ಕುಡಚಿ: ಮಹಾರಾಷ್ಟ್ರದಲ್ಲಿ ಸುಮಾರು 7-8 ದಿಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದಲ್ಲಿ ಕುಡಚಿ, ಗುಂಡವಾಡ, ಶಿರಗೂರ ಹಾಗೂ ಖೇಮಲಾಪೂರ, ಸಿದ್ದಾಪುರ ಗ್ರಾಮಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮತ್ತು ಪರಮಾನಂದವಾಡಿ ಗ್ರಾಮದಲ್ಲಿ ಹಳ್ಳಕೊಳ್ಳಗಳ ಹಿನ್ನಿರ ಏರಿಕೆಯಾದ್ದರಿಂದ ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ತಾಲೂಕಾಡಳಿತ ಅಧಿಕಾರಿ ಮತ್ತು ನೂಡಲ ಅಧಿಕಾರಿಗಳ ಸಮೇತ ಜು.28ರ ಭಾನುವಾರ ಭೇಟಿ ನೀಡಿದರು.
ಸಿದ್ದಾಪೂರ, ಖೇಮಲಾಪೂರ ಮತ್ತು ಪರಮಾನಂದವಾಡಿ ಗ್ರಾಮಗಳಲ್ಲಿ ಪ್ರವಾಹದ ಬಗ್ಗೆ ಜನರೊಂದಿಗೆ ಚರ್ಚಿಸಿದರು. ಕೆಲ ಗ್ರಾಮಗಳಲ್ಲಿ ಜನರು ಪ್ರತಿ ವರ್ಷ ಪ್ರವಾಹ ಬಂದರೆ ತಮಗಾಗುವ ಸಮಸ್ಯಗಳ ಬಗ್ಗೆ ಶಾಸಕರ ಮುಂದೆ ಹೇಳಿಕೊಂಡು.
ಶಿರಗೂರ ಗ್ರಾಮದಲ್ಲಿ ದೋಣಿ ಬಳಸಿ ರಾಯಬಾಗದ ತಹಶೀಲ್ದಾರರ ಸುರೇಶ ಮುಂಜೆ ಹಾಗೂ ಪ್ರವಾಹಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ತೆರಳಿ ನೀರಿನ ಮಟ್ಟ ವೀಕ್ಷಿಸಿದರು.
ಶಿರಗೂರ ಗ್ರಾಮದ ಜನರು, ಪ್ರತಿ ವರ್ಷ ಈ ಪ್ರವಾಹದಿಂದ ನಾವು ಬೇಸತ್ತಿದ್ದೇವೆ. ಆದ್ದರಿಂದ ನಮಗೆ ಇಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸಿ ಎಂದು ಶಾಸಕರನ್ನು ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ನನ್ನದು ಇನ್ನೂ 4 ವರ್ಷಗಳ ಅವಧಿ ಇದೆ. ಶಿರಗೂರ-ಗುಂಡವಾಡ ಗ್ರಾಮಗಳನ್ನು ಸ್ಥಳಾಂತರಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ನಂತರ ಕುಡಚಿ ಪಟ್ಟಣದ ಕೃಷ್ಣಾ ನದಿ ತಟದಲ್ಲಿರುವ ಜನರನ್ನು ಭೇಟಿ ಮಾಡಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಕೊಂಡಿಯಂತಿರುವ ಉಗಾರ ಮತ್ತು ಕುಡಚಿ ಮಧ್ಯೆ ನದಿಗೆ ಕಟ್ಟದ ಮೂಳಗಿದ ಸೇತುವೆ ವೀಕ್ಷಿಸಿ, ಕುಡಚಿ ಪುರಸಭೆ ಸಬಾಭವನದಲ್ಲಿ ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಾಲೂಕಾಡಳಿತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕುಡಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ರಾಯಭಾಗ ತಹಶೀಲ್ದಾರ್ ಸುರೇಶ್ ಮುಂಜೆ, ಸಿಪಿಐ ರವಿಚಂದ್ರನ್ ಡಿಬಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ, ವಾಸುದೇವ ಉಪ ನಿರ್ದೆಶಕ ಕೈಮಗ್ಗದ ಇಲಾಖೆ ಬೆಳಗಾವಿ ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ, ಎಸ್.ಎಮ್. ಪಾಟೀಲ, ತಾಲೂಕು ಮುಖ್ಯ ವೈದ್ಯಾಧಿಕಾರಿ, ಪಿಡಬ್ಲುಡಿ ಅಧಿಕಾರಿ ಆರ್.ಬಿ. ಮನೋವಡ್ಡರ, ಶಿಕ್ಷಣ ಅಧಿಕಾರಿ ಬಸವರಾಜ ಆರ್. ಮುಖಂಡರಾದ ಚನ್ನಗೌಡ ಪಾಟೀಲ ಸೇರಿದಂತೆ ಇನ್ನೂ ಅನೇಕ ಸಿಬ್ಬಂದಿಗಳು ರಾಜಕೀಯ ಮುಖಂಡರುಗಳು ಶಾಸಕರ ಅಭಿಮಾನಿಗಳು ಉಪಸ್ಥಿತರಿದ್ದರು.