ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನ ದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ ಸ್ಪರ್ಧಾಕೂಟ “ಕುಡ್ಲದ ಪಿಲಿ ಪರ್ಬ 2022′ ಅ. 2ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ.
ಸ್ಪರ್ಧೆಯ ಕುರಿತು ವೇದವ್ಯಾಸ ಕಾಮತ್ ಮಾಹಿತಿ ನೀಡಿದರು. ಬೆಳಗ್ಗೆ 9.30ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದ್ದು ಮಧ್ಯರಾತ್ರಿಯವರೆಗೆ ಮುಂದುವರಿಯಲಿದೆ. ಈಗಾಗಲೇ 12 ತಂಡಗಳು ನೋಂದಣಿ ಮಾಡಿಕೊಂಡಿವೆ. ಒಂದು ತಂಡದಲ್ಲಿ 15 ಮಂದಿ ವೇಷಧಾರಿಗಳು ಇರಲಿದ್ದಾರೆ. ಅಕ್ಕಿಮುಡಿ ಎತ್ತಿ ಹಾಕುವುದು, ಪಲ್ಟಿ ಸೇರಿದಂತೆ ಒಂದೊಂದು ಪ್ರಯೋಗಕ್ಕೂ ಪ್ರತ್ಯೇಕ ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತೀ ತಂಡಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದರು.
ಮೈದಾನದಲ್ಲಿ ತಿಂಡಿ-ತಿನಿಸು ಸೇರಿದಂತೆ ವಿವಿಧ ಮಾರಾಟ ಮಳಿಗೆಗಳು ಇರಲಿದ್ದು, ಸಾರ್ವಜನಿಕರಿಗೆ ಮುಖ ಪೈಂಟಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ. ಹುಲಿ ಟೊಪ್ಪಿ ಮಾರಾಟ, ಮುಖವಾಡ, ಕೀ ಚೈನ್ ಮಾರಾಟ ಇರಲಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಬೆಳಗ್ಗೆ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಶಾಸಕರು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು, ಕೈಗಾರಿ ಕೋದ್ಯಮಿಗಳು, ಧಾರ್ಮಿಕ ಮುಖಂಡರು, ಸರಕಾರಿ ಅಧಿಕಾರಿಗಳು ಭಾಗವಹಿ ಸಲಿ ದ್ದಾರೆ. ವಿವಿಐಪಿ, ವಿಐಪಿ ಸೇರಿದಂತೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಮೈದಾನ ದಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
Related Articles
ಬೃಹತ್ ಗ್ಯಾಲರಿ
ಸುಮಾರು 3,500 ಮಂದಿಗೆ ಕುಳಿತುಕೊಳ್ಳಲು ಅವಕಾಶ ಇರುವ ಬೃಹತ್ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ವಿನೂತನ ಕಲ್ಪನೆಯ ಎತ್ತರದ ಸ್ಟೇಜ್ ನಿರ್ಮಾಣ ಮಾಡಲಾಗುತ್ತಿದ್ದು, 15,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ವಿಜೇತರಿಗೆ ರಾಜ್ಯ
ಮಟ್ಟದಲ್ಲಿ ಅವಕಾಶ
ಸ್ಪರ್ಧೆಯಲ್ಲಿ ಗೆದ್ದ ತಂಡಕ್ಕೆ ರಾಜ್ಯ ಮಟ್ಟದ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ತಂಡಕ್ಕೆ ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳ ಜತೆಗೆ ವಿಶೇಷ ಗೌರವ ಧನ, ಟ್ರೋಫಿ ನೀಡಲಾಗುತ್ತದೆ. 8 ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿ ನೀಡಲಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.