Advertisement

ತಾ|ಆರೋಗ್ಯಾಧಿಕಾರಿ ಭೇಟಿ, ಕುಕ್ಕೆ: ನದಿ ನೀರು ಮಲಿನ

02:22 PM Nov 17, 2018 | |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಾಸ್ಟರ್‌ ಪ್ಲಾನ್‌ ಯೋಜನೆಯಲ್ಲಿ ಅಳವಡಿಸಲಾಗಿದ್ದ ಒಳಚರಂಡಿ ಪೈಪ್‌ಗಳು ಒಡೆದು ಕೊಳಚೆ ನೀರಿನಿಂದ ಕ್ಷೇತ್ರದ ಪ್ರಮುಖ ಪುಣ್ಯ ನದಿಗಳು ಮಲಿನಗೊಂಡ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಅವರು ಶನಿವಾರ ಕುಕ್ಕೆಗೆ ಆಗಮಿಸಿ, ಪರಿಶೀಲಿಸಿದರು.

Advertisement

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂರ್ತಿ, ಸಿಬಂದಿ ಜತೆ ಆದಿಸುಬ್ರಹ್ಮಣ್ಯ ಭಾಗದಿಂದ ಬರುವ ದರ್ಪಣ ತೀರ್ಥ ಹಾಗೂ ದೇವರಗದ್ದೆಗೆ ತೆರಳುವ ರುದ್ರಪಾದಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಈ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಂಡು ರೋಗ-ರುಜಿನಗಳು ಹಬ್ಬದಂತೆ ಎಚ್ಚರ ವಹಿಸಲು, ಕ್ಷೇತ್ರ ಸ್ವಚ್ಛತೆಗೆ ಇಲಾಖೆ ವಹಿಸಬೇಕಾದ ಕ್ರಮಗಳ ಕುರಿತು ಅಧಿಕಾರಿ, ಸಿಬಂದಿಗೆ ಸೂಚಿಸಿದರು.

ದರ್ಪಣತೀರ್ಥ ನದಿಯಲ್ಲಿ ಒಳಚರಂಡಿ ಪೈಪ್‌ ಗಳು  ಒಡೆದು ಕೊಳಚೆ ನೀರು ಪುಣ್ಯ ನದಿ ಪಾತ್ರ ಸೇರುತ್ತಿರುವ ಮತ್ತು ಈ ಭಾಗಗಳಲ್ಲಿ ಸ್ವಚ್ಛತೆ ಕೊರತೆ ಕುರಿತು ‘ಉದಯವಾಣಿ ಸುದಿನ’ ಸಚಿತ್ರ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಸಮಿತಿ ಸದಸ್ಯರು, ಶುಚಿತ್ವ ಕಾಯ್ದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. 

ದೇವಸ್ಥಾನದ ವತಿಯಿಂದ ಸಿಬಂದಿಯನ್ನು ನಿಯೋಜಿಸಿ ನದಿ ಪಾತ್ರವನ್ನು ಸ್ವಚ್ಛಗೊಳಿಸಲು ಮತ್ತು ಪೈಪ್‌ಗಳು  ಸೋರಿಕೆಗಳನ್ನು ತಡೆಗಟ್ಟಿ ತಾತ್ಕಾಲಿಕವಾಗಿ ದುರಸ್ತಿಪಡಿಸಲು ವ್ಯವಸ್ಥೆ ಮಾಡಿದ್ದರು. ಆರೋಗ್ಯಾಧಿಕಾರಿಗಳು ಶನಿವಾರ ಸ್ಥಳ ವೀಕ್ಷಣೆಗೆ ತೆರಳಿದ್ದ ವೇಳೆಯೂ ದೇಗುಲದ ಸಿಬಂದಿ ಸ್ವತ್ಛತೆ ಹಾಗೂ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.

ನಿರ್ವಹಣೆ ಮಂಡಳಿ ಜವಾಬ್ದಾರಿ: ಮುಂಡೋಡಿ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ವತಿಯಿಂದ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆದಿದೆ. ಆದರೆ, ಹಸ್ತಾಂತರ ಮಾಡಿಲ್ಲ. ನಿರ್ವಹಣೆ ಅವರ ಕೈಯಲ್ಲೇ ಇದೆ. ಅವರ ಸಿಬಂದಿ ಕ್ಷೇತ್ರದಿಂದ ತೆರಳಿದ್ದಾರೆ. ಕಾಮಗಾರಿಗಳಲ್ಲಿ ಅಳವಡಿಸಿದ್ದ ಪೈಪ್‌ಗಳಲ್ಲಿ ಸೋರಿಕೆ ಆಗುತ್ತಿರುವ ಕುರಿತು ಒಳಚರಂಡಿ ಮಂಡಳಿ ಗಮನಕ್ಕೆ ತಂದಿದ್ದೇವೆ. ಇದೀಗ ತಾತ್ಕಾಲಿಕವಾಗಿ ದುರಸ್ತಿ ನಡೆಸಿ ಸ್ವಚ್ಛತೆ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next