Advertisement

ಕುಕ್ಕೆ ಬಹ್ಮ ರಥ ಶಿಥಿಲ: ನೂತನ ರಥಕ್ಕಿದು ಸಕಾಲ

04:41 PM Nov 22, 2017 | |

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮರಥ ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆಗೆ ತಲುಪುತ್ತಿರುವುದರಿಂದ ನೂತನ ಬ್ರಹ್ಮರಥ ಹೊಂದಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ. 1.99 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ಧವಾಗಿದೆ. ಈ ನಡುವೆ ದಾನಿಯೊಬ್ಬರು ಮುಂದೆ ಬಂದಿದ್ದರೂ ಒಬ್ಬ ವ್ಯಕ್ತಿಯನ್ನು ಅವಲಂಬಿಸದೆ ದೇಗುಲದ ಆದಾಯ ಮತ್ತು ಭಕ್ತರ ದೇಣಿಗೆಯಿಂದ ಬ್ರಹ್ಮರಥ ನಿರ್ಮಿಸಬೇಕೆಂಬ ಬೇಡಿಕೆ ದೇವಾಲಯದ ಭಕ್ತರದ್ದಾಗಿದೆ.

Advertisement

ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮರಥ ಎಷ್ಟು ಪ್ರಾಚೀನವಾದುದು ಎಂದು ನಿಖರವಾಗಿ ತಿಳಿದಿಲ್ಲ. ಸುಮಾರು 400 ವರ್ಷಗಳ ಹಿಂದಿನದ್ದೆಂದು ತಿಳಿಯುತ್ತದೆ. ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕನು (ಕ್ರಿ.ಶ. 1582-1629) ನಿರ್ಮಿಸಿ ಕೊಟ್ಟಿದ್ದನೆಂಬುದು ದಾಖಲೆಯಿಂದ ತಿಳಿಯುತ್ತದೆ.

1923ರಲ್ಲಿ ಗಣಪತಿ ರಾವ್‌ ಐಗಳ ಅವರ ದ.ಕ ಜಿಲ್ಲೆಯ ಪ್ರಾಚೀನ ಇತಿಹಾಸ ದಾಖಲೆಯಲ್ಲಿ ಈ ಕುರಿತು ಉಲ್ಲೇಖವಿದೆ. ಡಾ| ಕೆ.ಎಸ್‌.ಎನ್‌. ಉಡುಪ ಅವರ ‘ಶ್ರೀ ಕ್ಷೇತ್ರ ಕೋಟೇಶ್ವರ’ ಅಧ್ಯಯನ ಪುಸ್ತಕದಲ್ಲಿ ಇದರ ಪ್ರಸ್ತಾವವಿದೆ. ಇದೇ ಕೆಳದಿ ವಂಶಸ್ಥ ವೆಂಕಟಪ್ಪ ನಾಯಕ ಕುಕ್ಕೆ ದೇಗುಲದಂತೆ ಸರಿಸುಮಾರು ಅದೇ ಅವಧಿಯಲ್ಲಿ ಕೊಟೇಶ್ವರ ದೇಗುಲಕ್ಕೂ ರಥ ನೀಡಿದ ಕುರಿತು ಅವರ ಸಂಶೋಧನ ಗ್ರಂಥದಲ್ಲಿ ಉಲ್ಲೇಖವಿದೆ .

ಪುರಾತನ ರಥದ ವಿನ್ಯಾಸ
ಪ್ರತಿಮಾಶಾಸ್ತ್ರ, ಚಿತ್ರಕಲೆ, ಜ್ಯಾಮಿತಿಕ ಅಂಶ, ಪೌರಾಣಿಕ ಸನ್ನಿವೇಶಗಳ ಹಿನ್ನೆಲೆ ತಿಳಿದ ಶಿಲ್ಪಿಗಳಿಂದ ಈ ರಥದ ರಚನೆಯಾಗಿದೆ. ವಿವಿಧ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ವಿಧಿವಿಧಾನ, ನಿಯಮ ಅನುಸರಿಸಿ ರಚಿಸಿದ್ದಾಗಿದೆ. ಆರು ಚಕ್ರ ಹೊಂದಿರುವ ಬ್ರಹ್ಮರಥವನ್ನು ಶಾಸ್ತ್ರೀಯವಾಗಿ ‘ಸ್ಯಂದನ ರಥ’ವೆನ್ನುವರು. ಅಡಿಪಾಯ, ಅಡಿಸ್ಥಾನ, ಮಂಟಪ, ಗೋಪುರ, ಶಿಖರ ಇವು ರಥದ ಪ್ರಮುಖ ಭಾಗಗಳು.

