ಕುಕನೂರು: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೋಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಯಲ್ಲಿರುತ್ತದೆ ಎಂದು ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯ ಎನ್.ಆರ್. ಕುಕನೂರು ಅಭಿಪ್ರಾಯಪಟ್ಟರು. ಪಟ್ಟಣದ ವಿದ್ಯಾನಂದ ಗುರುಕುಲ ಶಾಲೆಯಲ್ಲಿ 2007-08 ಸಾಲಿನಲ್ಲಿ ಮೆಟ್ರಿಕ್ ಮುಗಿಸಿ ಹೋದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.
ಇಂದು ಯಾವುದೇ ಕೆಲಸ ಮಾಡಲಿ ಪ್ರಾಮಾಣಿಕತೆಯಿಂದ ಮಾಡಬೇಕು. ನಾವು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿ ಋಣ ತೀರಿಸಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿ ಎ.ಪಿ. ಮುಧೋಳ್ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಮುಂದುವರಿದ ಕಾಲದಲ್ಲಿ ವಿಶ್ವವೇ ಒಂದು ಗ್ರಾಮವಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇದೀಗ ಅಗತ್ಯವಿದೆ ಎಂದರು.
ನಂತರ ಮಾತನಾಡಿದ ಪಿಯು ಕಾಲೇಜಿನ ಪ್ರಾಚಾರ್ಯ ಕೆ.ಆರ್. ಕುಲಕರ್ಣಿ, ಪಾಠ ಪ್ರವಚನಗಳಷ್ಟೇ ನಡೆಯುವುದಲ್ಲ. ಕ್ರಿಯಾತ್ಮಕ ಚಟುವಟಿಕೆಗಳು ನಡೆದಾಗಲೇ ಶಾಲೆಯೊಂದು ಶೈಕ್ಷಣಿಕ ಅಭಿವೃದ್ಧಿ ಜತೆಗೆ ಗ್ರಾಮದ ಅಭಿವೃದ್ಧಿಯಲ್ಲೂ ತನ್ನ ಪಾತ್ರ ವಿಸ್ತರಿಸಲು ಸಾಧ್ಯವಾಗುತ್ತದೆ. ಇಂತಹ ಕ್ರಿಯಾತ್ಮಕ ಚಟುವಟಿಕೆಗಳಿಂದ ವಿದ್ಯಾನಂದ ಗುರುಕುಲ ಸಂಸ್ಥೆಯ 2022ನೇ ವರ್ಷಕ್ಕೆ ಶತಮಾನೋತ್ಸವನ್ನು ಸಂಭ್ರಮಾಚರಣೆ ಇದೆ. 2007-08 ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಎಲ್ಲ ಯುವಕರು, ಯುವತಿಯರು ಒಗ್ಗೂಡಿ ಯಶಸ್ವಿಗೊಳಿಸಿದ್ದು ಎಲ್ಲರಿಗೂ ಅಭಿನಂದಿಸಿದರು.
ಬಸಪ್ಪ ಮಾಸ್ಟರ, ಎಸ್.ಎಂ. ಮಾಳವಾಡ, ಎಚ್. ಎಸ್. ನೋಟಗಾರ, ಎನ್.ಕೆ.ದಿಧೀಕ್ಷಿತ್, ದತ್ತಪ್ಪ ಮಾಸ್ಟರ, ಅನ್ವರ್ ಮಕಾಂದಾರ, ಚಂದ್ರು ಹೆಳವಾರ, ದುರುಗಪ್ಪ ಗಡ್ಡದವರ, ಪ್ರಸ್ತತ ಶಾಲೆಯಲ್ಲಿ ಶಿಕ್ಷಕರಾಗಿರುವ ರಾಜು ಪೂಜಾರ, ರಾಜು ಪಾಟೀಲ, ಶಿವಕುಮಾರ ಹೆಳವಾರ, ಗೀತ ಪದಕಿ ಹಾಗೂ ಮತ್ತಿತರರಿದ್ದರು.