Advertisement

ಕುಡುಪು, ವಾಮಂಜೂರು: ಕಟ್ಟಡ ತೆರವು ಕಾರ್ಯಾಚರಣೆ

11:35 AM Jul 18, 2022 | Team Udayavani |

ಕುಡುಪು: ರಾಷ್ಟ್ರೀಯ ಹೆದ್ದಾರಿ 169ರ ಬಿಕರ್ನಕಟ್ಟೆ-ಸಾಣೂರು ಚತುಷ್ಪಥ ಯೋಜನೆಗೆ ಪೂರಕವಾಗಿ ಕಟ್ಟಡ ತೆರವು ಕಾರ್ಯಾಚರಣೆ ರವಿವಾರ ಕುಡುಪುವಿನಿಂದ ವಾಮಂಜೂರುವರೆಗೆ ನಡೆಯಿತು. ಸುಮಾರು 10 ಮನೆ, ಅಂಗಡಿಯ ಕಾಂಪೌಂಡ್‌ ಗೋಡೆಯನ್ನು ಬುಲ್ಡೋಜರ್‌ ಮೂಲಕ ತೆರವು ಮಾಡಲಾಗಿದೆ. ಜತೆಗೆ 1 ಗ್ಯಾರೇಜ್‌ ಕಟ್ಟಡ ತೆರವು ಆಗಿದೆ.

Advertisement

ಮನೆ, ಕಟ್ಟಡ ತೆರವು ಕಾರ್ಯಾ ಚರಣೆ ಸಂದರ್ಭ ಕುಡುಪು ಹಾಗೂ ವಾಮಂಜೂರು ಭಾಗದಲ್ಲಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. “ಕಾನೂನು ವಿಚಾರ ಇನ್ನೂ ಬಾಕಿ ಇರುವಾಗ ಏಕಾಏಕಿ ತೆರವು ಮಾಡುವ ಕ್ರಮ ಸರಿಯಲ್ಲ; ಕೊಂಚ ದಿನ ಅವಕಾಶ ನೀಡಬೇಕು’ ಎಂದು ಕೆಲವರು ಕೋರಿದರು. ಈ ವೇಳೆ ಕೆಲವು ಕಟ್ಟಡ ಮಾಲಕರು ಹಾಗೂ ಭೂಸ್ವಾಧೀನಾಧಿಕಾರಿಗಳ ಜತೆಗೆ ಮಾತಿನ ಚಕಮಕಿಗೂ ಕಾರಣವಾಯಿತು.

‘ಭೂಸ್ವಾಧೀನಕ್ಕೆ ಸಂಬಂಧಿಸಿ ಹಣ ಪಡೆದುಕೊಂಡವರು ತೆರವು ಮಾಡುವಂತೆ ಈಗಾಗಲೇ ಕೆಲವು ಬಾರಿ ನೋಟಿಸ್‌ ನೀಡಿದ್ದರೂ ತೆರವು ಮಾಡದ ಕಾರಣದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ.

ಮಂಗಳೂರು ಸಹಾಯಕ ಆಯುಕ್ತ ಮದನ್‌ ಮೋಹನ್‌, ರಾ.ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ (ಪ್ರಭಾರ) ಬಿನೋಯ್‌, ತಹಶೀಲ್ದಾರ್‌ ಪುರಂದರ ಹೆಗ್ಡೆ, ರಾ.ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರಾದ ದಿಲೀಪ್‌ ಬಿಲ್ಡ್‌ಕಾನ್‌ನ ಪ್ರಮುಖರು ಉಪಸ್ಥಿತರಿದ್ದರು.

ಕಟ್ಟಡ ತೆರವು ಕಾರ್ಯಾಚರಣೆಗೆ ಜೂ. 28ರಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕುಡುಪುವಿನಲ್ಲಿ ಚಾಲನೆ ನೀಡಿದ್ದರು. ಮನೆ, ಅಂಗಡಿ ಸಹಿತ ಖಾಸಗಿ ಸ್ಥಳದ ತೆರವು ಬಗ್ಗೆ ಆಗ ಸೂಚನೆ ನೀಡಲಾಗಿತ್ತು. ಈ ಸಂಬಂಧ ರವಿವಾರದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ.

Advertisement

ವಾರದೊಳಗೆ ಮನೆ, ಕಟ್ಟಡ ತೆರವು: ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಟ್ಟು ಪರಿಹಾರ ಮೊತ್ತ ಪಡೆದುಕೊಂಡವರು ಈಗಾಗಲೇ ಸ್ಥಳ ತೆರವು ಮಾಡಬೇಕಿತ್ತು. ತೆರವು ಮಾಡದ ಕಾರಣ ಕಾರ್ಯಾಚರಣೆಯನ್ನು ಕುಡುಪುವಿನಿಂದ ವಾಮಂಜೂರು ಭಾಗದವರೆಗೆ ರವಿವಾರ ನಡೆಸಲಾಗಿದೆ. ಕೆಲವು ಕಾಂಪೌಂಡ್‌ ಕೆಡವಲಾಗಿದೆ. ಪರಿಹಾರ ಮೊತ್ತ ಪಡೆದವರು ಮುಂದಿನ 1 ವಾರದೊಳಗೆ ಕಟ್ಟಡ/ಮನೆ ತೆರವು ಮಾಡದಿದ್ದರೆ ನಾವೇ ತೆರವು ಮಾಡಲಿದ್ದೇವೆ ಎಂದು ಸೂಚನೆ ನೀಡಲಾಗಿದೆ. – ಬಿನೋಯ್‌, ವಿಶೇಷ ಭೂಸ್ವಾಧೀನಾಧಿಕಾರಿ, (ಪ್ರಭಾರ) ರಾ.ಹೆದ್ದಾರಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next