ಮಡಿಕೇರಿ:ಕೂಡಿಗೆ ಸೈನಿಕ ಶಾಲೆಯಲ್ಲಿ ವಾರ್ ಮೆಮೋರಿಯಲ್ ಮತ್ತು ವಾಲ್ ಆಫ್ ಹೀರೋಸ್ ಸ್ಮಾರಕ ಉದ್ಘಾಟನೆಗೊಂಡಿದೆ.
ಭಾರತೀಯ ಸೈನಿಕರು ಯದ್ಧಭೂಮಿಯಲ್ಲಿ ತೋರಿಸಿದ ಅಪ್ರತಿಮ ಶೌರ್ಯವನ್ನು ಮನದಟ್ಟು ಮಾಡಿಕೊಡುವುದು ಹಾಗೂ ಹುತಾತ್ಮರಾದ ಅವರೆಲ್ಲರಿಗೂ ಗೌರವವನ್ನು ಸೂಚಿಸುವ ಗುಣವನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವ ಉದ್ದೇಶದಿಂದ ಸ್ಮಾರಕವನ್ನು ನಿರ್ಮಿಸಲಾಗಿದೆ.
1962ರಲ್ಲಿ ಘಟಿಸಿದ ಇಂಡೋ-ಚೈನಾ ಯುದ್ಧ ಮತ್ತು 1947, 1965 ಹಾಗೂ 1971ರಲ್ಲಿ ಘಟಿಸಿದ ಇಂಡೋ-ಪಾಕ್ ಯುದ್ಧ ಹಾಗೂ 1999ರ ಕಾರ್ಗಿಲ್‌ನಲ್ಲಿ ಘಟಿಸಿದ ಆಪರೇಷನ್ ವಿಜಯ್‌ನಲ್ಲಿ ಅಮರರಾದ ವೀರಯೋಧರ ಸ್ಮರಣೆಯನ್ನು ಸ್ಮಾರಕ ಎತ್ತಿ ಹಿಡಿದಿದೆ. ಈ ಸ್ಮಾರಕದಲ್ಲಿ 21 ಹುತಾತ್ಮರಾದ ಪರಮವೀರಚಕ್ರ ವಿಜೇತ ವೀರಯೋಧರ ಭಾವಚಿತ್ರಗಳು, ಕಲ್ಲಿನ ಕೆತ್ತನೆ ಮತ್ತು ವೀರಯೋಧರ ಸಂಕೇತ ಹಾಗೂ ಯುದ್ಧಭೂಮಿಯಲ್ಲಿ ಇವರು ಹೇಳಿದ ಪ್ರೇರೇಪಣ ಮಾತುಗಳನ್ನೊಳಗೊಂಡಿದೆ. ಸ್ಮಾರಕ ಯುವಕರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸುವಂತಿದೆ ಎಂದು ಅತಿಥಿಗಳು ಬಣ್ಣಿಸಿದರು.
ಗೌರವ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಏರ್ ಮಾರ್ಷಲ್ ಕೆ.ಸಿ.ನಂದಾಕಾರ್ಯಪ್ಪ, ವಿದ್ಯಾರ್ಥಿಗಳಲ್ಲಿ ಸೇನಾಸ್ಫೂರ್ತಿಯನ್ನು ತುಂಬುತ್ತಿರುವುದು ಶ್ಲಾಘನೀಯವೆಂದರು. ವಿದ್ಯಾರ್ಥಿಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಸಿಬ್ಬಂದಿ ವರ್ಗದ ಪಾತ್ರ ಮಹತ್ವದ್ದು ಎಂದು ಪ್ರಶಂಸಿಸಿದರು.
ಮುಖ್ಯ ಅತಿಥಿಗಳಾಗಿ ಏರ್ ಮಾರ್ಷಲ್ ಆರ್ ಕೆ ಎಸ್ ಬಧೂರಿಯಾ ಪಿ ವಿ ಎಸ್ ಎಂ, ಎ ವಿ ಎಸ್ ಎಂ, ವಿ ಎಂ, ಎ ಡಿ ಸಿ, ಏರ್ ಆಫೀಸರ್, ಕಮಾಂಡಿಂಗ್-ಇನ್-ಚೀಫ್, ಟ್ರೆçನಿಂಗ್ ಕಮಾಂಡ್, ಭಾರತೀಯ ವಾಯು ಪಡೆ, ಬೆಂಗಳೂರು ಇವರು ಆಗಮಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಶಾಲೆಯ ಅಶ್ವದಳವು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಶಾಲೆಯ ಪೆರೇಡ್ ಮೈದಾನಕ್ಕೆ ಕೊಂಡೊಯ್ದಿತು.
ಅನಂತರ ಶಾಲೆಯ ವಿದ್ಯಾರ್ಥಿಗಳು ತಮ್ಮ ಆಕರ್ಷಕ ಪಥಸಂಚಲನದ ಮೂಲಕ ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ಮುಖ್ಯ ಅತಿಥಿಗಳು ವಾರ್ ಮೆಮೋರಿಯಲ್ ಮತ್ತು ವಾಲ್ ಆಫ್ ಹೀರೋಸ್ ಸ್ಮಾರಕವನ್ನು ಉದ್ಘಾಟಿಸಿದರು.