ಅಡಿಪಾಯದಿಂದ ಮಂಟಪದವರೆಗಿನ ಒಟ್ಟು ಭಾಗ ಸ್ಥಿರ ರಥ. ಚಕ್ರದ ಎತ್ತರ ಎಂಟು ಅಡಿ 6 ಅಂಗುಲ. ಒಂದು ಚಕ್ರದಲ್ಲಿ 5 ಬೃಹತ್‌ ಮರದ ತುಂಡುಗಳು ಇವೆ. ರಥದ ಚಕ್ರಗಳ ಅಗಲ 21 ಅಂಗುಲ, ದಪ್ಪ 10 ಅಂಗುಲ ಎಂಬ ಲೆಕ್ಕವಿದೆ. ಬ್ರಹ್ಮರಥದಲ್ಲಿ ಪ್ರಪಂಚದ ಎಲ್ಲ ರೀತಿಯ ಜೀವರಾಶಿಗಳ ಚಿತ್ರಗಳ ಕೆತ್ತನವಿದೆ. ಚಿತ್ರಗಳಲ್ಲಿ ವಿವರಿಸಲಾಗದಷ್ಟು ವಿಸ್ಮಯಗಳಿದ್ದು, ಕಾಲಾಂತರದಲ್ಲಿ ಬಹುತೇಕ ಚಿತ್ರಗಳು ನಶಿಸಿ ಹೋಗಿವೆ. ರಥದ ಮರದ ಚಕ್ರಗಳು, ಬಿಡಿಭಾಗಗಳು ಬಿರುಕು ಪಡೆದು ಶಿಥಿಲಾವಸ್ಥೆಗೆ ತಲುಪಿದೆ. ಈ ಮಧ್ಯದ ಅವಧಿಯಲ್ಲೊಮ್ಮೆ ರಥದ ದುರಸ್ತಿಯೂ ನಡೆದಿದೆ.

Advertisement

ಸಂರಕ್ಷಣೆ ಮೂಲ ನಿವಾಸಿಗಳ ಹೊಣೆ
ಬ್ರಹ್ಮರಥವನ್ನು ಜಾತ್ರೋತ್ಸವಕ್ಕೆ ಸಿದ್ಧಪಡಿ ಸುವುದು ಮತ್ತು ಸಂರಕ್ಷಿಸಿಡುವುದು ಆದಿವಾಸಿ ಮಲೆಕುಡಿಯ ಜನಾಂಗದವರ
ಪಾರಂಪರಿಕ ಹೊಣೆಗಾರಿಕೆ. ಹಿಂದೆ ಈ ಬ್ರಹ್ಮರಥ ಸಂರಕ್ಷಣೆಯ ಹೊದಿಕೆ ಮಾಡಲು ಸಾಧ್ಯವಿಲ್ಲದಷ್ಟು ಎತ್ತರವಿತ್ತು. ಈ ಕಾರಣಕ್ಕಾಗಿ ಇದರ ಎತ್ತರವನ್ನು ತಗ್ಗಿಸಿ, ಸಂರಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಶೆಯಲ್ಲಿ  ಕಂಡುಬಂದಿದೆ
ದೇಗುಲದ ಪ್ರಶ್ನೆ ವೇಳೆ ಈಗಿನ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪುತ್ತಿರುವುದರಿಂದ ನೂತನ ರಥ ಹೊಂದುವ ಕುರಿತು ಕಂಡು ಬಂದಿದೆ. ನೂತನ ಬ್ರಹ್ಮರಥ ನಿರ್ಮಿಸಿಕೊಡಲು ಭಕ್ತರೊಬ್ಬರು ಮುಂದೆ ಬಂದಿದ್ದರಿಂದ ಈಗಿನ ಆಡಳಿತ ಮಂಡಳಿ ಆಸಕ್ತಿ ವಹಿಸಿತ್ತು. ಕೆಲ ಭಕ್ತರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಒಬ್ಬರಿಂದಲೇ ರಥ ನಿರ್ಮಿಸುವುದು ಸರಿಯಲ್ಲ. ದೇಗುಲದ ಆದಾಯ, ಭಕ್ತರ ದೇಣಿಗೆ ಪಡೆದು ರಥ ನಿರ್ಮಿಸುವುದೊಳಿತು ಎಂಬ ಅಭಿಪ್ರಾಯ ಹೊಂದಿದ್ದರು. ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರೇ ಇಲ್ಲಿ ಬ್ರಹ್ಮರಥ ನಿರ್ಮಿಸಲಿದ್ದಾರೆ.

