Advertisement

ಕುಕ್ಕೆ : ಜನಸಂದಣಿ ಇರುವಾಗಲೇ 108 ನಾಪತ್ತೆ!

11:00 AM Dec 28, 2018 | |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾರ್ವಜನಿಕ ತುರ್ತು ಸೇವೆಗೆ ಒದಗಿಸಿರುವ ಸರಕಾರದ ತುರ್ತು ವಾಹನ 108 ಆರೋಗ್ಯ ಕವಚ ಆ್ಯಂಬುಲೆನ್ಸ್‌ ಒಂದು ಕಡೆ ಸೇವೆಗೆ ನಿಲ್ಲದೆ ವರ್ಷದಲ್ಲಿ ಹತ್ತಾರು ಭಾರಿ ಅಲೆದಾಟ ನಡೆಸುತ್ತಿದೆ.

Advertisement

ಸುಬ್ರಹ್ಮಣ್ಯ ಕೇಂದ್ರದಲ್ಲಿ ತುರ್ತು ಸೇವೆಗೆ ಲಭ್ಯವಿದ್ದ 108 ಆ್ಯಂಬುಲೆನ್ಸ್‌ ಕಳೆದ ಮೂರು ದಿನಗಳಿಂದ ಕುಕ್ಕೆಯಿಂದ ನಾಪತ್ತೆಯಾಗಿದೆ. ಸುಬ್ರಹ್ಮಣ್ಯ ಕೇಂದ್ರದ ಅಂಬುಲೆನ್ಸ್‌ ಅನ್ನು ಬೆಳ್ಳಾರೆ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಡಿ. 24ರಿಂದ ಕುಕ್ಕೆಯಲ್ಲಿ ತುರ್ತು ಸೇವೆಯ 108 ಆ್ಯಂಬುಲೆನ್ಸ್‌ ಸೇವೆಗೆ‌ ಲಭ್ಯವಿಲ್ಲ. ಸರಣಿ ರಜೆ ಹಿನ್ನೆಲೆಯಲ್ಲಿ ಕುಕ್ಕೆಯಲ್ಲಿ ಜನಸಂದಣಿ ಅಧಿಕವಿದ್ದ ವೇಳೆಯಲ್ಲಿಯೇ ಇಲ್ಲಿನ ತುರ್ತು ಸೇವೆಯ ವಾಹನವನ್ನು ಬೇರೆಡೆಗೆ ವರ್ಗಾಯಿಸಿರುವುದು ಸ್ಥಳಿಯರ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಖಾಯಂ ಆಗಿ ಇಲ್ಲಿ ಇರಬೇಕಿದ್ದ 108 ಆರೋಗ್ಯ ಕವಚವನ್ನು ವರ್ಷದಲ್ಲಿ ಎಂಟು ಬಾರಿ ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಇಲಾಖೆ ಇತಿಹಾಸ ನಿರ್ಮಿಸಲು ಹೊರಟಿದೆ.

ಸುಸಜ್ಜಿತ ಆಸ್ಪತ್ರೆ ಇಲ್ಲಿಲ್ಲ
ರಾಜ್ಯದಲ್ಲೆ ಅಗ್ರಸ್ಥಾನ ಹೊಂದಿದ ದೇವಸ್ಥಾನವಿರುವ ಧಾರ್ಮಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ತುರ್ತು ಸಂದರ್ಭ ಆರೋಗ್ಯ ಸೇವೆಗೆ ಯಾವುದೇ ವ್ಯವಸ್ಥೆಗಳಿಲ್ಲ. ಹೀಗಾಗಿ ಇಲ್ಲಿರುವ 108 ಆ್ಯಂಬುಲೆನ್ಸ್‌ ಸಾರ್ವಜನಿಕರಿಗೆ ತುರ್ತು ಸೇವೆಗೆ ಅತ್ಯಂತ ಉಪಕಾರಿಯಾಗಿದೆ. ತುರ್ತು ಸೇವೆಯ ಸಂದರ್ಭ ಈ ವಾಹನ ಕೈ ಹಿಡಿಯುತ್ತದೆ. ಆದರೆ ತಿಂಗಳಲ್ಲೆ ಎರಡು ಮೂರು ಬಾರಿ ಆ್ಯಂಬುಲೆನ್ಸ್‌ ಬೇರೆಡೆಗೆ ಕಳುಹಿಸಿಕೊಡುವುದರಿಂದ ತುರ್ತು ಸಂದರ್ಭ ಸಾರ್ವಜನಿಕರ ಸೇವೆಗೆ ತೊಂದರೆಯಾಗುತ್ತಿದೆ.

