ಕೂಡ್ಲಿಗಿ: ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶಾಲೆಯ ಸಮೀಪ ಅಂಡರ್ ಪಾಸ್ ನೀಡದಿದ್ದರಿಂದ ಬೇಸತ್ತ ಪೋಷಕರು ತಮ್ಮ ಮಕ್ಕಳನ್ನು ಮೂರು ದಿನಗಳಿಂದ ಶಾಲೆಗೆ ಹೋಗದಂತೆ ತಡೆ ಹಿಡಿಯುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚಿತ್ರದುರ್ಗ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಪೋಷಕರ ದೂರಾಗಿದೆ. ಹೆದ್ದಾರಿಯಲ್ಲಿ ಈಗ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಸಂದರ್ಭದಲ್ಲಿ ಅಂಡರ್ ಪಾಸ್ ಮಾಡಿಸದಿದ್ದರೆ ನಮ್ಮ ಮಕ್ಕಳು ಶಾಲೆಗೆ ಹೋಗಲು ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಎಂಬುದು ಪೋಷಕರದ್ದಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ: ಮೂರು ದಿನಗಳಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದರಿಂದ ಶಾಲೆಯ ಕೋಣೆಗಳೆಲ್ಲವೂ ಖಾಲಿ ಖಾಲಿಯಾಗಿತ್ತು. ಹೀಗಾಗಿ ಗುರುವಾರ ಪೋಷಕರ ಮನವೊಲಿಸಲು ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪೋಷಕರು ಶಾಲಾ ಮಕ್ಕಳಿಗಾಗಿ ಚಿಕ್ಕದಾಗಿಯಾದರೂ ಅಂಡರ್ ಪಾಸ್ ನೀಡಬೇಕೆಂದು ಪಟ್ಟು ಹಿಡಿದು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ಮಾಡುತ್ತಿದ್ದಾರೆ.
ಮುಖಂಡರಾದ ಜಯನಂದಸ್ವಾಮಿ, ಹುಲುಗಪ್ಪ, ಭೀಮಪ್ಪ, ತಳವಾರ ಬಸವರಾಜ, ಟಿ.ಕೆಂಚಪ್ಪ, ಬಾಗಳಿ ಚಿನ್ನಾಪ್ರಪ್ಪ, ಗ್ರಾಮದ ಮುಖಂಡರು, ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Advertisement
ಶಿವಪುರ ಗ್ರಾಮದಲ್ಲಿ ಈಗಾಗಲೇ ಹಗರಿಬೊಮ್ಮನಹಳ್ಳಿ ಹಾಗೂ ಬಂಡೇಬಸಾಪುರ ತಾಂಡದ ಕಡೆ ಹೋಗುವ ಎರಡು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಿಸಿದ್ದು, ಈ ಎರಡು ಅಂಡರ್ ಪಾಸ್‌ಗಳ ಮಧ್ಯೆ ಮತ್ತೂಂದು ಅಂಡರ್ ಪಾಸ್ ಮಾಡುವ ಮೂಲಕ ಶಾಲೆಯ ಮಕ್ಕಳಿಗೆ ಗ್ರಾಮದ 2 ಕಡೆಗೂ ಸಂಚರಿಸಲು ಅನುಕೂಲವಾಗುತ್ತದೆ ಎಂಬುದು ಇಲ್ಲಿಯ ಪೋಷಕರ ಒತ್ತಾಯವಾಗಿದೆ.
Related Articles
Advertisement