಿದೆ.