Advertisement

ಕುಕ್ಕೆ: ಜಿಲ್ಲಾ ಸಾಹಿತ್ಯ ಸಮ್ಮೇಳನ ಕಚೇರಿ ಉದ್ಘಾಟನೆ 

04:56 PM Feb 10, 2018 | Team Udayavani |

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ನಗರದಲ್ಲಿ ಮುಂದಿನ ತಿಂಗಳಲ್ಲಿ ಮೂರು ದಿನಗಳ ಕಾಲ ನಡೆಯುವ ಅಕ್ಷರ ಜಾತ್ರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆ ನಡೆಸಿ ಅಣಿಯಾಗೋಣ ಎಂದು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕರೆ ನೀಡಿದರು. ಕುಕ್ಕೆ ಸುಬ್ರಹ್ಮಣ್ಯದ ಕೆಎಸ್‌ಎಸ್‌ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಚೇರಿ ಉದ್ಘಾಟನೆ ಕಾರ್ಯಕ್ರಮದ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕಲ್ಕೂರ ಕಚೇರಿ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ, ಉದ್ಘಾಟಕರು, ಅತಿಥಿಗಳ ಆಯ್ಕೆ, ಗೋಷ್ಠಿಗಳು ಇತ್ಯಾದಿ ವಿಚಾರಗಳ ಕುರಿತು ಜಿ.ಸಾ.ಪ., ಸ್ವಾಗತ ಸಮಿತಿ ನಡುವೆ ಸಮನ್ವಯ ಸಾಧಿಸಿ ಸರ್ವಸಮ್ಮತ ರೀತಿಯಲ್ಲಿ ಅಂತಿಮಗೊಳಿಸಬೇಕಿದೆ ಎಂದು ಸಲಹೆ ನೀಡಿದರು.

ಬಳಿಕ ವಿವಿಧ ಉಪ ಸಮಿತಿಗಳು ಇಲ್ಲಿ ತನಕ ನಡೆಸಿದ ಪೂರ್ವ ತಯಾರಿಗಳ ಕುರಿತು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಾಚಾರ್ಯ ಪ್ರೊ| ರಂಗಯ್ಯ ಶೆಟ್ಟಿಗಾರ್‌ ಸಭೆಯ ಮುಂದಿಟ್ಟರು. ಬಳಿಕ ಅದರ ಮೇಲೆ ಚರ್ಚೆ ನಡೆ
ಯಿತು. ಸಮ್ಮೇಳನದ ಉದ್ಘಾಟನೆಯನ್ನು ಈ ಹಿಂದೆ ನಿರ್ಧರಿಸಿದಂತೆ ಮಧ್ಯಾಹ್ನದ ಬಳಿಕದ ಬದಲಿಗೆ ಬೆಳಗ್ಗೆ ನಡೆಸುವುದೆಂದು ನಿರ್ಧರಿಸಲಾಯಿತು. ಸಮ್ಮೇಳನದ ಗೋಷ್ಠಿ ಇತರೆ ರೂಪುರೇಷಗಳ ಕುರಿತು ಚರ್ಚೆ ನಡೆಯಿತು.

ಕಸಾಪ ತಾಲೂಕು ಅಧ್ಯಕ್ಷರಾದ ಡಾ| ಹರಪ್ರಸಾದ್‌ ತುದಿಯಡ್ಕ (ಸುಳ್ಯ), ವಿಜಯಲಕ್ಷ್ಮೀ (ಮಂಗಳೂರು), ಮೋಹನ್‌ ರಾವ್‌ (ಬಂಟ್ವಾಳ), ಸುಳ್ಯ ತಾಲೂಕು ಕಸಾಪ ಪೂರ್ವಾಧ್ಯಕ್ಷ ಜಾಕೆ ಮಾಧವ ಗೌಡ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ, ಕೋಶಾಧಿಕಾರಿ ಪೂರ್ಣಿಮಾ, ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ್‌, ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್‌ ಉಪಸ್ಥಿತರಿದ್ದರು.

ಸಭೆಯಲ್ಲಿ ದುರ್ಗಾಕುಮಾರ್‌ ನಾಯರ್‌ ಕೆರೆ, ಸಮಿತಿಗಳ ಪ್ರಮುಖರಾದ ಗಣೇಶ್‌ ಪ್ರಸಾದ್‌, ರವಿ ಕಕ್ಕೆಪದವು, ವಿಮಲಾ ರಂಗಯ್ಯ, ಮೋಹನದಾಸ್‌ ರೈ, ಉಪನ್ಯಾಸಕ ಎನ್‌. ಮಂಜುನಾಥ್‌ ಭಟ್‌, ಗೋವಿಂದ ಎನ್‌.ಎಸ್‌. ಉಪಸ್ಥಿತರಿದ್ದರು.

Advertisement

ಒಮ್ಮತದ ಆಯ್ಕೆ 
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸ್ಥಳೀಯ ಸಾಹಿತಿಗಳಿಗೆ ನೀಡಬೇಕು. ಹಿರಿಯ ಸಾಹಿತಿ ಟಿ.ಜಿ. ಮುಡೂರು ಅವರು ಸೂಕ್ತ ಎಂಬ ಅಭಿಪ್ರಾಯ ಸ್ಥಳೀಯರದು ಎಂದು ಸಾಹಿತಿ ಜಾಕೆ ಮಾಧವ ಗೌಡ ತಿಳಿಸಿದರು. ಜಿಲ್ಲಾಧ್ಯಕ್ಷ ಕಲ್ಕೂರ ಅವರು, ಮುಂದಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮಹಿಳೆಯರಿಗೆ ಅವಕಾಶ ನೀಡುವ ಕುರಿತು ಕಳೆದ ಸಲವೇ ನಿರ್ಧರಿಸಲಾಗಿದೆ. ಹೀಗಾಗಿ ಸಮ್ಮೇಳನದ ಅಧ್ಯಕ್ಷತೆಗೆ ಮಹಿಳಾ ಸಾಹಿತಿಯನ್ನು ಆಯ್ಕೆಗೊಳಿಸಬೇಕಿದೆ ಎಂದರು. ಅಂತಿಮವಾಗಿ ಎರಡೂ ಸಮಿತಿ ಚರ್ಚಿಸಿ ನಿರ್ಧಾರಕ್ಕೆ ಬರುವುದಂದು ತಿರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next