ಬಳ್ಳಾರಿ : ಸರ್ಕಾರಿ ಕಚೇರಿಗೆ ಬೀಗ ಹಾಕಿ, ಅಧಿಕಾರಿ, ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಕುಡತಿನಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ವಿ.ರಾಜಶೇಖರ, ಸದಸ್ಯರಾದ ಕನಕೇರಿ ಪಂಪಾಪತಿ ಮತ್ತು ಜೆ.ಎಸ್.ವೆಂಕಟರಮಣ ಬಾಬು ಅವರ ಸದಸ್ಯತ್ವವನ್ನು ಉಚ್ಛಾಟಿಸಿ ಸಹಾಯಕ ಆಯುಕ್ತ ಡಾ.ಆಕಾಶ್ ಶಂಕರ್ ಅವರು ಮೇ ೭ ರಂದು ಆದೇಶ ಹೊರಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಕುಡತಿನಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಸತ್ಯನಾರಾಯಣ ಅವರು ತಾವು ಹೇಳಿದಂತೆ ಕೇಳುತ್ತಿಲ್ಲ ಎಂದು ಕಳೆದ 2021 ರ ಫೆಬ್ರವರಿ 24 ರಂದು ಪಟ್ಟಣ ಪಂಚಾಯ್ತಿ ಕಚೇರಿಗೆ ಪಪಂ ಅಧ್ಯಕ್ಷ ವಿ.ರಾಜಶೇಖರ, ಸದಸ್ಯರಾದ ಕನಕೇರಿ ಪಂಪಾಪತಿ ಮತ್ತು ಜೆ.ಎಸ್.ವೆಂಕಟರಮಣ ಬಾಬು ಅವರು ಬೀಗ ಹಾಕಿದ್ದರು.
ಇದರಿಂದಾಗಿ ಅಂದು ಮಧ್ಯಾಹ್ನ ಒಂದು ಗಂಟೆವರೆಗೆ ಕಚೇರಿ ಸಿಬ್ಬಂದಿ ಹೊರಗಡೆಯೇ ಇರಬೇಕಾಯ್ತು. ಅಲ್ಲದೆ ಕಚೇರಿ ಕೆಲಸಕ್ಕೆ ಬಂದ ಜನರು ತಮ್ಮ ಕೆಲಸಗಳಾಗದೆ ಹಿಂದುರಿಗಬೇಕಾಯ್ತು. ಈ ರೀತಿ ಸಮಸ್ಯೆ ಉಂಟು ಮಾಡಿದ್ದಕ್ಕೆ ಬೀಗ ಹಾಕಿದವರ ವಿರುದ್ದ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮತ್ತು ಕುಡಿತಿನಿ ಪೊಲೀಸರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಾದ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ವಿ.ರಾಜಶೇಖರ, ಸದಸ್ಯರಾದ ಕನಕೇರಿ ಪಂಪಾಪತಿ ಮತ್ತು ಜೆ.ಎಸ್.ವೆಂಕಟರಮಣ ಬಾಬು ಅವರು ತಾವು ಸಾರ್ವಜನಿಕ ಹಿತದೃಷ್ಟಿಯಿಂದ ಅಚಾತುರ್ಯವಾಗಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ : ಜಗದ್ವಂದ್ಯ ಭಾರತ ನಿರ್ಮಾಣ ಅಂತ್ಯೋದಯದ ಕಲ್ಪನೆ: ನಳಿನ್ ಕುಮಾರ್
ಅದಕ್ಕಾಗಿ ಸಾರ್ವಜನಿಕ ಕಚೇರಿ, ಅಧಿಕಾರಿ ಮತ್ತು ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಕ್ಕಾಗಿ ರಾಜ್ಯದ ಪುರಸಭೆ ಕಾಯ್ದೆ 1964 ರ ಕಲಂ 42(1) ಮತ್ತು 42(2) ರನ್ವಯ ಅವರುಗಳ ಸದಸ್ಯತ್ವವನ್ನು ಉಚ್ಛಾಟಿಸಿ ಮೇ 7 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.