Advertisement

ಕುಕ್ಕೆ ಚಿನ್ನದ ರಥ: 80 ಕೋಟಿ ವೆಚ್ಚಕ್ಕೆ ಒಪ್ಪಿಗೆ

01:41 AM May 10, 2019 | Sriram |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ಅರ್ಪಣೆಗೆ ಸಂಬಂಧಪಟ್ಟಂತೆ 80 ಕೋಟಿ ರೂ.ಪರಿಷ್ಕೃತ ಅಂದಾಜು ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನವಾಗಿ ಚಿನ್ನದ ರಥ ನಿರ್ಮಿಸಿ, ಅರ್ಪಿಸುವ ಪ್ರಸ್ತಾವಕ್ಕೆ 2005ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅಂದಿನ ಸಂದರ್ಭಕ್ಕೆ 15 ಕೋಟಿ ರೂ.ವೆಚ್ಚದಲ್ಲಿ ಚಿನ್ನದ ರಥ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇತ್ತೀಚೆಗೆ ಕ್ಷೇತ್ರದ ಭಕ್ತರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ನೆನೆಗುದಿಗೆ ಬಿದ್ದಿರುವ ಯೋಜನೆಯನ್ನು ಪುನರ್‌ ಆರಂಭಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂದಿನ ಮಾರುಕಟ್ಟೆ ದರದಲ್ಲಿ ಚಿನ್ನದ ಬೆಲೆ, ನಿರ್ಮಾಣ ವೆಚ್ಚ ಎಲ್ಲ ಅಂದಾಜುಗಳನ್ನು ಪರಿಷ್ಕರಿಸಿ ಸಂಪುಟ ಸಭೆಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ 80 ಕೋಟಿ ರೂ. ಪರಿಷ್ಕೃತ ಅಂದಾಜು ಪ್ರಸ್ತಾವಕ್ಕೆ ಸಭೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.

ಸರ್ಕಾರದಿಂದ ಹಣ ವೆಚ್ಚಮಾಡದೆ ಸಾರ್ವಜನಿಕರ ದೇಣಿಗೆ ಸಂಗ್ರಹ ಹಾಗೂ ದೇವಾಲಯದ ಸಂಪನ್ಮೂಲ ಬಳಸಲು ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ. ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಕೊಲ್ಲೂರು ಕ್ಷೇತ್ರಕ್ಕೆ ನೀರು ಸರಬರಾಜು ಮಾಡುವ ಯೋಜನೆಗೆ ಸಂಬಂಧಪಟ್ಟಂತೆ 33.40 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next