Advertisement
ಕುಮಾರಧಾರಾ-ಕಾಶಿಕಟ್ಟೆ ನಡುವೆ ಚತುಷ್ಪಥ ರಸ್ತೆ ವಿಸ್ತರಣೆ ಮತ್ತು ಕಾಶಿಕಟ್ಟೆ-ನೂಚಿಲ, ಕಾರ್ತಿಕೇಯ ವಸತಿಗೃಹ – ಆದಿಸುಬ್ರಹ್ಮಣ್ಯ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕಳೆದ ಒಂದು ವರ್ಷದಿಂದ ನಿಧಾನಗತಿಯಲ್ಲಿ ನಡೆಯುತ್ತಿವೆ. ಕಾಮಗಾರಿಗೆ ನಗರದ ಕುಡಿಯುವ ನೀರು, ಒಳಚರಂಡಿ, ಬಿಎಸ್ಸೆನ್ನೆಲ್ ಭೂಗತ ಸಂಪರ್ಕ ಕೇಬಲ್‌ಗಳಿಗೆ ಹಾನಿಯಾಗಿ ಸಮಸ್ಯೆಯಾಗಿದೆ. ದಾರಿದೀಪವೂ ಸರಿಯಾಗಿಲ್ಲದೆ ಕತ್ತಲಲ್ಲಿ ಕಳೆಯುವಂತಾಗಿದೆ.
ದೇವಸ್ಥಾನದ 12 ಸ್ಥಿರ ದೂರವಾಣಿಗಳು, ಬ್ರಾಡ್‌ಬ್ಯಾಂಡ್ ಸೇವೆಗಳು ಕಡಿತಗೊಂಡಿವೆ. ಭಕ್ತರಿಗೆ ದೇಗುಲ ಸಂಪರ್ಕವೂ ಸಾಧ್ಯವಾಗುತ್ತಿಲ್ಲ. ಕಚೇರಿ ಮಾಹಿತಿಗಳನ್ನು ಕಳುಹಿಸಲು, ಪಡೆಯಲು ಆಗುತ್ತಿಲ್ಲ. ಭಕ್ತರಿಗೆ ಸರ್ಪಸಂಸ್ಕಾರ ಸಹಿತ ಪ್ರಮುಖ ಸೇವೆ, ಕೊಠಡಿ ಕಾಯ್ದಿರಿಸುವಿಕೆ ಸಾಧ್ಯವಾಗದೆ ದೇಗುಲದ ಆದಾಯದ ಮೇಲೂ ಪರಿಣಾಮ ಬೀರುತ್ತಿದೆ.
Related Articles
ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಮತ್ತು ಮಠ ಇವೆರಡು ಪ್ರಮುಖ ಕ್ಷೇತ್ರಗಳು ಇಲ್ಲಿವೆ. ಬ್ಯಾಂಕಿಂಗ್, ಬ್ರಾಂಡ್‌ಬ್ಯಾಂಡ್ ಎಟಿಎಂ ಮೊದಲಾದ ಸೇವೆಗಳು ಸಿಗುತ್ತಿಲ್ಲ. ದೂರದ ಊರುಗಳಿಂದ ಬರುವವರು, ಸ್ಥಳೀಯರು, ಸಂಘ ಸಂಸ್ಥೆಯವರು, ಸರಕಾರಿ ನೌಕರರು ಸರಕಾರಿ ಸ್ವಾಮ್ಯದ ಮೊಬೈಲ್ ಸೇವೆಯನ್ನು ಅವಲಂಬಿಸಿರುತ್ತಾರೆ. ಅವರೆಲ್ಲ ಇಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ. ಒಎಫ್ಸಿ ಸಂಪರ್ಕ ಹೊಂದಿರುವ ಇತರೆ 23 ಮೊಬೈಲ್ ಟವರ್‌ಗಳು ಇಲ್ಲಿ ಏಕಕಾಲದಲ್ಲಿ ಸ್ಥಗಿತವಾಗುತ್ತಿವೆ. ವಿದ್ಯುತ್ತಿದ್ದರೂ ಸಿಗ್ನಲ್ ಇರುವುದಿಲ್ಲ. 23 ಕಡೆಗಳ ಗ್ರಾಮಗಳಲ್ಲಿ ಪಂಚಾಯತ್ ಕಚೇರಿ ಕೆಲಸ – ಕಾರ್ಯಗಳು ಸೂಕ್ತ ಸಮಯದಲ್ಲಿ ನಡೆಯುತ್ತಿಲ್ಲ. ಸೇವೆಗಳು ವ್ಯತ್ಯಯವಾಗುತ್ತಿವೆ.
