ಉಡುಪಿ: ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೃಷಿಕ, ಉದ್ಯಮಿ ಕುಯಿಲಾಡಿ ಸುರೇಶ ನಾಯಕ್ ಆಯ್ಕೆಯಾಗಿದ್ದಾರೆ. 1989ರಿಂದ ಪಕ್ಷದಲ್ಲಿ ಸಕ್ರಿಯರಾಗಿರುವ ಅವರು ಪ್ರಸ್ತುತ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. 1986ರಿಂದ ಆರೆಸ್ಸೆಸ್ ಸ್ವಯಂಸೇವಕರಾಗಿರುವ ನಾಯಕ್ ಸಂಘದ ವಿಶೇಷ ಶಿಕ್ಷಣವನ್ನೂ ಪಡೆದಿದ್ದಾರೆ. ಅವರು ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವೀಧರರು.
1996ರಲ್ಲಿ ಉಡುಪಿ ಮಂಡಲ ಪ್ರಧಾನ ಕಾರ್ಯದರ್ಶಿ, 2005ರಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, 2008ರಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, 2010ರಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, 2011ರಲ್ಲಿ ಉಡುಪಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ, 2013ರಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ, ಈ ಅವಧಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೀಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಬಸ್ ಮಾಲಕರೂ ಆದ ನಾಯಕ್ ಉಡುಪಿ ಬಸ್ ಮಾಲಕರ ಬಹೂದ್ದೇಶಿತ ಸಹಕಾರ ಸಂಘ, ಉಡುಪಿ ಸಿಟಿ ಬಸ್ ಮಾಲಕರ ಸಂಘ, ಧಾರವಾಡ ಬಸ್ ಮಾಲಕರ ಸಂಘದ ಅಧ್ಯಕ್ಷ, ಉಭಯ ಜಿಲ್ಲೆಗಳ ವ್ಯಾಪ್ತಿಯ ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಬಸ್ ಮಾಲಕರ ಒಕ್ಕೂಟದ ಖಜಾಂಚಿ, ಸಾಂಸ್ಕೃತಿಕ ಸಂಘಟನೆ ಅಮೋಘದ ನಿರ್ದೇಶಕ ಹೀಗೆ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಪದಗ್ರಹಣ ಸಮಾರಂಭ ಜರಗಲಿದೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಪಕ್ಷ ಅತ್ಯಂತ ಸದೃಢವಾಗಿದೆ. ಮುಂಬರುವ ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಯಲ್ಲಿ ಹಿಂದಿನ ಬಾರಿ ಗಳಿಸಿದ ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜತೆಗೆ ಕಳೆದುಕೊಂಡ ಸ್ಥಾನಗಳನ್ನೂ ಪಡೆದು ಇಡೀ ಜಿಲ್ಲೆಯನ್ನು ಬಿಜೆಪಿ ಮಾಡಲು ಪ್ರಯತ್ನಿಸುತ್ತೇನೆ. ಸಹಕಾರಿ ರಂಗದತ್ತಲೂ ಗಮನ ಹರಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು, ಸರಕಾರದ ಜನಪರ ಯೋಜನೆಯನ್ನು ಶಾಸಕರು, ಮಂತ್ರಿಗಳ ಜತೆ ಚರ್ಚಿಸಿ ಜನಸಾಮಾನ್ಯರಿಗೆ ಮುಟ್ಟಿಸಲು ಪ್ರಯತ್ನಿಸುತ್ತೇನೆ. – ಸುರೇಶ ನಾಯಕ್