Advertisement

ಮಳೆಗೆ ಬೆಳೆ ನೀರು ಪಾಲು: ಪರಿಹಾರಕ್ಕೆ ರೈತರ ಒತ್ತಾಯ

04:45 PM Oct 30, 2019 | Naveen |

ಕೂಡ್ಲಿಗಿ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಹಾಗಾಗಿ ಉಪಮುಖ್ಯಮಂತ್ರಿಗಳು ಹಾಗೂ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಈ ಕೂಡಲೇ ತ್ವರಿತವಾಗಿ ರೈತರ ನಷ್ಟದ ಅಂದಾಜು ಮಾಡಿ ಪರಿಹಾರ ನೀಡಬೇಕು
ಹಾಗೂ ಮನೆಯನ್ನು ಕಳೆದುಕೊಂಡವರಿಗೆ ಮನೆಯನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ ಅವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ರೈತರು ಸಾಲ ಮಾಡಿ ಜೋಳ, ಮೆಕ್ಕೆಜೋಳ, ಸಜ್ಜೆ, ಮಿಡಿಸೌತೆ, ಮೆಣಸಿನಕಾಯಿ, ಪಪ್ಪಾಯಿ, ಈರುಳ್ಳಿ, ಟೊಮಟೋ ಮುಂತಾದ ಬೆಳೆಗಳನ್ನು ಬೆಳೆದಿದ್ದರು. ಅಲ್ಪಸ್ವಲ್ಪ ಮಳೆಗೆ ಫಸಲು ಬಂದಿತ್ತು. ಆದರೆ ಫಸಲು ಬರುವ ಸಮಯದಲ್ಲಿ ಚಂಡಮಾರುತ ಮಳೆಗೆ ಎಲ್ಲ ಬೆಳೆಗಳು ನೆಲಸಮವಾಗಿ ಕೊಳೆತು ಫಸಲು ರೈತರ ಕೈಗೆ ಬರದೇ ರೈತರ ಬದುಕೀಗ ಅತಂತ್ರ ಪರಿಸ್ಥಿತಿಯಾಗಿದೆ.

ಸರ್ಕಾರ ಪ್ರತಿ ಎಕರೆಗೆ 50 ಸಾವಿರ ಪರಿಹಾರವನ್ನು ನೀಡಬೇಕು. ಮಳೆಯಿಂದ ಸಂಪೂರ್ಣ ಮನೆಯನ್ನು ಕಳೆದುಕೊಂಡ ಸಂತ್ರಸ್ತರಿಗೆ ಒಂದು ಮನೆಗೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ದೇವರಮನಿ ಮಹೇಶ್‌ ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತಸಂಘಟನೆಯ ಕೂಡ್ಲಿಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್‌. ಪಕ್ಕೀರಪ್ಪ, ಜಿಲ್ಲಾ ಉಪಾಧ್ಯಕ್ಷ ಎಂ. ಪ್ರಕಾಶ, ಎಂ. ಸೋಮಣ್ಣ, ತಾಲೂಕು ರೈತ ಸಂಘದ ಗೌರವಾಧ್ಯಕ್ಷ ವೀರಭದ್ರಪ್ಪ, ಸಂಡೂರು ತಾಲೂಕು ಅಧ್ಯಕ್ಷ ಡಿ. ಹನುಮಂತಪ್ಪ, ಹಸಿರು ಸೇನೆ ಕೂಡ್ಲಿಗಿ ಪಟ್ಟಣ ಅಧ್ಯಕ್ಷ ಮೌಲಾ ಹುಸೇನ್‌, ಖಜಾಂಚಿ ರಾಜಸಾಬ್‌, ರೈತ ಮುಖಂಡರಾದ ಬೊಪ್ಪಲಾಪುರ ಪರುಸಪ್ಪ, ಎಸ್‌. ಬೊಮ್ಮಪ್ಪ, ಎ.ಷಣ್ಮುಖಪ್ಪ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next