Advertisement

ಕುದ್ರೋಳಿ: ನವರಾತ್ರಿ ಮಹೋತ್ಸವಕ್ಕೆ ಚಾಲನೆ

10:40 AM Sep 22, 2017 | Team Udayavani |

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರಗುವ ಮಂಗಳೂರು ದಸರಾಕ್ಕೆ ಮುನ್ನುಡಿಯಾಗಿ ಶ್ರೀ ಕ್ಷೇತ್ರದಲ್ಲಿ ಶಾರದೆ ಹಾಗೂ ನವದುರ್ಗೆಯರ ಪ್ರತಿಷ್ಠೆ ಗುರುವಾರ ನೆರವೇರಿತು.

Advertisement

ಮಧ್ಯಾಹ್ನ 12.20ಕ್ಕೆ ದೇವಸ್ಥಾನದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಕಲಾತ್ಮಕ ದರ್ಬಾರು ಮಂಟಪದಲ್ಲಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಯಿತು.

ನವರಾತ್ರಿ ಮಹೋತ್ಸವಕ್ಕೆ ಮಂಗಳೂರು ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಚಾಲನೆ ನೀಡಿದರು. ನವರಾತ್ರಿ ಸರ್ವರಿಗೂ ಸನ್ಮಂಗಲ ಕರುಣಿಸಲಿ. ಸಾಮರಸ್ಯ ಮೂಡುವಂತಾಗಲಿ. ನಾಡಿನ ಜನರ ನಿರೀಕ್ಷೆಗಳು ಈಡೇರಲಿ ಎಂದು ಹಾರೈಸಿದ ಸುರೇಶ್‌ ಅವರು, ದಸರಾ ಹಿನ್ನೆಲೆಯಲ್ಲಿ ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿರುವ ಕುದ್ರೋಳಿ ಕ್ಷೇತ್ರವನ್ನು ನೋಡುವುದೇ ಆನಂದ ಎಂದರು.

ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, ಕಲಶ ಸ್ಥಾಪನೆ ನಡೆಯಿತು. ಬಳಿಕ 11.30ಕ್ಕೆ ವೈಭವದ ಮೆರವಣಿಗೆಯಲ್ಲಿ ಶಾರದಾ ಮಾತೆಯ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು. ಬ್ಯಾಂಡ್‌, ಕೊಂಬು ವಾದ್ಯ, ಚೆಂಡೆ ತಂಡ, ಹುಲಿವೇಷ ತಂಡ ಮೆರುಗು ನೀಡಿದವು.

ನವದುರ್ಗೆಯರು:
ಶ್ರೀ ಶಾರದಾ ಮಾತೆಯೊಂದಿಗೆ ನವದುರ್ಗೆಯರ ಆರಾಧನೆ ಇಲ್ಲಿನ ವೈಶಿಷ್ಟ್ಯ. ಶ್ರೀ ಶಾರದಾ ಮಾತೆ, ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿ ಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿಯರನ್ನು ವಿಗ್ರಹರೂಪದಲ್ಲಿ ಆರಾಧಿಸಲಾಗುತ್ತದೆ. ಜತೆಗೆ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.

Advertisement

ಮಂಗಳೂರು ಮೇಯರ್‌ ಕವಿತಾ ಸನಿಲ್ , ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌, ಎಸಿಪಿ ಉದಯ ನಾಯಕ್‌, ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ಬಿ.ಕೆ. ತಾರಾನಾಥ್‌, ರವಿಶಂಕರ್‌ ಮಿಜಾರು, ಕೆ. ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಹರಿಕೃಷ್ಣ ಬಂಟ್ವಾಳ, ದೇವೇಂದ್ರ ಪೂಜಾರಿ, ವಿಶ್ವನಾಥ್‌ ಕಾಸರಗೋಡು, ಡಾ| ಬಿ.ಜಿ. ಸುವರ್ಣ, ಎಂ. ಶೇಖರ್‌ ಪೂಜಾರಿ, ಹರೀಶ್‌ ಕುಮಾರ್‌, ಜತಿನ್‌ ಅತ್ತಾವರ, ಎನ್‌. ಹರೀಶ್ಚಂದ್ರ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್‌, ಡಾ| ಅನಸೂಯ, ಬಿ.ಟಿ. ಸಾಲಿಯಾನ್‌, ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್‌, ಸದಸ್ಯರಾದ ರಾಧಾಕೃಷ್ಣ, ದೀಪಕ್‌ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಮಂಗಳೂರು ಝಗಮಗ
ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ಕುದ್ರೋಳಿ ಕ್ಷೇತ್ರ ಸೇರಿದಂತೆ ಮಂಗಳೂರು ನಗರವೇ ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ಝಗಮಗಿಸುತ್ತಿದೆ. ನಗರದ ಪ್ರಮುಖ ವೃತ್ತಗಳನ್ನು ವಿಶೇಷ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಕ್ಷೇತ್ರದಲ್ಲಿ ದಿನಂಪ್ರತಿ ಅನ್ನ ಸಂತರ್ಪಣೆ ನಡೆಯಲಿದೆ. ಗುರುವಾರದಿಂದ ಅ.1ರ ವರೆಗೆ ಶ್ರೀ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ರಾಜ್ಯದ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. 

ಸೆ. 30ಕ್ಕೆ ವೈಭವದ ಮಂಗಳೂರು ದಸರಾ ಮೆರವಣಿಗೆ 
ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರ ಸರಕಾರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಮಂಗಳೂರು ದಸರಾ 10 ದಿನಗಳ ಕಾಲ ನಡೆಯಲಿದೆ. ಸೆ. 30ರಂದು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಹಾಗೂ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಟ್ಯಾಬ್ಲೊಗಳು, ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಮೆರವಣಿಗೆ ಸಾಗುವ ನಗರದ 9 ಕಿ.ಮೀ. ರಸ್ತೆ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದೆ. ಎಂದು ಹರಿಕೃಷ್ಣ ಬಂಟ್ವಾಳ, ಪದ್ಮರಾಜ್‌ ಆರ್‌. ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next