ಕೂಡ್ಲಿಗಿ: ಕಳೆದ 30 ವರ್ಷಗಳಿಂದ ಬತ್ತಿದ ಬಾವಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ನೀರು ಚಿಮ್ಮಿದ್ದು ಗ್ರಾಮಸ್ಥರಲ್ಲಿ ಅಚ್ಚರಿಗೆ ಕಾರಣವಾಗಿದೆ. ಗ್ರಾಮದೇವತೆ ಪವಾಡವಾಗಿದೆ ಎಂಬ ನಂಬಿಕೆ ಮಾತಿಗೆ ಸಾಕ್ಷಿಯಾಗಿರುವುದೇ ಸಮೀಪದ ಆಲೂರು ಗ್ರಾಮದ ಶ್ರೀ ಮಲಿಯಮ್ಮ ದೇವಿ ಆವರಣದ ಮುಂದಿನ ಬಾವಿ.
ಹೌದು. ಅಚ್ಚರಿ ಪಡಬೇಕಾದ ಸಂಗತಿ, ಏಕೆಂದರೆ ಕಳೆದ ನಾಲ್ಕೈದು ವರ್ಷಗಳಿಂದ ಆಲೂರು, ಕಾನಮಾಡುಗು, ಮಾಲೂರು ಗ್ರಾಮಗಳು ರೈತರು ಜಮೀನಿನಲ್ಲಿ ನೂರಾರು ಬಾವಿಗಳು ಹಾಗೂ ನೂರಾರು ಕೊಳವೆಬಾವಿ ಬತ್ತಿ ಹೋಗಿವೆ. ಅಲ್ಲದೆ ಸರ್ಕಾರ ಈ ಗ್ರಾಮಗಳಲ್ಲಿ ಕುಡಿವನೀರು ಪೂರೈಕೆಗಾಗಿ ಈ ಭಾಗದಲ್ಲಿ 50ಕ್ಕೂ ಹೆಚ್ಚು ಕೊಳವೆಬಾವಿಗಳನ್ನು 500 ರಿಂದ700 ಅಡಿ ಆಳದವರೆಗೂ ಕೊರೆಸಿದರೂ ಹನಿ ನೀರು ಚಿಮ್ಮದೆ ಇರುವಾಗ ಕೇವಲ 10 ಅಡಿ ಆಳದ ಬಾವಿಯಲ್ಲಿ ನೀರು ಪ್ರತ್ಯಕ್ಷವಾಗಿರುವುದು ಅಚ್ಚರಿ ಸಂಗತಿ. ಹೀಗಾಗಿ ಸುತ್ತಲಿನ ಹಳ್ಳಿಗರು ಬಾವಿಯತ್ತ ಅಗಮಿಸಿ ಬೆರುಗಿನಿಂದ ಕಂಡು ಸಂತೋಷದೊಂದಿಗೆ ವಾಪಾಸು ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಪವಾಡ: ಗ್ರಾಮದ ಹೊರವಲಯದಲ್ಲಿ ಶ್ರೀ ಮಲಿಯಮ್ಮ ದೇವಸ್ಥಾನವಿದ್ದು ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯ ಮಾಡಲಾಗಿತ್ತು. ಇತ್ತೀಚಿಗೆ ಗ್ರಾಮಸ್ಥರು ಸೇರಿ ಅದೇ ಸ್ಥಳದಲ್ಲಿ ನೂತನ ದೇವಸ್ಥಾನ ನಿರ್ಮಿಸಿದ್ದರು. ಆವರಣ ಸ್ವಚ್ಛ ಮಾಡಲಾಗಿತ್ತು. ಆದರೆ ನೀರಿನ ಸೌಕರ್ಯವಿರಲಿಲ್ಲ. ಈಗ ದೇವಸ್ಥಾನದ ಮುಂಭಾಗದಲ್ಲಿರುವ ಬಾವಿಯಲ್ಲಿ ನೀರು ಚಿಮ್ಮಿದ್ದು ಇದನ್ನು ದೇವಿಯ ಪವಾಡವೆಂದು ಸ್ಥಳೀಯರು ಹೇಳುತ್ತಿದ್ದಾರೆ.
ಪೂಜೆ: ಮೂರು ದಶಕದ ನಂತರ ಬಾವಿಯಲ್ಲಿ ಪ್ರತ್ಯಕ್ಷವಾಗಿರುವುದರಿಂದ ಆಲೂರು ಗ್ರಾಮಸ್ಥರು ಗಂಗೆಪೂಜೆ ಕಾರ್ಯಗಳು ನೆರೆವೇರಿಸಿದ್ದಾರೆ. ಅಲ್ಲದೆ ಸುತ್ತಲಿನ ಹಳ್ಳಿಗರು ಪೂಜೆ ಪುನಸ್ಕಾರ ಸೇವೆ ಮಾಡಲು ಅಗಮಿಸುತ್ತಿದ್ದಾರೆ.
ಹಲವು ವರ್ಷಗಳ ಕಾಲ ಬಾವಿ ನೀರಿಲ್ಲದೇ ಪಾಳುಬಿದ್ದಿತು. ಆದರೆ ಇತ್ತೀಚಿಗೆ ಮತ್ತೆ ಬಾವಿಯಲ್ಲಿ ಗಂಗೆ ಪ್ರತ್ಯಕ್ಷವಾಗಿರುವುದು ಕಂಡು ಗ್ರಾಮಸ್ಥರಲ್ಲಿ ಸಂತಸ ಉಂಟಾಗಿದೆ. ಇದು ಮಲಿಯಮ್ಮ ದೇವಿ ಪವಾಡವೆಂಬ ನಂಬಿಕೆ ಜನರಲ್ಲಿದೆ.
ಬಾಣದ ರಾಮಾಂಜನೇಯ,
ಆಲೂರು
ನಮ್ಮ ಭಾಗದಲ್ಲಿ ಅಂತರ್ಜಲ ಕುಸಿತದಿಂದ ನೂರಾರು ಜಮೀನಿನಲ್ಲಿರು ಬಾವಿಗಳು ಹಾಗೂ ಕೊಳವೆಬಾವಿ ಬತ್ತಿಹೋಗಿ ಕುಡಿವ ನೀರಿಗೂ ಪರದಾಡುತ್ತಿರುವಾಗ 10 ಅಡ್ಡಿ ಬಾವಿಯಲ್ಲಿ 6 ಅಡಿಯಷ್ಟು ನೀರು ಬಂದಿರುವುದು ಸಂತೋಷ ಇಮ್ಮಡಿಗೊಳಿಸಿದೆ.
ಕೆಂಚಮನಹಳ್ಳಿ ಬಸವರಾಜ್,
ಗ್ರಾಪಂ ಸದಸ್ಯ