Advertisement
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಎನ್‌ಆರ್‌ಐ ಫೋರಂನ ಮಾಜಿ ಉಪಾಧ್ಯಕ್ಷೆ, ಕೋವಿಡ್ ವಾರಿಯರ್ ಡಾ| ಆರತಿ ಕೃಷ್ಣ ಅವರು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಿತು. ಬೆಳಗ್ಗೆಯಿಂದ ಮಹಾನವಮಿ ಉತ್ಸವ, ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, ಕಲಶ ಪ್ರತಿಷ್ಠೆ, ಪುಷ್ಪಾಲಂಕಾರ, ಮಹಾಪೂಜೆ, ಭಜನೆ, ಶ್ರೀದೇವಿಗೆ ಪುಷ್ಪಾಲಂಕಾರ, ಮಹಾಪೂಜೆ ನಡೆಯಿತು.
Related Articles
Advertisement
ಉರ್ವ ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶನಿವಾರ ನವಕಲಶಾಭಿಷೇಕ, ಸರ್ವಾಲಂಕಾರ ಪೂಜೆ, ಮಹಾಪೂಜೆ, ಹೊರಗಿನ ದರ್ಶನ ಬಲಿ ಸೇವೆ ನಡೆಯಿತು.ಅಡು ಮರೋಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಕಲಶ ಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವ ಆರಂಭಗೊಂಡಿತು.
ಮಂಗಳೂರು ದಸರಾಕ್ಕೆ ಹುಲಿವೇಷದ ಮೆರಗು :
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಮಂಗಳೂರು ದಸರಾ ಉದ್ಘಾಟನ ಸಮಾರಂಭದಲ್ಲಿ ಹುಲಿ ವೇಷ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿತ್ತು. ಶಾರದಾ ಪ್ರತಿಷ್ಠೆಯ ಸಂದರ್ಭ ಹುಲಿ ಕುಣಿತ ವಿವಿಧ ಕಸರತ್ತುಗಳಿಂದ ರಂಜಿಸಿತ್ತು. ಕೆಲವು ಹುಲಿವೇಷಗಳ ಮೇಲೆ ತುಳು ಲಿಪಿ ಬರೆಹ ಎಲ್ಲರ ಗಮನ ಸೆಳೆದಿತ್ತು.
ಕೋವಿಡ್ ಕಾರಣವೊಡ್ಡಿ ಹುಲಿವೇಷ ಕುಣಿತಕ್ಕೆ ಜಿಲ್ಲಾಡಳಿತ ಈ ಹಿಂದೆ ಅನುಮತಿ ನೀಡಿರಲಿಲ್ಲ. ಆದರೆ ಹುಲಿವೇಷ ಕುಣಿತ ಸೇವೆಗೆ ಅವಕಾಶ ನೀಡಬೇಕು ಎಂದು ಕರಾವಳಿಯ ವಿವಿಧ ಸಂಘಟನೆಗಳು ದ.ಕ. ಜಿಲ್ಲಾಡಳಿತವನ್ನು, ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ನಿಬಂಧನೆಗಳ ಮುಖೇನ ಹುಲಿವೇಷ ಕುಣಿತ ಸೇವೆಗೆ ಅವಕಾಶ ನೀಡಲಾಗಿತ್ತು.
ಇಂದಿನ ಕಾರ್ಯಕ್ರಮ :
ಕುದ್ರೋಳಿ ಕ್ಷೇತ್ರದಲ್ಲಿ ಬೆಳಗ್ಗೆ 9.45ಕ್ಕೆ ದುರ್ಗಾಹೋಮ, ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ಸಂಜೆ 7ಕ್ಕೆ ಭಜನೆ, ರಾತ್ರಿ 9ಕ್ಕೆ ಶ್ರೀದೇವಿಗೆ ಪುಷ್ಪಾಲಂಕಾರ ಮಹಾಪೂಜೆ ನಡೆಯಲಿದೆ.
ಮಾರಿಯಮ್ಮ ಕ್ಷೇತ್ರದಲ್ಲಿ ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ರಿಂದ ಸರ್ವಾಲಂಕಾರ ಪೂಜೆ, ಮಹಾಪೂಜೆ ನೆರವೇರಲಿದೆ.
ದರ್ಬಾರು ಮಂಟಪ : ಮಂಗಳೂರು ದಸರಾ ಮಹೋತ್ಸವ ದರ್ಬಾರು ಮಂಟಪವನ್ನು ಈ ಬಾರಿಯೂ ಚಂದ್ರಶೇಖರ್ ಸುವರ್ಣ ಮೂಲ್ಕಿ ನೇತೃತ್ವದತಂಡ ಅಚ್ಚುಕಟ್ಟಾಗಿ, ಆಕರ್ಷಕವಾಗಿ ರಚಿಸಿದೆ.
ಪೊಳಲಿ :
ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ ಆರಂಭಗೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನವರಾತ್ರಿಯ ಮೊದಲ ದಿನವಾದ ಶನಿವಾರ ಮಧ್ಯಾಹ್ನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ರಾತ್ರಿ ಮೊದಲ ದಿನದ ನವರಾತ್ರಿ ಪೂಜೆಯಬಳಿಕ ರಂಗಪೂಜೆ ನಡೆಯಿತು.
ಬಪ್ಪನಾಡು :
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ಆರಂಭಗೊಂಡಿತು. ಶ್ರೀ ದೇವಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ನೆರವೇರಿತು.
ಸುರತ್ಕಲ್: ತೆನೆ ಹಬ್ಬ ಆಚರಣೆ :
ಸುರತ್ಕಲ್: ಇಲ್ಲಿನ ರಥಬೀದಿಯ ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ ಮತ್ತು ಶ್ರೀ ವೀರಭದ್ರ ದುರ್ಗಾಪರಮೇಶ್ವರೀದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ತೆನೆ ಹಬ್ಬ ಆಚರಣೆ ಬಾಕಿಮಾರು ಗದ್ದೆಯಲ್ಲಿ ಜರಗಿತು. ಕ್ಷೇತ್ರದ ಅರ್ಚಕ ನಾರಾಯಣ ಮಯ್ಯ, ಕ್ಷೇತ್ರದ ಗುರಿಕಾರರು, ವಿಳಯದಾರರು, ಆಡಳಿತ ಮಂಡಳಿಯವರು, ಐದು ಮಾಗಣೆ ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.