ಮಂಗಳೂರು/ಉಡುಪಿ: ಹೊಸ ವರ್ಷ ಆರಂಭದ ಹಿನ್ನೆಲೆಯಲ್ಲಿ ಸೋಮವಾರ ಕರಾವಳಿಯ ದೇವಸ್ಥಾನ ಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.ನಗರದ ಶರವು ದೇವಸ್ಥಾನ, ಮಂಗಳಾದೇವಿ, ಕದ್ರಿ, ಕಟೀಲು, ಕುದ್ರೋಳಿ, ಪೊಳಲಿ, ಕೊಲ್ಲೂರು ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ ಮೊದಲಾದೆಡೆ ಸಾವಿರಾರು ಮಂದಿ ದೇವರ ದರ್ಶನ ಪಡೆದರು.
ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಹೊಟೇಲ್, ಸಭಾಂಗಣಗಳಲ್ಲಿ ರವಿವಾರ ಮಧ್ಯರಾತ್ರಿ ವರೆಗೂ
ನಡೆದಿತ್ತು. ಪೊಲೀಸರ ಹಲವು ನಿರ್ಬಂಧಗಳ ನಡುವೆ ಕಾರ್ಯಕ್ರಮ ಆಯೋಜನೆ ಗೊಂಡಿದ್ದವು. ವಾಹನ ಗಳ ತಪಾಸಣೆ ಬಿಗಿಯಾಗಿತ್ತು. ಕೆಲವೆಡೆಪೊಲೀಸರು ಕೇಕ್ ಕತ್ತರಿಸಿ ವಾಹನಚಾಲಕರಿಗೆ ಹಂಚಿ ಸಂಭ್ರಮಿಸು ತ್ತಿರುವುದು ಕಂಡುಬಂತು.
ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಫಲಪುಷ್ಪಗಳಿಂದ ಅಲಂಕರಿಸಲಾಗಿದೆ. ರವಿವಾರ ರಾತ್ರಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖ ದಲ್ಲಿ ದೇವಸ್ಥಾನದಲ್ಲಿ ರಂಗಪೂಜೆ ಹಾಗೂ ಉತ್ಸವ ನಡೆಯಿತು. ಸೋಮವಾರ ಮುಂಜಾನೆ ಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿದ್ದು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಂಗಳೂರು ಕತ್ರಿಗುಪ್ಪೆ ವಿವೇಕಾನಂದ ನಗರದ ಶ್ರೀ ಓಂ ಸ್ಕಂದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಪುಷ್ಪಾಲಂಕಾರ ಸೇವೆ ಸೋಮವಾರ ನೆರವೇರಿತು. ಕಳೆದ 6 ವರ್ಷಗಳಿಂದ ಟ್ರಸ್ಟ್ ಜ. 1ರಂದು ಈ ಸೇವೆಯನ್ನು ನೆರವೇರಿಸುತ್ತಿದೆ.
ಟ್ರಸ್ಟ್‌ನ ಮಂಜುನಾಥ್, ಉಮೇಶ್, ಬಾಲಾಜಿ ನೇತೃತ್ವದಲ್ಲಿ 50 ಮಂದಿ ಸದಸ್ಯರು ಪುಷ್ಪಾಲಂಕಾರ ಮಾಡಿದರು. ಹಣ್ಣುಗಳನ್ನು ಕೂಡ ಶೃಂಗಾರಕ್ಕೆ ಬಳಸಲಾಗಿತ್ತು. ಗರ್ಭಗುಡಿಯ ಮುಂಭಾಗದಲ್ಲಿನ ಗರುಡ ಸ್ತಂಭದ ಬಳಿ ಅತ್ಯಾಕರ್ಷಕವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು. ಹೊರಾಂಗಣದಲ್ಲಿರುವ ದೊಡ್ಡ ಗಂಟೆಯ ಸಮೀಪ ಅತ್ಯಾಕರ್ಷಕವಾಗಿ ಹೂಗಳನ್ನು ಬಳಸಿ ನವಿಲನ್ನು ರೂಪಿಸಲಾಗಿತ್ತು.ರಾಜಗೋಪುರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಎಂದು ಪುಷ್ಪ ಗಳಿಂದ ಬರೆಯಲಾಗಿತ್ತು.