Advertisement
ನೀರು ಪೋಲುನಗರಕ್ಕೆ ಕುಡಿಯುವ ನೀರು ಒದಗಿಸುವ ಮುಖ್ಯ ಪೈಪ್ ಅಲ್ಲಲ್ಲಿ ಒಡೆದಿರುವುದರಿಂದ ನಗರದ ಮುಖ್ಯ ಪೇಟೆ ಸಹಿತ ಎಲ್ಲ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಎರಡು ತಿಂಗಳಿನಿಂದ ಈ ಸಮಸ್ಯೆ ಆಗುತ್ತಿದೆ. ಶಿಕ್ಷಣ ಸಂಸ್ಥೆಗಳಿಗೂ ನೀರಿನ ಕೊರತೆ ತಟ್ಟಿದೆ. ಚರಂಡಿ ನೀರು ಸರಿಯಾಗಿ ಹರಿಯದೇ ಚರಂಡಿಯಲ್ಲಿ ನಿಂತು ರಸ್ತೆ ಮೇಲೆ ಹರಿಯುತ್ತಿವೆ. ಕಾಂಕ್ರೀಟು ರಸ್ತೆಯಲ್ಲಿ ಅಂಚಿಗೆ ಮಣ್ಣು ತುಂಬದೆ ಸಂಚಾರದಲ್ಲೂ ಸಮಸ್ಯೆಯಾಗಿದೆ. ಸಭೆ ಕರೆಯಲು ಆಗ್ರಹ
ರಸ್ತೆ ಕಾಮಗಾರಿ ಕಳಪೆಯಾಗಿದೆ. ಮಾಸ್ಟರ್ ಪ್ಲಾನ್ ಅಂದಾಜು ಪಟ್ಟಿಯಂತೆ ಕಾಮಗಾರಿ ನಡೆಸಿಲ್ಲ. ರಸ್ತೆ ವಿಸ್ತರಣೆಯಲ್ಲಿ ಖಾಸಗಿ ಭೂಮಿಗೆ ಪರಿಹಾರ ಮೊತ್ತದ ಹಣ ನೀಡಿದ್ದರೂ ಕೆಲವೆಡೆ ಒತ್ತುವರಿ ತೆರವು ನಡೆಸಿಲ್ಲ. ಅವೈಜ್ಞಾನಿಕ ಮತ್ತು ಬೇಕಾಬಿಟ್ಟಿ ಮಾಸ್ಟರ್ ಪ್ಲಾನ್ ಕಾಮಗಾರಿಯಿಂದ ಸಾರ್ವಜನಿಕರು, ಭಕ್ತರು ಪರದಾಡುವಂತಾಗಿದೆ. ಸಮಿತಿ ಸಭೆ ಕರೆಯದೇ ವರ್ಷಗಳೇ ಕಳೆದಿವೆ. ಮೂಲ ಸ್ವರೂಪ ಬದಲಿಸಿ ಕಾಮಗಾರಿ ನಡೆಸುತ್ತಿರುವುದೆ ಇಷ್ಟೆಲ್ಲ ಅವಾಂತರಕ್ಕೆ ಕಾರಣ. ಶೀಘ್ರವೇ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರು, ಕಮಿಷನರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಸುಬ್ರಹ್ಮಣ್ಯದಲ್ಲೇ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ ಆಗ್ರಹಿಸಿದ್ದಾರೆ. ಸಮೀಪಿಸುತ್ತಿದೆ ಚಂಪಾ ಷಷ್ಠಿ
ಕೆಟ್ಟು ಹೋದ ಬಿಎಸ್ಸೆನ್ನೆಲ್ ಹಾಗೂ ನೀರು ಸರಬರಾಜು ಕೊಳವೆಗಳ ಮರುಜೋಡಣೆ ಕಾರ್ಯ ಆರಂಭಗೊಂಡಿದೆ. ಸ್ಥಿರ ದೂರವಾಣಿ ವ್ಯವಸ್ಥೆ ಮರಳಿ ಯಥಾಸ್ಥಿತಿಗೆ ಬರಲು ಇನ್ನೂ ಕೆಲವು ದಿನಗಳು ಬೇಕು. ಅಲ್ಲಿಯ ತನಕ ಪರ್ಯಾಯ ವ್ಯವಸ್ಥೆ ಕಡೆ ಗಮನ ಹರಿಸಬೇಕಿದೆ. ಕಾಮಗಾರಿ ಯೋಜನೆಯ ಅವಧಿ 18 ತಿಂಗಳು. 10 ತಿಂಗಳಾದರೂ ಕಾಮಾಗಾರಿ ಶೇ. 25 ಕೂಡ ಪ್ರಗತಿ ಸಾಧಿಸಿಲ್ಲ. ಈಗ ನಡೆಯುತ್ತಿರುವ ಕಾಮಗಾರಿ ವೇಗ ಗಮನಿಸಿದರೆ ಇನ್ನು ಈ ಕಾಮಗಾರಿ ಪೂರ್ಣಗೊಳ್ಳಲು 3 ವರ್ಷ ಹಿಡಿಯಬಹುದು. ಡಿಸೆಂಬರ್‌ನಲ್ಲಿ ಚಂಪಾ ಷಷ್ಠಿಯೂ ನಡೆಯಲಿದ್ದು, ಈ ಸಂದರ್ಭ ಸಮಸ್ಯೆಯಾಗುವ ಸಾಧ್ಯತೆ ಇದೆ. ಇಲಾಖೆ ಸಹಕರಿಸುತ್ತಿಲ್ಲ
ಕಾಮಗಾರಿ ಮುಂಚಿತ ಭೂಗತ ಕೇಬಲ್ ಸ್ಥಳಾಂತರಿಸುವಂತೆ ದೂರಸಂಪರ್ಕ ಇಲಾಖೆಯ ಬಿಎಸ್ಸೆನ್ನೆಲ್‌ಗೆ ಸೂಚಿಸಲಾಗಿದೆ. ಕಾಮಗಾರಿ ನಡೆಯವ ಸ್ಥಳದಲ್ಲಿ ಸಿಬಂದಿ ಇಲ್ಲದೆ ಇರುವುದು ಸಮಸ್ಯೆಗೆ ಕಾರಣ. ನೀರಿನ ವಿಚಾರದಲ್ಲೂ ಇದೇ ಆಗಿದೆ.
– ಸುನೀಲ್, ಕಾಮಗಾರಿ ಗುತ್ತಿಗೆ ಮೇಲ್ವಿಚಾರಕ ಬಾಲಕೃಷ್ಣ ಭೀಮಗುಳಿ