ಪದೇ ಪದೇ ಸ್ಥಳಾಂತರ ಯಾಕೆ?
ಮೂರು ತಿಂಗಳ ಹಿಂದೆ ಇಲ್ಲಿನ ಆ್ಯಂಬುಲೆನ್ಸ್‌ ಅನ್ನು ಬೆಳ್ಳಾರೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಈ ವೇಳೆ 15 ದಿನಗಳ ಕಾಲ ಆ್ಯಂಬುಲೆನ್ಸ್‌ ಲಭ್ಯವಿರಲಿಲ್ಲ. ಅದಾದ ಬಳಿಕ ಎರಡು ತಿಂಗಳ ಹಿಂದೆ ಆ್ಯಂಬುಲೆನ್ಸ್‌ ವಾಹನ ಕೆಟ್ಟಿತ್ತು. ಟಯರ್‌ ಸವೆದು ಗ್ಯಾರೆಜ್‌ ಸೇರಿತ್ತು. ಈ ಅವಧಿಯಲ್ಲೂ 15 ದಿನಗಳ ಕಾಲ ಆ್ಯಂಬುಲೆನ್ಸ್‌ ಸಾರ್ವಜನಿಕ ಸೇವೆಗೆ ದೊರಕಿರಲಿಲ್ಲ. ಬಳಿಕ ಹೊಸ ಟಯರ್‌ ಅಳವಡಿಸಿ ಸೇವೆಗೆ ದೊರಕಿತ್ತು. ಇದೀಗ ಮತ್ತೆ ಆ್ಯಂಬುಲೆನ್ಸ್‌ ಬೇರೆಡೆಗೆ ಕಳುಹಿಸಿಕೊಡಲಾಗಿದೆ.

ಸೂಕ್ತ ಸಮಯಕ್ಕೆ ಸಿಗದ ಸೇವೆ
ಸುಬ್ರಹ್ಮಣ್ಯ ಭಾಗದಲ್ಲಿ ತುರ್ತು ಸೇವೆಗೆ ಆ್ಯಂಬುಲೆನ್ಸ್‌ ಕೊರತೆ ಇದೆ. ತುರ್ತು ಘಟನೆಗಳು ಸಂಭವಿಸಿದಾಗ ಸುಳ್ಯ, ಕಡಬ ಅಥವಾ ಬೆಳ್ಳಾರೆ ಕೇಂದ್ರದಿಂದ ಆ್ಯಂಬುಲೆನ್ಸ್‌ ತರಿಸಿಕೊಳ್ಳಲಾಗುತ್ತಿದೆ. ಈ ಅವಧಿಯಲ್ಲಿ ಬೇಕೆನಿಸಿದ ಸಮಯಕ್ಕೆ ಸೇವೆ ದೊರಕುತ್ತಿಲ್ಲ. ಆರೋಗ್ಯಕ್ಕೆ ಒಳಗಾದ ವ್ಯಕ್ತಿಯನ್ನು ಹೆಚ್ಚು ಸಮಯ ಇರಿಸಿಕೊಳ್ಳಲು ಸುಬ್ರಹ್ಮಣ್ಯ ಆಸುಪಾಸು ಸರಿಯಾದ ಆಸ್ಪತ್ರೆಯೂ ಇಲ್ಲ. ರಜೆ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಕ್ಷೇತ್ರದಲ್ಲಿ ಮೂರ್‍ನಾಲ್ಕು ದಿನಗಳಿಂದ ಇದ್ದಾರೆ. ಕ್ಷೇತ್ರಕ್ಕೆ ಬರುವ ಭಕ್ತರ ಪೈಕಿ ವಯಸ್ಸಿನವರು, ವಿವಿಧ ಆರೋಗ್ಯ ಸಮಸ್ಯೆಗೆ ಒಳಗಾದವರು ಇರುತ್ತಾರೆ. ಭಕ್ತರು ಇಲ್ಲಿ ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾದ ವೇಳೆ ತುರ್ತು ಸೇವೆಗೆ 108 ಸಿಗದೆ ಸಂಕಷ್ಟಕ್ಕೀಡಾಗುತ್ತಾರೆ. ದೇವಸ್ಥಾನಕ್ಕೆ ದಾನಿಯೊಬ್ಬರು ಆ್ಯಂಬುಲೆನ್ಸ್‌ ನೀಡಿದ್ದರೂ, ಅದು ಕೂಡ ಸೂಕ್ತ ನಿರ್ವಹಣೆ ಇಲ್ಲದೆ ಸೇವೆಗೆ ಸಿಗುತ್ತಿಲ್ಲ. 108 ಆ್ಯಂಬುಲೆನ್ಸ್ ನ ನಿರ್ವಹಣೆಯ ಜವಾಬ್ದಾರಿಯನ್ನು ಜಿವಿಕೆ ಸಂಸ್ಥೆ ವಹಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ 108 ಆ್ಯಂಬುಲೆನ್ಸ್‌ ನಿರ್ವಹಣೆ ಕೊರತೆಯಿಂದ ಜನರಿಗೆ ಸೂಕ್ತವಾದ ಸಂದರ್ಭದಲ್ಲಿ ಸೇವೆಗೆ ಲಭಿಸುತ್ತಿಲ್ಲ. 

Advertisement

ಶೀಘ್ರ ಒದಗಿಸುತ್ತೇವೆ
ಆ್ಯಂಬುಲೆನ್ಸ್‌ ಕೊರತೆ ಇದೆ. ಹೀಗಾಗಿ ಕುಕ್ಕೆಯ ಆ್ಯಂಬುಲೆನ್ಸ್‌ ಅನ್ನು ತಾತ್ಕಾಲಿಕವಾಗಿ ಬೇರೆಡೆಗೆ ವರ್ಗಾಯಿಸಿದ್ದೇವೆ. ಮೂರು ದಿನಗಳ ಒಳಗೆ ಕುಕ್ಕೆಗೆ ಆ್ಯಂಬುಲೆನ್ಸ್‌ ಮರಳಿ ಒದಗಿಸುತ್ತೇವೆ.
ಮಹಾಬಲ,
  ಮೇಲ್ವಿಚಾರಕ, ಜಿವಿಕೆ ಸಂಸ್ಥೆ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next