ವಿಸ್ಮ ಯದ ಕಥೆ 
ಬ್ರಹ್ಮರಥ ಹೊಂದಿರುವ ವಿಶೇಷ ದೈವಿಕ ಶಕ್ತಿಯ ಕುರಿತು ಕಥೆಯೊಂದು ರೂಢಿಯಲ್ಲಿದೆ. ಒಂದು ಕಣ್ಣು ಹಾಗೂ ಒಂದೇ ಕೈ
ಹೊಂದಿರುವ ದೇವಶಿಲ್ಪಿಗಳು ರಥ ನಿರ್ಮಾಣದ ನಡುವೆ ಮಧ್ಯಾಹ್ನದ ಭೋಜನಕ್ಕೆ ಕುಳಿತಿದ್ದರು.ಈ ಹೊತ್ತು ರಥವು ಗಿರಗಿರನೆ ತಿರುಗುತ್ತ ಆಕಾಶಮುಖವಾಗಿ ಚಲನೆ ಆರಂಭಿಸಿತು. ತತ್‌ಕ್ಷಣ ಜಾಗೃತರಾದ ಶಿಲ್ಪಿಗಳು ನೋಡಿದರೆ, ರಥವು ಭೂಮಿಯಿಂದ ಒಂದು ಅಡಿ ಮೇಲಕ್ಕೆ ಎದ್ದಿತ್ತಂತೆ. ಆಗ ಭಗವಾನ್‌ ಶ್ರೀ ವಿಶ್ವಕರ್ಮರನ್ನು ಸ್ಮರಿಸಿ, ಕೈಗೆ ಸಿಕ್ಕಿದ ಉಳಿಯನ್ನೆಸೆ ದಾಗ ಬ್ರಹ್ಮರಥವು ಮತ್ತೆ ಸ್ವಸ್ಥಾನ ಸೇರಿತಂತೆ.

ತಾಂತ್ರಿಕ ತೊಂದರೆ
2003ರಿಂದ ನೂತನ ಬ್ರಹ್ಮರಥ ನಿರ್ಮಿಸುವ ಕುರಿತ ಪ್ರಕ್ರಿಯೆ ನಡೆಯುತ್ತಿದೆ. ರಥ ನಿರ್ಮಿಸಲು ಅಂದಾಜು ಪಟ್ಟಿ ಸಿದ್ಧವಾಗಿದೆ. ದರ ನಿಗದಿಯಲ್ಲಿ ಕೆಲ ತಾಂತ್ರಿಕ ತೊಂದರೆಗಳು ಎದುರಾಗಿವೆ.ನಿಗದಿಗಿಂತ ಹೆಚ್ಚು ವೆಚ್ಚ ರಥ ನಿರ್ಮಾಣಕ್ಕೆ ತಗುಲುತ್ತದೆ. ಟೆಂಡರ್‌ ಮೂಲಕ ನಿರ್ಮಾಣದ ಗುತ್ತಿಗೆ ನೀಡುವ ಪ್ರಕ್ರಿಯೆ ಪೂರ್ಣವಾದ ಬಳಿಕ ಹಣ ಗುತ್ತಿಗೆದಾರನ ಕೈ ಸೇರುವುದರಿಂದ ಗುತ್ತಿಗೆ ವಹಿಸಿಕೊಳ್ಳುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ.
ನಿತ್ಯಾನಂದ ಮುಂಡೋಡಿ, 
ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 

ಭಕ್ತರ ದೇಣಿಗೆಯಿಂದ ರಥ ನಿರ್ಮಿಸಿ
ದೇಗುಲಕ್ಕಿರುವ ಆದಾಯ ಮತ್ತು ಭಕ್ತರ ದೇಣಿಗೆ ಪಡೆದು ಬ್ರಹ್ಮರಥ ನಿರ್ಮಿಸಬೇಕು. ಈ ಕುರಿತು ಧಾರ್ಮಿಕ ದತ್ತಿ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಪತ್ರಕ್ಕೆ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಜಾತ್ರೆ ಮುಗಿದ ತತ್‌ಕ್ಷಣ ಜಿಲ್ಲಾಧಿಕಾರಿ ಬಳಿ ನಿಯೋಗದಲ್ಲಿ ತೆರಳಿ ಗಮನಕ್ಕೆ ತರುತ್ತೇವೆ.
ಸೋಮಸುಂದರ
 ಕೂಜುಗೋಡು (ದೇಗುಲಕ್ಕೆ ಸಂಬಂಧವಿರುವ ಕೂಜುಗೋಡು ಮನೆತನದವರು)

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next