ಹೊಳೆಹೊನ್ನೂರು: ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಕುಜದೋಷ ಅಡ್ಡಿಯಾಗಿದ್ದರಿಂದ ಮಹಿಳಾ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾವತಿ ತಾಲ್ಲೂಕಿನ ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಸುಧಾ (29) ಎಂದು ಗುರುತಿಸಲಾಗಿದ್ದು, ಈಕೆ ಮೂಲತಃ ಕಲ್ಲಾಪುರ ಗ್ರಾಮದ ನಿವಾಸಿಯಾಗಿದ್ದು, ಈ ಗ್ರಾಮದಲ್ಲಿ ಕೇವಲ ಇಬ್ಬರು ಮಾತ್ರ ಸ್ವತಂತ್ರ ನಂತರ ಸರ್ಕಾರಿ ನೌಕರಿ ಪಡೆದವರು, ಆದರೆ ಸುಧಾರವರು ಮಹಿಳೆಯರಲ್ಲಿ ಪ್ರಥಮರಾಗಿದ್ದು, ಇವರು ಭದ್ರಾವತಿ ಅರಣ್ಯವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾಗಿದ್ದ ಬೆಳಗಾವಿ ಮೂಲದ ಪ್ರವೀಣ್ ಅವರನ್ನು 6 ವರ್ಷಗಳಿಂದ ಪ್ರೀತಿಸುತ್ತಿದ್ದರು.ಇವರ ಪ್ರೀತಿಗೆ ಹೆತ್ತವರ ವಿರೋಧವಿತ್ತು.
ಆರಂಭದಲ್ಲಿ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು. ಜಾತಿ ಅಡ್ಡಿಯ ನಡುವೆಯೂ ಇಬ್ಬರೂ ಮದುವೆಗೆ ಸಿದ್ದರಾಗಿದ್ದರು. ಆದರೆ ಪ್ರವೀಣ್ ರವರ ತಾಯಿ ಯುವತಿ ಜಾತಕವನ್ನು ಜ್ಯೋತಿಷಿರೊಬ್ಬರಿಗೆ ತೋರಿಸಿದ್ದರು. ಆ ಜ್ಯೋತಿಷಿ ಈ ಯುವತಿಗೆ ಕುಜದೋಷವಿದೆ ಇವಳೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಎಂದಿದ್ದಾರೆ ಎನ್ನಾಲಾಗಿದೆ. ಹೀಗಾಗಿ ಕುಜದೋಷ ಇರುವ ಹುಡುಗಿ ಜತೆ ಮದುವೆ ಮಾಡಲು ಸಾಧ್ಯವಿಲ್ಲವೆಂದು ಎಂದು ಪ್ರವೀಣ್ ತಾಯಿ ತಿಳಿಸಿದ್ದರು.
ಅಲ್ಲದೇ ಸುಧಾಳಿಗೂ ಫೋನ್ ಮಾಡಿ ನನ್ನ ಮಗನ ಸಹವಾಸ ಬಿಟ್ಟುಬಿಡು, ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಅವಾಜ್ ಕೂಡ ಹಾಕಿದ್ದರಂತೆ. ಇದರಿಂದ ಮನನೊಂದ ಪ್ರೇಮಿಗಳು ಮೇ 31ರಂದು ಭದ್ರಾವತಿ ಎಪಿಎಂಸಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಸಿದ್ದರು.ನಂತರ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸುಧಾರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸ್ವಗ್ರಾಮದ ಪ್ರಥಮ ಮಹಿಳಾ ಸರ್ಕಾರಿ ನೌಕರೆ ಸುಧಾ ಅವರ ಅಂತ್ಯ ಸಂಸ್ಕಾರ ಶುಕ್ರವಾರ ಸಂಜೆ ಸಕಲ ವಿಧಿವಿಧಾನಗಳೊಂದಿಗೆ ಗ್ರಾಮದ ಅವರ ಸ್ವಂತ ತೋಟದಲ್ಲಿ ನೆರವೇರಿತು. ವಿವಾಹವಾಗಿ ಗಂಡನೊಂದಿಗೆ ಸುಖ ಜೀವನ ನಡೆಸಬೇಕಾಗಿದ್ದ ಯುವತಿ ಮೂಢನಂಬಿಕೆಯ ಜಾಲಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಬೇಕಾಯಿತು. ಪ್ರವೀಣ್ ವಿಷ ಸೇವಿಸುವ ನಾಟಕ ಮಾಡಿ ಮಗಳ ಸಾವಿಗೆ ನೇರ ಕಾರಣನಾಗಿದ್ದಾನೆ ಎಂದು ಸುಧಾ ಕುಟುಂಬಸ್ಥರು ಆರೋಪಿಸಿದ್ದಾರೆ.